ಸ್ಕೂಟರ್‌ನಲ್ಲಿ ಮತಜಾಗೃತಿ ಮೂಡಿಸಿದ ಡಿಸಿ

| Published : Apr 27 2024, 01:24 AM IST

ಸಾರಾಂಶ

ಜಿಲ್ಲೆಯ ಎಲ್ಲ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದು ಡಿಸಿ ಗಂಗೂಬಾಯಿ ಮಾನಕರ ಮನವಿ ಮಾಡಿದರು.

ಕಾರವಾರ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ತಮ್ಮ ಹವಾನಿಯಂತ್ರಿತ ಕಾರನ್ನು ಬಿಟ್ಟು, ಬಿರುಬಿಸಿಲಿನಲ್ಲಿ ಹೆಲ್ಮೆಟ್ ಧರಿಸಿ ಮತದಾನ ಜಾಗೃತಿಯ ಪ್ರದರ್ಶನ ಫಲಕದೊಂದಿಗೆ ಸ್ಕೂಟರ್ ಏರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಬೈಕ್ ಜಾಥಾದಲ್ಲಿ ಎಲ್ಲರ ಗಮನ ಸೆಳೆದರು.

ಜಿಲ್ಲೆಯಲ್ಲಿ ಮೇ 7ರಂದು ನಡೆಯುವ ಲೋಕಸಭಾ ಚುನಾಣೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಸ್ವೀಪ್ ಕಾರ್ಯಕ್ರಮದಡಿ ಶುಕ್ರವಾರ ಜಿಪಂ ಕಚೇರಿಯ ಆವರಣದಿಂದ ಆಯೋಜಿಸಿದ್ದ ಮೋಟಾರ್ ಸೈಕಲ್(ಬೈಕ್) ಜಾಥಾಕ್ಕೆ ಸ್ವೀಪ್ ಬಾವುಟ ತೋರುವ ಮೂಲಕ ಜಿಲ್ಲಾಧಿಕಾರಿ ಗಂಗೂಬಾಯಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಡಿಸಿ, ಜಿಲ್ಲೆಯ ಎಲ್ಲ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು. ಜಿಲ್ಲೆಯ ಯಾವುದೇ ಅರ್ಹ ಮತದಾರರು ಮತದಾನದಿಂದ ಹೊರಗುಳಿಯಬಾರದು. ಜಿಲ್ಲೆಯ 85 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗಾಗಿ ಈಗಾಗಲೇ ಆರಂಭಿಸಿರುವ ಮನೆಯಿಂದಲೇ ಮತದಾನ ಕಾರ್ಯಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ಮೊದಲ ದಿನವೇ ಶೇ. 50ಕ್ಕೂ ಹೆಚ್ಚು ಮತದಾನ ನಡೆದಿದೆ. ಇದೇ ರೀತಿಯ ಉತ್ಸಾಹವನ್ನು ಮೇ 7ರಂದು ನಡೆಯುವ ಮತದಾನ ದಿನದಂದು ಜಿಲ್ಲೆಯ ಎಲ್ಲ ಸಾರ್ವಜನಿಕರು ತೋರುವ ಮೂಲಕ ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ಮತದಾನ ನಡೆದ ಜಿಲ್ಲೆ ಎಂಬ ದಾಖಲೆ ಬರೆಯುವಂತಾಗಬೇಕು ಎಂದರು.

ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ, ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಮಾತನಾಡಿ, ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾದ್ಯಂತ ಮತದಾನ ಜಾಗೃತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಅರ್ಹ ಮತದಾರರು ತಮ್ಮ ಕುಟುಂಬ ಸಮೇತ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ, ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಲು ಸಹಕರಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 150ಕ್ಕೂ ಅಧಿಕ ಜನರು ಬೈಕ್ ಗಳಲ್ಲಿ ಜಾಥಾದಲ್ಲಿ ಸಂಚರಿಸಿದರು.ಮೋಟಾರ್ ಸೈಕಲ್(ಬೈಕ್) ಜಾಥಾ ಜಿಪಂನಿಂದ ಆರಂಭವಅಗಿ ಕೋರ್ಟ್ ರೋಡ್, ಗೀತಾಂಜಲಿ ಚಿತ್ರ ಮಂದಿರ, ಬಾಂಡಿಶಿಟ್ಟಾ, ಟೋಲ್ ನಾಕಾ, ಕಾಳಿ ರೀವರ್ ಗಾರ್ಡನ್ ವೃತ್ತ, ಕಾರವಾರ ಕೋಡಿಬಾಗ ರಸ್ತೆ ಮೂಲಕ ಪುನಃ ಜಿಪಂಗೆ ಬಂದಿತು.