ಸಾರಾಂಶ
ಸದಾನಂದ ಮಜತಿ
ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಒಂದು ರೀತಿ ಜಿಲ್ಲೆಯಲ್ಲಿ ಯಾರು ಪ್ರಾಬಲ್ಯರು ಎಂಬ ಪ್ರಶ್ನೆಗೆ ಇದೊಂದು ಮಿನಿ ಅಖಾಡವಾಗಿ ಉತ್ತರಿಸಬಲ್ಲಷ್ಟು ಶಕ್ತ ಚುನಾವಣೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆರಂಭದಲ್ಲಿ ಜಾರಕಿಹೊಳಿ ಬ್ರದರ್ಸ್‌ಗೆ ಎದುರಾಳಿಗಳೇ ಇಲ್ಲ. ಏಕ ಮಾರ್ಗ ಚುನಾವಣೆ ಎಂದೇ ಬಿಂಬಿತಗೊಂಡಿತ್ತು. ಅದರಂತೆ ಬಾಲಚಂದ್ರ ಜಾರಕಿಹೊಳಿ ಮುಂದಾಳತ್ವದಲ್ಲಿ 9 ನಿರ್ದೇಶಕರ ಅವಿರೋಧ ಆಯ್ಕೆಗೆ ಕಸರತ್ತು ಕೂಡ ನಡೆದಿತ್ತು. ಆದರೆ ಈಗ ಅಥಣಿ ಶಾಸಕ ಲಕ್ಷ್ಮಣ ಸವದಿ ಅಖಾಡಕ್ಕಿಳಿದು ರಮೇಶ ಕತ್ತಿ ಜೊತೆ ಕೈಜೋಡಿಸಿದ ಬಳಿಕ ಚುನಾವಣೆ ರೋಚಕ ತಿರುವು ಪಡೆದುಕೊಂಡಿದೆ.
ಒಂದಿಲ್ಲೊಂದು ಕಾರಣದಿಂದ ಈ ಹಿಂದೆ ಜಾರಕಿಹೊಳಿ ಸಹೋದರರಿಂದ ಸೋಲನುಭವಿಸಿದ ಜಿಲ್ಲೆಯ ಪ್ರಮುಖ ನಾಯಕರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಮಾತ್ರವಲ್ಲ, ಜಾರಕಿಹೊಳಿ ಕುಟುಂಬ ಒಂದನ್ನೇ ಗುರಿಯಾಗಿಸಿಕೊಂಡು, ತಮ್ಮ ತಂತ್ರಗಾರಿಕೆಯನ್ನು ಅಣಿಗೊಳಿಸುತ್ತಿದ್ದಾರೆ. ಕತ್ತಿ-ಸವದಿ ಜೊತೆಗೆ ಮಾಜಿ ಸಚಿವ ಎ.ಬಿ.ಪಾಟೀಲ, ಬೆಮುಲ್ ಮಾಜಿ ಅಧ್ಯಕ್ಷ ವಿವೇಕರಾವ್ ಪಾಟೀಲ, ಮಾಜಿ ಸಂಸದ ಅಮರಸಿಂಹ ಪಾಟೀಲ, ಪ್ರತಾಪರಾವ್ ಪಾಟೀಲ, ಮಹೇಶ ತಮ್ಮಣ್ಣನವರ ಸೇರಿದಂತೆ ಮತ್ತಷ್ಟು ಅಸಮಾಧಾನಿತ ನಾಯಕರು ಜಾರಕಿಹೊಳಿ ಭದ್ರಕೋಟೆ ಬೇಧಿಸುವ ರಣತಂತ್ರ ರೂಪಿಸುತ್ತಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.ಡಿಸಿಸಿಯಲ್ಲಿ ಹೇಗಿದೆ? ಏನೇನು ಲೆಕ್ಕಾಚಾರ?:
ಡಿಸಿಸಿ ಬ್ಯಾಂಕ್‌ಗೆ ಈಗಾಗಲೇ 9 ಜನ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ. ಸವದತ್ತಿಯಿಂದ ವಿರುಪಾಕ್ಷ ಮಾಮನಿ, ಕಾಗವಾಡದಿಂದ ರಾಜು ಕಾಗೆ, ಚಿಕ್ಕೋಡಿಯಿಂದ ಗಣೇಶ ಹುಕ್ಕೇರಿ, ಸವದತ್ತಿ ಕ್ಷೇತ್ರದಿಂದ ವಿಶ್ವಾಸ ವೈದ್ಯ, ಬೆಳಗಾವಿ ಗ್ರಾಮೀಣದಿಂದ ರಾಹುಲ್ ಜಾರಕಿಹೊಳಿ, ಗೋಕಾಕದಿಂದ ಅಮರನಾಥ ಜಾರಕಿಹೊಳಿ, ಮೂಡಲಗಿಯಿಂದ ನೀಲಕಂಠ ಕಪ್ಪಲಗುದ್ದಿ, ಖಾನಾಪುರ ಕ್ಷೇತ್ರದಿಂದ ಅರವಿಂದ ಪಾಟೀಲ, ವಿವಿಧೋದ್ದೇಶ ಸಹಕಾರಿ ಸಂಘಗಳಿಂದ ಚನ್ನರಾಜ ಹಟ್ಟಿಹೊಳಿ ಆಯ್ಕೆಯಾಗಿದ್ದಾರೆ.ಪ್ರಸ್ತುತ ನಮ್ಮ ಬಣದಿಂದ 13 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಅವಿರೋಧ ಆಯ್ಕೆಯಾದ 9 ಜನ ನಿರ್ದೇಶಕರು ತಮ್ಮವರೇ ಎಂದು ಜಾರಕಿಹೊಳಿ ಪೆನಲ್‌ನವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, 9 ನಿರ್ದೇಶಕರಲ್ಲಿ ಪ್ರಮುಖವಾಗಿ ಲಿಂಗಾಯತ ನಿರ್ದೇಶಕರನ್ನು ತಮ್ಮತ್ತ ಸೆಳೆಯಲು ಕತ್ತಿ-ಸವದಿ ಬಣ ರಣತಂತ್ರ ರೂಪಿಸುತ್ತಿದೆ ಎನ್ನಲಾಗಿದೆ. 9 ಜನರಲ್ಲಿ ಚಿಕ್ಕೋಡಿಯ ಗಣೇಶ ಹುಕ್ಕೇರಿ ತಟಸ್ಥ ಬಣ ಎಂದು ಹೇಳಿಕೊಂಡಿದ್ದರೆ, ಕಾಗವಾಡದ ರಾಜು ಕಾಗೆ ಲಕ್ಷ್ಮಣ ಸವದಿ ಅವರ ಆಪ್ತರು. ಸವದತ್ತಿಯ ವಿರುಪಾಕ್ಷ ಮಾಮನಿ ಮಾಜಿ ಸಿಎಂ ಬಿಎಸ್‌ವೈ ಕಟ್ಟಾ ಅಭಿಮಾನಿ.
ಇನ್ನು ಚುನಾವಣೆ ನಡೆಯಲಿರುವ ಕ್ಷೇತ್ರಗಳಾದ ಹುಕ್ಕೇರಿಯಿಂದ ರಮೇಶ ಕತ್ತಿ, ಅಥಣಿಯಿಂದ ಲಕ್ಷ್ಮಣ ಸವದಿ ಅವರ ಪರವಾಗಿಯೇ ಸಮೀಕ್ಷೆಗಳು ಬರುತ್ತಿವೆ ಎನ್ನಲಾಗಿದೆ. ಹಾರೂಗೇರಿ ಕ್ಷೇತ್ರದ ಬಸಗೌಡ ಪಾಟೀಲ ನೇರವಾಗಿ ಕತ್ತಿ-ಸವದಿ ಬಣದಲ್ಲಿ ಗುರುತಿಸಿಕೊಂಡಿದ್ದರೆ, ರಾಮದುರ್ಗದಲ್ಲಿ ರಾಮಣ್ಣ ಯಾದವಾಡ ಒಲುವು ಸಹ ಈ ಕಡೆಗಿದೆ. ಇನ್ನು ನಿಪ್ಪಾಣಿಯಲ್ಲಿ ಉತ್ತಮ ಪಾಟೀಲ ಅದೃಷ್ಟ ಒಲಿದರೆ ಕತ್ತಿ-ಸವದಿ ಬಣಕ್ಕೆ ವರವಾಗುವ ಸಾಧ್ಯತೆ ಇದೆ. ಅದರಂತೆಯೇ ಕಿತ್ತೂರಿನಲ್ಲಿ ವಿಕ್ರಮ ಇನಾಮದಾರ, ಬೈಲಹೊಂಗದಲ್ಲಿ ಮಹಾಂತೇಶ ದೊಡ್ಡಗೌಡ್ರ ಗೆಲುವು ಸಾಧಿಸಿದರೆ ಕತ್ತಿ-ಸವದಿ ಬಣದ ಜೊತೆಗೆ ಗುರುತಿಸಿಕೊಳ್ಳುವವರ ಸಂಖ್ಯೆ 8ರಿಂದ 10 ಆಗುವ ಸಾಧ್ಯತೆ ಎನ್ನಲಾಗಿದೆ. ಈ ಲೆಕ್ಕಾಚಾರದಿಂದಲೇ ಈಚೆಗೆ ಹಾರೂಗೇರಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ನಮ್ಮ ಬಣದವರೇ ಅಧ್ಯಕ್ಷರಾಗೋದು ಗ್ಯಾರಂಟಿ ಎಂದು ಮಾಜಿ ಡಿಸಿಎಂ ಶಾಸಕ ಲಕ್ಷ್ಮಣ ಸವದಿ ವಿಶ್ವಾದಿಂದ ಹೇಳಿದ್ದಾರೆ ಎಂಬ ವಿಶ್ಲೇಷಣೆಗಳು ನಡೆದಿವೆ.ಪ್ರಾಬಲ್ಯ ಮುರಿಯುವುದು ಅಷ್ಟು ಸುಲಭವೇ?:
ಈಗಾಗಲೇ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದಲ್ಲಿ ಸೋತು ಹಿನ್ನಡೆ ಅನುಭವಿಸಿರುವ ಜಾರಕಿಹೊಳಿ ಕುಟುಂಬಕ್ಕೆ ಡಿಸಿಸಿ ಬ್ಯಾಂಕಿನಲ್ಲೂ ಸೋಲಿನ ರುಚಿ ತೋರಿಸಿದರೆ ಮುಂಬರುವ ವಿಧಾನಸಭೆ ಚುನಾವಣೆಗೆ ಜಿಲ್ಲೆಯ ರಾಜಕೀಯ ಸಮೀಕರಣವೇ ಬದಲಾಗಲಿದೆ. ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ಹೊಂದಿರುವ ಪ್ರಾಬಲ್ಯ ಮುರಿಯಬಹುದು ಎಂಬ ಲೆಕ್ಕಾಚಾರದಲ್ಲಿ ವಿರೋಧಿ ಪಾಳೆಯ ಕಾರ್ಯತತ್ಪರವಾಗಿದೆ. ಆದರೆ ಈ ಕಾರ್ಯ ಅಂದುಕೊಂಡಷ್ಟು ಸುಲಭವೂ ಅಲ್ಲ. ಅವಿರೋಧ ಆಯ್ಕೆಗೆ ಸ್ವತಃ ಬಾಲಚಂದ್ರ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗಾಗಲೇ ಲಿಂಗಾಯತ ಸಮುದಾಯದವರೇ ಅಧ್ಯಕ್ಷರಾಗಲಿದ್ದಾರೆ ಎಂಬ ಟ್ರಂಪ್ ಕಾರ್ಡ್ ಕೂಡ ವರವಾಗಬಹುದು. ಇದರ ನಡುವೆ ಜಾರಕಿಹೊಳಿ ಸಹೋದರರು ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಐದಾರು ತಿಂಗಳ ಹಿಂದಿನಿಂದಲೇ ತಮ್ಮೆಲ್ಲ ಶಕ್ತಿ ಬಳಸಿ ಬಣವನ್ನು ಗಟ್ಟಿಗೊಳಿಸಿದ್ದಾರೆ. ಈಚೆಗಷ್ಟೇ ರಂಗಕ್ಕಿಳಿದಿರುವ ವಿರೋಧಿ ಬಣದ ಕಸರತ್ತು ವ್ಯರ್ಥ ಆಗಲಿದೆ ಎಂಬುದು ಜಾರಕಿಹೊಳಿ ಬಣದ ವಾದ.ನಮ್ಮ ಬಣದ ೯ ನಿರ್ದೇಶಕರು ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಯರ‍್ಯಾರು ಅವಿರೋಧ ಆಯ್ಕೆ ಆಗಿದ್ದಾರೆ. ಯಾರೂ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ ಎಲ್ಲವೂ ನನ್ನ ಕಿಸೆಯ ಚೀಟಿಯಲ್ಲಿದೆ. ನಾವೇನು ಉಪ್ಪಿನಕಾಯಿ ನೆಕ್ಕಲು ರಾಜಕೀಯಕ್ಕೆ ಬಂದಿಲ್ಲ. ರಾಜಕೀಯ ಮಾಡೋದು ಹೇಗೆಂದು ನಮಗೂ ಗೊತ್ತು ಎಂದು ಶಾಸಕ ಲಕ್ಷ್ಮಣ ಸವದಿ ಹೇಳುತ್ತಾರೆ.ಹುಕ್ಕೇರಿ ತಾಲೂಕಿನ ಚುನಾವಣೆ ಮುಂದಕ್ಕೆ
ಬೆಳಗಾವಿ: ಅ.19ರಂದು ನಡೆಯಬೇಕಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಹುಕ್ಕೇರಿ ತಾಲೂಕಿನ ಪಿಕೆಪಿಎಸ್ ಮತಕ್ಷೇತ್ರ ಪ್ರತಿನಿಧಿಸುವ ಚುನಾವಣೆ ಮುಂದೂಡಲಾಗಿದೆ. ಭೀಮಸೇನ ಬಾಗಿ ಎಂಬುವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾದ ಹಿನ್ನೆಲೆಯಲ್ಲಿ ಧಾರವಾಡ ಹೈಕೋರ್ಟ್ ಸಂಚಾರಿ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅ.19ರಂದು 7 ಕ್ಷೇತ್ರಗಳಿಗೆ ಚುನಾವಣೆ ವೇಳಾಪಟ್ಟಿಯನ್ನು ಚುನಾವಣೆ ಅಧಿಕಾರಿ ಘೋಷಣೆ ಮಾಡಿದ್ದರು. ಆದರೆ, ಹುಕ್ಕೇರಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಸಂಘಗಳಿಂದ ಪ್ರತಿನಿಧಿಸುವ ನಿರ್ದೇಶಕ ಸ್ಥಾನದ ಚುನಾವಣೆಗೆ ವಿಘ್ನ ಎದುರಾಗಿದೆ. ಹೈಕೋರ್ಟ್ ಆದೇಶ ನೀಡಿರುವ ಹಿನ್ನಲೆಯಲ್ಲಿ ಮುಂದಿನ ಆದೇಶದವರೆಗೆ ಚುನಾವಣೆ ಮುಂದೂಡಿ ಚುನಾವಣೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ.