ಡಿಸಿಸಿ ಯಾರಪ್ಪನ ಆಸ್ತಿ ಅಲ್ಲ, ಜನರ ಆಸ್ತಿ

| Published : Oct 08 2025, 01:01 AM IST

ಸಾರಾಂಶ

ಡಿಸಿಸಿ ಬ್ಯಾಂಕ್ ಯಾರ ಅಪ್ಪನ ಮನೆ ಆಸ್ತಿಯೂ ಅಲ್ಲ. ಎಂದೆಂದಿಗೂ ಜನರ ಆಸ್ತಿ. ಮುಂದೆಯೂ ಜನರ ಆಸ್ತಿ ಆಗಿಯೇ ಇರಲಿದೆ. ಹುಕ್ಕೇರಿ ಫಲಿತಾಂಶ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪುನರಾವರ್ತನೆ ಆಗುವುದನ್ನು ಜಿಲ್ಲೆಯ ಜನತೆ ನಿರ್ಧರಿಸಲಿದ್ದು, ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾಯಕತ್ವ ತೆಗೆದುಕೊಳ್ಳುವ ಅವಶ್ಯಕತೆ ನನಗಿಲ್ಲ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ ಕತ್ತಿ‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಡಿಸಿಸಿ ಬ್ಯಾಂಕ್ ಯಾರ ಅಪ್ಪನ ಮನೆ ಆಸ್ತಿಯೂ ಅಲ್ಲ. ಎಂದೆಂದಿಗೂ ಜನರ ಆಸ್ತಿ. ಮುಂದೆಯೂ ಜನರ ಆಸ್ತಿ ಆಗಿಯೇ ಇರಲಿದೆ. ಹುಕ್ಕೇರಿ ಫಲಿತಾಂಶ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪುನರಾವರ್ತನೆ ಆಗುವುದನ್ನು ಜಿಲ್ಲೆಯ ಜನತೆ ನಿರ್ಧರಿಸಲಿದ್ದು, ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾಯಕತ್ವ ತೆಗೆದುಕೊಳ್ಳುವ ಅವಶ್ಯಕತೆ ನನಗಿಲ್ಲ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ ಕತ್ತಿ‌ ಹೇಳಿದರು.

ಅಕ್ಟೋಬರ್ 19 ರಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ದಿನಾಂಕ‌ ನಿಗದಿ ಆಗಿರುವ ಹಿನ್ನೆಲೆಯಲ್ಲಿ ಮಂಗಳವಾರ ರಮೇಶ ಕತ್ತಿ ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯ ಸಾರ್ವತ್ರಿಕ ಚುನಾವಣೆಯಲ್ಲಿ ನಾಯಕತ್ವದ ಅವಶ್ಯಕತೆ ಇರುತ್ತದೆ. ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ನಾಯಕತ್ವದ ಅವಶ್ಯಕತೆ ಇಲ್ಲ. ಮತದಾರರೇ ವೈಯಕ್ತಿಕವಾಗಿ ಯೋಚಿಸಿ ಮತ ಚಲಾಯಿಸುತ್ತಾರೆ ಎಂದರು.ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. 40 ವರ್ಷದ ಅವಧಿಯಲ್ಲಿ ಒಳ್ಳೆಯ ರೀತಿ ಸೇವೆ ಸಲ್ಲಿಸಿದ್ದೇನೆ. ಕರ್ನಾಟಕದಲ್ಲೆ ಬೆಳಗಾವಿ ಜಿಲ್ಲೆಯ ಅತೀ ಹೆಚ್ಚು ರೈತರ ಸಾಲ ಮನ್ನಾ ಅನುಕೂಲ ಆಗಿದೆ. ಹಾಗಾಗಿ, ಈ ಬಾರಿ ನನ್ನ ವಿರೋಧಿ ಪೆನೆಲ್ ಯಾವುದೂ ಇಲ್ಲ. ನನ್ನ ಜೊತೆಗೆ ಸಮಾನ ಮನಸ್ಕರು ಬಹಳಷ್ಟು ಜನರು ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.1986ರಿಂದ ಡಿಸಿಸಿ ಬ್ಯಾಂಕ್‌ನಲ್ಲಿ ಇದ್ದೇನೆ. ಮೊದಲನೇ ಬಾರಿ ಸ್ಪರ್ಧಿಸಿದಾಗ ಚುನಾವಣೆ ನಡೆದು ಆಯ್ಕೆ ಆಗಿದ್ದೆ. ಅದಾದ ಮೇಲೆ ಸತತವಾಗಿ 7 ಬಾರಿ ಅವಿರೋಧವಾಗಿ ಆಯ್ಕೆ ಆಗಿದ್ದೇನೆ. 25 ವರ್ಷ ಅಧ್ಯಕ್ಷ, 5 ವರ್ಷ ಉಪಾಧ್ಯಕ್ಷ, 10 ವರ್ಷ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ.‌ ನನ್ನ ಅವಧಿಯಲ್ಲಿ ಸುಮಾರು 3.81 ಲಕ್ಷ ರೈತರ ₹3400 ಕೋಟಿ ಸಾಲ ಮನ್ನಾ ಆಗಿದೆ. ಹುಕ್ಕೇರಿ ತಾಲೂಕು ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಈಗ 9ನೇ ಬಾರಿ ನಾಮಪತ್ರ ಸಲ್ಲಿಸಿದ್ದೇನೆ. ತಾಲೂಕಿನ ಮತದಾರರ ಆಶೀರ್ವಾದದಿಂದ ಮತ್ತೆ ಗೆದ್ದು ಬರುತ್ತೇನೆ ಎಂದರು. ಬೇರೆ ತಾಲೂಕುಗಳಲ್ಲಿ ಅವಿರೋಧ ಆಯ್ಕೆ ಆಗಬೇಕೊ? ಚುನಾವಣೆ ನಡೆಯಬೇಕೋ? ಎಂಬುದನ್ನು ಆ ಕ್ಷೇತ್ರಗಳ ಹಿತಚಿಂತಕರು, ಮತದಾರರು ನಿರ್ಣಯ ಕೈಗೊಳ್ಳಬೇಕು. ಬಾಲಚಂದ್ರ ಜಾರಕಿಹೊಳಿ ಆಗಲಿ ರಮೇಶ ಕತ್ತಿ ಆಗಲಿ ಹೇಳುವುದು ಸೂಕ್ತ ಅಲ್ಲ. ಇನ್ನು ನಮ್ಮ ಪೆನಲ್ ರಚಿಸುವ ಪ್ರಶ್ನೆ ಇಲ್ಲ. 15 ತಾಲೂಕುಗಳಿಂದ ಆಯಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಾರೆ. ಮುಂದೆಯೂ ಪೆನಲ್ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.ಬಹಳಷ್ಟು ಮಂದಿ ಸಂಪರ್ಕದಲ್ಲಿದ್ದಾರೆ:

ಬೇರೆ ಕಡೆ ಪ್ರಚಾರಕ್ಕೆ ಹೋಗುತ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಆಯಾ ತಾಲೂಕಿನ ಅಭ್ಯರ್ಥಿಗಳು ಡಿಸಿಸಿ ಬ್ಯಾಂಕ್ ಚುನಾವಣೆ ಪ್ರಚಾರಕ್ಕೆ ಆಹ್ವಾನಿಸಿದರೆ ಮಾತ್ರ ಹೋಗುತ್ತೇನೆ. ನಾನಾಗೇ ಹೋಗುವುದಿಲ್ಲ. ಆದರೆ, ಬಹಳ ಜನ ಅಭ್ಯರ್ಥಿಗಳು ನನ್ನ ಸಂಪರ್ಕ ಮಾಡಿದ್ದಾರೆ. ಆದರೆ, ಮಾಧ್ಯಮಗಳ ಮುಂದೆ ಅದನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದರು.ನಮ್ಮ 12 ನಿರ್ದೇಶಕರು ಆಯ್ಕೆ ಆಗುತ್ತಾರೆ ಎಂಬ ಬಾಲಚಂದ್ರ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹುಕ್ಕೇರಿ ವಿದ್ಯುತ್ ಗ್ರಾಮೀಣ ಸಹಕಾರಿ ಸಂಘದ ಚುನಾವಣೆಯಲ್ಲಿ ಏನು ಹೇಳಿದ್ದರು? ನಾವೇ ಗೆಲ್ಲುತ್ತೇವೆ ಎಂದಿದ್ದರು. ಆದರೆ, ಫಲಿತಾಂಶ ಏನಾಯಿತು? ಅವರು ಗೆಲ್ಲುತ್ತಾರೆ, ಇವರು ಗೆಲ್ಲುತ್ತಾರೆ ಅಂತಾ ಹವಾ ಮಾಡುವ ಕಾಲ ಇದಲ್ಲ. ಜನರು ಬಹಳ ಶಾಣ್ಯಾ ಇದ್ದಾರೆ. ತಾಲೂಕು ಮತ್ತು ಜಿಲ್ಲೆಯಲ್ಲಿ ಯಾರ ಕೈಗೆ ಅಧಿಕಾರ ಕೊಟ್ಟರೆ ಸಂಸ್ಥೆ ಉಳಿಯುತ್ತದೆ ಅಂತಾ ಜನರು ಚಿಂತನೆ ಮಾಡಲಿದ್ದಾರೆ. ಪ್ರತಿಯೊಬ್ಬರೂ ಸುಶಿಕ್ಷಿತರಿದ್ದು, ಯೋಚಿಸಿ ನಿರ್ಧರಿಸುತ್ತಾರೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಳಗಾವಿ ಡಿಸಿಸಿ ಬ್ಯಾಂಕ್‌ನಿಂದ 50 ಲಕ್ಷ ಜನರು ಇದರ ಲಾಭ ಪಡೆಯುತ್ತಾರೆ. ಇಂತಹ ಬ್ಯಾಂಕಿಗೆ ಒಂದು ಸ್ವಲ್ಪ ಹೆಚ್ಚು ಕಮ್ಮಿ ಆದರೂ 50 ಲಕ್ಷ ಜನರು ಬೀದಿಗೆ ಬರುತ್ತಾರೆ ಎಂದು ಹೇಳಿದರು.ನಾಯಕತ್ವ ತೆಗೆದುಕೊಳ್ಳಲ್ಲ:

ಲಕ್ಷ್ಮಣ ಸವದಿ ಮತ್ತು ನೀವು ಒಂದಾಗುತ್ತಿರಾ ಎಂಬ ಪ್ರಶ್ನೆಗೆ ಅದು ಜನರ ಅಭಿಪ್ರಾಯವಾಗಿದೆ. ನಾವು ಈಗಾಗಲೇ ಒಂದೇ ಇದ್ದೇವೆ. ಚುನಾವಣೆಯಲ್ಲಿ ಒಂದಾಗಲು ಪ್ರಕ್ರಿಯೆ ಶುರುವಾಗಿದೆ. ಮುಂಬರುವ ದಿನಗಳಲ್ಲಿ ಇದರ ಬಗ್ಗೆ ಅವಲೋಕನ ಮಾಡುತ್ತೇವೆ ಎಂದ ಅವರು, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮನ್ನು ವಿಲನ್ ಮಾಡುತ್ತಿದ್ದಾರಾ ಎಂಬುದಕ್ಕೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನ ಇರುವವರು ಗೆದ್ದು ಬರಬಾರದು ಅಂತಾ ನನ್ನ ವಿಲನ್ ಮಾಡುತ್ತಿದ್ದಾರೆ. ಆದರೆ, ಅದರಲ್ಲಿ ವಿರೋಧಿಗಳು ಯಶಸ್ವಿಯಾಗುವುದಿಲ್ಲ. ನಾನು ಗೆದ್ದು ಬರುತ್ತೇನೆ. ಬ್ಯಾಂಕ್ ಒಳ್ಳೆಯ ರೀತಿ ನಡೆಸುವಂತೆ ಎಚ್ಚರಿಸುತ್ತೇನೆ ಎಂದರು‌.ಡಿಸಿಸಿ ಬ್ಯಾಂಕಿನಿಂದ ನನ್ನ ಯಾರು ಹೊರಗಿಡುತ್ತಾರೆ..?:

ಡಿಸಿಸಿ ಬ್ಯಾಂಕಿನಿಂದ ನನ್ನ ಹೊರಗೆ ಇಡಲು ಅವನು ಯಾರು? ಬ್ಯಾಂಕಿನಿಂದ ನನ್ನ ಹೊರಗೆ ಇಡಬೇಕೋ, ಒಳಗೆ ಇಡಬೇಕೋ ಎಂಬುದನ್ನು ಜಿಲ್ಲೆಯ ಜನ ನಿರ್ಧಿರಿಸುತ್ತಾರೆ ಹೊರತು ಯಾವುದೇ ವ್ಯಕ್ತಿ ಅಲ್ಲ. ಇನ್ನು ಈ ಹಿಂದೆ ನಾನು ಅಧ್ಯಕ್ಷ ಆಗುವಲ್ಲಿ ಜಾರಕಿಹೊಳಿ ಸಹೋದರರ ಪಾತ್ರ ಇತ್ತು. ಇಲ್ಲ ಅಂತಾ ಯಾರು ಹೇಳುತ್ತಾರೆ. ಆದರೆ, 16 ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕ್ ನಡೆಸಿದ ಅನುಭವ ನನಗಿದೆ ಎಂದರು. ಕತ್ತಿ ವರ್ಸಸ್ ಜಾರಕಿಹೊಳಿ ಚುನಾವಣೆ ಆಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ನೀವು ಯಾವ ರೀತಿ ಬೇಕಾದರೂ ವಿಶ್ಲೇಷಣೆ ಮಾಡಬಹುದು. ಬುದ್ಧಿಸೃಷ್ಟಿಗಳು ವಿರುದ್ಧ ದಿಕ್ಕಿನಲ್ಲಿ ಹೋದಾಗ ಬೇರೆ ಬೇರೆ ಆಗುತ್ತವೆ. ಬುದ್ಧಿ ಸೃಷ್ಟಿ ಸರಿ ಆದರೆ, ಮುಂದೆ ಎರಡೂ ಒಂದೇನೂ ಆಗಬಹುದು. ನಮ್ಮ ನಡುವೆ ಯಾರೂ ಹುಳಿ ಹಿಂಡಿಲ್ಲ ಎನ್ನುವ ಮೂಲಕ ಮುಂದೆ ಹೊಂದಾಣಿಕೆ ಆದರೂ ಆಗಬಹುದು ಎನ್ನುವ ಅರ್ಥದಲ್ಲಿ ಕತ್ತಿ ಮಾತನಾಡಿದರು.ರಮೇಶ ಕತ್ತಿ ನಾಮಪತ್ರ ಸಲ್ಲಿಕೆ ವೇಳೆ ಶಾಸಕ ನಿಖಿಲ್ ಕತ್ತಿ, ಪುತ್ರ ಪವನ್ ಕತ್ತಿ, ಮಾಜಿ ಸಚಿವ ಎ.ಬಿ‌.ಪಾಟೀಲ ಪುತ್ರ ವಿನಯ್ ಪಾಟೀಲ ಸೇರಿ ಮತ್ತಿತರರು ಉಪಸ್ಥಿತರಿದ್ದರು.