ಡಿಸಿಸಿ ಬ್ಯಾಂಕ್‌ಗೆ 46 ಕೋಟಿ ರು. ಲಾಭ

| Published : Apr 05 2025, 12:50 AM IST

ಸಾರಾಂಶ

ಶಿವಮೊಗ್ಗ: ಕೇಂದ್ರ ಸಹಕಾರ ಬ್ಯಾಂಕ್ ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿ ದೊಡ್ಡ ಮಟ್ಟದ ಲಾಭ ಗಳಿಸಿದೆ. ಈ ವರ್ಷದ ವಹಿವಾಟಿನಲ್ಲಿ 46 ಕೋಟಿ ರು. ಲಾಭ ಗಳಿಸಿದ್ದು, 2026ರ ಮಾರ್ಚ್ ಅಂತ್ಯಕ್ಕೆ 60 ಕೋಟಿ ರು. ಲಾಭ ಗಳಿಸುವ ಗುರಿ ಹೊಂದಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದರು.

ಶಿವಮೊಗ್ಗ: ಕೇಂದ್ರ ಸಹಕಾರ ಬ್ಯಾಂಕ್ ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿ ದೊಡ್ಡ ಮಟ್ಟದ ಲಾಭ ಗಳಿಸಿದೆ. ಈ ವರ್ಷದ ವಹಿವಾಟಿನಲ್ಲಿ 46 ಕೋಟಿ ರು. ಲಾಭ ಗಳಿಸಿದ್ದು, 2026ರ ಮಾರ್ಚ್ ಅಂತ್ಯಕ್ಕೆ 60 ಕೋಟಿ ರು. ಲಾಭ ಗಳಿಸುವ ಗುರಿ ಹೊಂದಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬ್ಯಾಂಕಿನ ಇತಿಹಾಸದಲ್ಲಿಯೇ ಇದು ಅತ್ಯಂತ ಹೆಚ್ಚು ಲಾಭದ ವರ್ಷವಾಗಿದೆ. ಒಟ್ಟು 46 ಕೋಟಿ ರು. ಲಾಭ ಬಂದಿದೆ. ಅದರಲ್ಲಿ 2024-25ಕ್ಕೆ 18.24 ಕೋಟಿ ರು. ನಿವ್ವಳ ಲಾಭವಾಗಿದೆ. ಸುಮಾರು 3464.50 ಕೋಟಿ ರು. ವ್ಯವಹಾರವನ್ನು ಬ್ಯಾಂಕ್ ಮಾಡಿದೆ. 1690.12 ಕೋಟಿ ರು. ಠೇವಣಿ ಇದ್ದು, 150.60 ಕೋಟಿ ರು. ಷೇರು ಬಂಡವಾಳ ಹೊಂದಿದೆ. 75.95 ಕೋಟಿ ನಿಧಿಗಳಿದ್ದು, 2582.86 ಕೋಟಿ ರು. ದುಡಿಯುವ ಬಂಡವಾಳ ಹೊಂದಿದೆ ಎಂದು ಅಂಕಿ ಅಂಶ ನೀಡಿದರು.ಡಿಸಿಸಿ ಬ್ಯಾಂಕ್ ರೈತರ ಹಿತಕ್ಕಾಗಿಯೇ ಕೆಲಸ ಮಾಡುತ್ತಾ ಬಂದಿದ್ದು, ನಬಾರ್ಡ್‌ನ ಪುನರ್ ಧನ ಸೌಲಭ್ಯ ಕಡಿತದ ನಡುವೆಯೂ ಕೂಡ ಪ್ರಸಕ್ತ ಸಾಲಿನಲ್ಲಿ 1,08,500 ರೈತರಿಗೆ 1206.60 ಕೋಟಿ ರು. ಕೃಷಿ ಬೆಳೆ ಸಾಲ ನೀಡಲಾಗಿದೆ. ಮಧ್ಯಮಾವಧಿ ಕೃಷಿ ಸಾಲವನ್ನು 532 ರೈತರಿಗೆ 80 ಕೋಟಿ ರು. ಸಾಲ ನೀಡಲಾಗಿದೆ. ಸಾಲದ ವಸೂಲಾತಿಯೂ ಕೂಡ ಶೇ.99.60 ರಷ್ಟಿದೆ. ಸ್ವಸಹಾಯ ಸಂಘಗಳಿಗೂ ಸಾಲ ನೀಡಲಾಗಿದೆ. 8500 ಸ್ವಸಹಾಯ ಸಂಘಗಳ ಪೈಕಿ 3255 ಸಂಘಗಳಿಗೆ 140.82 ಕೋಟಿ ರು. ಸಾಲ ನೀಡಲಾಗಿದೆ. ಸುಮಾರು 15824 ವ್ಯಕ್ತಿಗಳಿಗೆ ಕೃಷಿಯೇತರ ಸಾಲವಾಗಿ 545.26 ಕೋಟಿ ರು. ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಬ್ಯಾಂಕ್ ಈಗಾಗಲೇ ಜಿಲ್ಲೆಯಲ್ಲಿ ಹಲವು ನೂತನ ಶಾಖೆಗಳನ್ನು ತೆರೆಯುತ್ತಿದ್ದು, ಹೊಸದಾಗಿ ಗಾಜನೂರು, ಬಾರಂದೂರು, ತೀರ್ಥಹಳ್ಳಿ, ತ್ಯಾಗರ್ತಿ ಮತ್ತು ನಗರ ಗ್ರಾಮಗಳಲ್ಲಿ ಹೊಸ ಐದು ಶಾಖೆಗಳನ್ನು ತೆರೆಯಲಾಗುವುದು. ಇದರ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ 2025-26ನೇ ಸಾಲಿಗೆ 14 ಹೊಸ ಶಾಖೆಗಳನ್ನು ತೆರೆಯುವ ಉದ್ದೇಶವಿದೆ. ಆರ್.ಬಿ.ಐ. ಕೂಡ ಅನುಮತಿ ನೀಡಿದೆ. ಶೀಘ್ರದಲ್ಲೇ ಬ್ಯಾಂಕ್ ನೂತನ ಶಾಖೆಗಳ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.ಕೃಷಿ ಹಾಗೂ ಕೃಷಿಯೇತರ ಸಾಲಗಳ ಭದ್ರತೆಗಾಗಿ ವಿಮಾ ಯೋಜನೆ ಜಾರಿಗೆ ತರಲಾಗಿದೆ. ಸಾಲ ಪಡೆದ ರೈತರು 700 ರು. ಕಂತನ್ನು ನೀಡಿ ವಿಮಾ ಸೌಲಭ್ಯಕ್ಕೆ ಒಳಪಡಬಹುದು. ಹಾಗೆಯೇ ವಿಶೇಷ ಠೇವಣಿ ಯೋಜನೆಯನ್ನು 2025ರ ಜೂನ್ ವರೆಗೆ ಮುಂದುವರೆಸಿದ್ದು, ಇದರ ಪ್ರಯೋಜನವನ್ನು ಗ್ರಾಹಕರು ಪಡೆಯಬಹುದಾಗಿದೆ ಎಂದರು.ಮುಂದಿನ ದಿನಗಳಲ್ಲಿ ಸುಮಾರು 13 ಲಕ್ಷ ರೈತರಿಗೆ 1300 ಕೋಟಿ ರು. ಸಾಲ ನೀಡುವ ಉದ್ದೇಶವಿದೆ. ಶೇ.3ರ ಬಡ್ಡಿ ದರದಲ್ಲಿ ಸಾವಿರ ರೈತರಿಗೆ 100 ಕೋಟಿ ರು. ಮಧ್ಯಮಾವಧಿ ಸಾಲ ಹಂಚಿಕೆ ಮಾಡಲಾಗುವುದು ಎರಡೂವರೆ ಸಾವಿರ ಸ್ವಸಹಾಯ ಸಂಘಗಳಿಗೆ 100 ಕೋಟಿ ರು. ಸಾಲ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 2 ಸಾವಿರ ಕೋಟಿ ರು. ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಸಕ್ಕರೆ ಕಾರ್ಖಾನೆಗೆ ಶೇ.13ರ ಬಡ್ಡಿ ದರದಲ್ಲಿ ಸಾಲ ಕೊಟ್ಟಿದ್ದರಿಂದ ಬ್ಯಾಂಕ್ ಗೆ ಹೆಚ್ಚು ಲಾಭವಾಗಿದೆ. ಹಾಗೆಯೇ ಸುರಕ್ಷಾ ಗೋದಾಮಿಗೆ ನೀಡಿದ ಸಾಲದ ಬಾಬ್ತು ಈಗಾಗಲೇ 36 ಕೋಟಿ ಹರಾಜಿನ ಮೂಲಕ ಬಂದಿದ್ದು, ಇನ್ನು 9 ಕೋಟಿ ರು. ಮಾತ್ರ ಬರಬೇಕಾಗಿದೆ. ಅದು ಕೂಡ ಈ ವರ್ಷವೇ ವಸೂಲಾಗಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ದುಗ್ಗಪ್ಪಗೌಡ, ದಶರಥಗಿರಿ, ಸುಧೀರ್, ಪರಮೇಶ್, ಹನುಮಂತ, ಶಿವಶಂಕರ್, ಬಸವರಾಜ್, ರುದ್ರೇಗೌಡ, ಚಂದ್ರೇಡ, ಸಿಇಒ ಅನ್ನಪೂರ್ಣ ಇದ್ದರು.ರೈತರ ಹಿತಕ್ಕಾಗಿ ದರ ಏರಿಕೆ

ಕಲ್ಮನೆ ಸೊಸೈಟಿಯಲ್ಲಿ ನಡೆದಿದೆ ಎನ್ನಲಾದ ಘಟನೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಸರಿ ಮಾಡಲು ಏನೇನು ಸಾಧ್ಯವೋ ಅದನ್ನೆಲ್ಲಾ ಮಾಡುತ್ತಿದ್ದೇವೆ. ಠೇವಣಿ ಇಟ್ಟವರಿಗೆ ಭರವಸೆ ಕೊಟ್ಟಿದ್ದೇವೆ. ಗ್ರಾಹಕರಿಗೂ ಕೂಡ ಈಗ ನಂಬಿಕೆ ಬಂದಿದೆ. ಯಾವ ತೊಂದರೆಯೂ ಇಲ್ಲ, ಶೀಘ್ರದಲ್ಲೇ ತನಿಖಾ ವರದಿ ಬರಲಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ ತಿಳಿಸಿದರು.ಕಾಲ ಕಾಲಕ್ಕೆ ತಕ್ಕಂತೆ ಹಾಲಿನ ದರ ಏರುವುದು ಸಹಜ ಪ್ರಕ್ರಿಯೆಯಾಗಿದೆ. ಇದನ್ನು ಬಿಜೆಪಿಯವರು ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ. ಒಂದು ಲೀಟರ್ ನೀರಿಗೆ 50 ರು. ಕೊಡುವ ಈ ಹೊತ್ತಿನಲ್ಲಿ ಒಂದು ಲೀಟರ್ ಹಾಲಿಗೆ ಇಷ್ಟು ದರ ಕೊಡಬಾರದೇಕೆ. ಹಾಲಿನ ದರ ಏರಿಕೆ ಬಗ್ಗೆ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವರು ಬಾಲಿಷವಾಗಿ ಹೇಳಿಕೆ ಕೊಟ್ಟಿದ್ದಾರೆ. ಎಲ್ಲವೂ ರೈತರ ಹಿತಕ್ಕಾಗಿಯೇ ದರ ಏರಿಕೆ ಮಾಡಲಾಗಿದೆ ಎಂದರು.