ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಶಾಸಕ ಟಿ.ರಘುಮೂರ್ತಿ ಶುಕ್ರವಾರ ಆಯ್ಕೆಯಾಗಿದ್ದು ನಿರ್ದೇಶಕರು ಅಭಿನಂದಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ (ಡಿಸಿಸಿ) ನೂತನ ಅಧ್ಯಕ್ಷರಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವಿರೋಧ ಆಯ್ಕೆಯಾಗಿದ್ದಾರೆ.ಸಚಿವ ಡಿ.ಸುಧಾಕರ್ ಅವರ ಅಕಾಲಿಕ ನಿಧನದ ಹಿನ್ನಲೆಯಲ್ಲಿ, ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಶುಕ್ರವಾರ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಶಾಸಕ ಟಿ.ರಘುಮೂರ್ತಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಪ್ ಘೋಷಿಸಿದರು. ರಘುಮೂರ್ತಿ ಅವರು ಚಿತ್ರದುರ್ಗ ತಾಲೂಕಿನ ಕಡಬನಕಟ್ಟೆ ಗ್ರಾಮದವರಾದ್ದರಿಂದ ಸಹಜವಾಗಿಯೇ ತುರುವನೂರು ಹೋಬಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಒಲಿದಂತಾಗಿದೆ.
ಬ್ಯಾಂಕಿನ ಪ್ರಸ್ತುತ ಆಡಳಿತ ಮಂಡಳಿಗೆ ಇನ್ನು 3 ವರ್ಷ 4 ತಿಂಗಳ ಅಧಿಕಾರಾವಧಿ ಬಾಕಿ ಉಳಿದಿದೆ. ಅಂದರೆ 2029ರ ಸೆಪ್ಟೆಂಬರ್ ತಿಂಗಳವರೆಗೆ ಈ ಬ್ಯಾಂಕ್ ಆಡಳಿತ ಮಂಡಳಿಯ ಅವಧಿ ಇರಲಿದ್ದು, ಅಲ್ಲಿಯವರೆಗೂ ರಘುಮೂರ್ತಿ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಅವಿರೋಧ ಆಯ್ಕೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬ್ಯಾಂಕ್‍ನ ಪ್ರಗತಿ ಹಾಗೂ ರೈತರ ಹಿತರಕ್ಷಣೆಗೆ ಬದ್ಧವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.1955ರಲ್ಲಿ ಪ್ರಾರಂಭವಾದ ಡಿಸಿಸಿ ಬ್ಯಾಂಕ್, ಕಳೆದ ಸುಮಾರು 70 ವರ್ಷಗಳಿಂದ ಜಿಲ್ಲೆಯ ರೈತಾಪಿ ವರ್ಗದ ಹಿತ ಕಾಯುವಲ್ಲಿ ಯಶಸ್ವಿಯಾಗಿದೆ. ರಾಜ್ಯದಲ್ಲಿರುವ 21 ಡಿಸಿಸಿ ಬ್ಯಾಂಕ್‍ಗಳ ಪೈಕಿ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅತ್ಯುತ್ತಮ ಆರ್ಥಿಕ ಪರಿಸ್ಥಿತಿಯಲ್ಲಿದೆ. ಜಿಲ್ಲಾ ಕೇಂದ್ರದ ಮುಖ್ಯ ಕಚೇರಿ ಸೇರಿದಂತೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 22 ಶಾಖೆಗಳನ್ನು ಬ್ಯಾಂಕ್ ಹೊಂದಿದೆ. ಬ್ಯಾಂಕ್‍ನಲ್ಲಿ ಒಟ್ಟು 160 ಮಂಜೂರಾದ ಹುದ್ದೆಗಳಿದ್ದು, ಸದ್ಯ 151 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ 9 ಹುದ್ದೆಗಳು ಮಾತ್ರ ಖಾಲಿ ಇವೆ.
ಹಿರಿಯೂರು, ಮೊಳಕಾಲ್ಮುರು ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ಬ್ಯಾಂಕ್ ಸ್ವಂತ ಕಟ್ಟಡ ಹೊಂದಿದೆ. ಒಟ್ಟು 422 ಸಹಕಾರ ಸಂಘಗಳು ಬ್ಯಾಂಕ್‍ನ ಸದಸ್ಯತ್ವ ಹೊಂದಿವೆ. ಬ್ಯಾಂಕ್‍ನ ಒಟ್ಟು ಶೇರು ಬಂಡವಾಳ 106.26 ಕೋಟಿಗಳಾಗಿದ್ದು, ಇದರಲ್ಲಿ ಸರ್ಕಾರದ ಪಾಲು 1.41 ಕೋಟಿಗಳಾಗಿದೆ ಎಂದು ತಿಳಿಸಿದರು.ಕಳೆದ 2025-26ನೇ ಆರ್ಥಿಕ ವರ್ಷದಲ್ಲಿ ಕೃಷಿ ಉದ್ದೇಶಗಳಿಗಾಗಿ ರಾಜ್ಯ ಸರ್ಕಾರದ ಶೂನ್ಯ ಬಡ್ಡಿದರ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಜಿಲ್ಲೆಯ 56,263 ರೈತರಿಗೆ ಒಟ್ಟು 496 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮಾಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಒಟ್ಟಾರೆಯಾಗಿ 115 ಕೋಟಿ ರು. ಸಾಲ ನೀಡಲಾಗಿದೆ. ರಾಜ್ಯ ಸರ್ಕಾರದ ಯೋಜನೆ ಅಡಿಯಲ್ಲಿ ಶೂನ್ಯ ಬಡ್ಡಿ ದರದಲ್ಲಿ 619 ರೈತರಿಗೆ 35 ಕೋಟಿ ರು. ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಕಳೆದ ವರ್ಷ ಬ್ಯಾಂಕ್ ಒಟ್ಟು 106 ಕೋಟಿ ರು. ವಹಿವಾಟು ನಡೆಸಿದ್ದು, ಎಲ್ಲಾ ವೆಚ್ಚಗಳನ್ನು ಕಳೆದು ಸುಮಾರು 10 ಕೋಟಿ ರು. ನಿವ್ವಳ ಲಾಭ ಗಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯು ಮಧ್ಯ ಕರ್ನಾಟಕದ ಬರಪೀಡಿತ ಮತ್ತು ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡದೆ, ಬ್ಯಾಂಕ್‍ನ ಭದ್ರತೆಯನ್ನು ಕಾಯ್ದುಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಕ್ರಿಕೆಟ್‍ನಲ್ಲಿ ವಿಕೆಟ್ ಇದ್ದರೆ ಮಾತ್ರ ರನ್ ಗಳಿಸಲು ಸಾಧ್ಯವಿರುವಂತೆ, ಬ್ಯಾಂಕ್ ಉಳಿದರೆ ಮಾತ್ರ ರೈತರಿಗೆ ಸೇವೆ ನೀಡಲು ಸಾಧ್ಯ ಎಂದು ತಿಳಿಸಿದ ಅವರು, ನಮ್ಮ ಮೊದಲ ಆದ್ಯತೆ ರೈತರ ಕಲ್ಯಾಣವೇ ಆಗಿದೆ. ಆದರೆ, ಬ್ಯಾಂಕಿನ ಆರ್ಥಿಕ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಕೃಷಿಯೇತರ ಸಾಲಗಳನ್ನು ನೀಡಲು ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.