ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಬಳಿಕ, ಕಣದಲ್ಲಿ ಹಾಲಿ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥಗೌಡ, ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಒಟ್ಟು 28 ಮಂದಿ ಕಣದಲ್ಲಿ ಉಳಿದಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕ ಸ್ಥಾನಕ್ಕೆ ಸಲ್ಲಿಕೆಯಾಗಿದ್ದ ನಾಮಪತ್ರ ಹಿಂತೆಗೆಯಲು ಶನಿವಾರ ಕೊನೆಯ ದಿನವಾಗಿದ್ದು, 7 ಮಂದಿ ಹಿಂಪಡೆದಿದ್ದಾರೆ.

ಕಣದಲ್ಲಿ ಹಾಲಿ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥಗೌಡ, ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಒಟ್ಟು 28 ಮಂದಿ ಕಣದಲ್ಲಿ ಉಳಿದಿದ್ದಾರೆ.

ಒಟ್ಟು 13 ನಿರ್ದೇಶಕ ಸ್ಥಾನಕ್ಕೆ 35 ಮಂದಿ ನಾಮಪತ್ರ ಸಲ್ಲಿಸಿದ್ದರು. ಎಲ್ಲ ನಾಮಪತ್ರಗಳು ಊರ್ಜಿತವಾಗಿದ್ದವು. ನಾಮಪತ್ರ ಹಿಂತೆಗೆಯಲು ಶನಿವಾರ ಕೊನೆಯ ದಿನವಾಗಿದ್ದು, ಹಿರಿಯ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಆರ್. ಸಿ.ನಾಯ್ಕ್, ದುದ್ದೇಶ್, ಹೆಚ್.ಎನ್.ವಿಜಯಕುಮಾರ್, ಹೆಚ್.ಮಲ್ಲಿಕಾರ್ಜುನ, ವಿಜಯ ಕುಮಾರ್ [ದನಿ] ಹೆಚ್.ಜಿ.ಮಲ್ಲಯ್ಯ ನಾಮಪತ್ರ ಹಿಂತೆಗೆದಿದ್ದಾರೆ.

ಈ ಬಾರಿ ಮೇಲುಗೈ ಸಾಧಿಸಲು ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಹಣಾಹಣಿ ನಡೆಸಲಿದೆ. ಹಾಲಿ ಅಧ್ಯಕ್ಷರಾಗಿರುವ ಆರ್.ಎಂ.ಮಂಜುನಾಥಗೌಡ ಅವರು ಕಳೆದ ಎರಡೂವರೆ ದಶಕದಿಂದ ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದು, ಬಿಜೆಪಿ ನಾಯಕರ ಹಲವು ಪ್ರಯತ್ನಗಳು ನಡುವೆಯೂ ಇವರ ಬಿಗಿ ಹಿಡಿತ ಸಡಿಲವಾಗಿ ರಲಿಲ್ಲ. ಈ ಬಾರಿ ಕಾಂಗ್ರೆಸ್ ಮುಖಂಡರ ನಡುವೆಯೇ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗಿದ್ದು, ಇದರ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ.

ಜೂನ್ 28 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಬಾರಿಯ ಚುನಾವಣೆ ರೋಚಕವಾಗಿರುವುದಂತೂ ನಿಜ.

ಪರಮೇಶ್‌ ಅವಿರೋಧ ಆಯ್ಕೆ: ಶಿವಮೊಗ್ಗ: ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಬಳಿಕ ಹೊಸನಗರ ತಾಲೂಕಿನ ಆರ್‌.ಎಂ.ಮಂಜುನಾಥ್‌ ಗೌಡ ಬಣದ ಪರಮೇಶ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.