ರಾಮನಗರ: ಕೊಟ್ಟ ಭರವಸೆಗಳನ್ನು ಈಡೇರಿಸದೆ, ರೈತರ ಭೂಮಿಯನ್ನು ಕಬಳಿಸುತ್ತಿರುವ ಸರ್ಕಾರದ ವಿರುದ್ಧ ಫೆ.4ರಂದು ಜಿಲ್ಲಾಧಿಕಾರಿ ಹಠಾವೋ, ರೈತರ ಬಚಾವೋ ಆಂದೋಲನ ಹಮ್ಮಿಕೊಂಡಿರುವುದಾಗಿ ಜಯ ಕರ್ನಾಟಕ ಸಂಘಟನೆ ರಾಜ್ಯ ಸಂಚಾಲಕ ಕುಮಾರಸ್ವಾಮಿ ತಿಳಿಸಿದರು

ರಾಮನಗರ: ಕೊಟ್ಟ ಭರವಸೆಗಳನ್ನು ಈಡೇರಿಸದೆ, ರೈತರ ಭೂಮಿಯನ್ನು ಕಬಳಿಸುತ್ತಿರುವ ಸರ್ಕಾರದ ವಿರುದ್ಧ ಫೆ.4ರಂದು ಜಿಲ್ಲಾಧಿಕಾರಿ ಹಠಾವೋ, ರೈತರ ಬಚಾವೋ ಆಂದೋಲನ ಹಮ್ಮಿಕೊಂಡಿರುವುದಾಗಿ ಜಯ ಕರ್ನಾಟಕ ಸಂಘಟನೆ ರಾಜ್ಯ ಸಂಚಾಲಕ ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣದ ಆವರಣದಲ್ಲಿ ನಿಷೇಧಾಜ್ಞೆ ವಿಧಿಸುವ ಹೋರಾಟವನ್ನು ಹತ್ತಿಕ್ಕಲು ವ್ಯವಸ್ಥಿತ ಪಿತೂರಿ ಮಾಡಿದ್ದಾರೆ. ಇಂತಹ ಜಿಲ್ಲಾಧಿಕಾರಿಗಳು ಜಿಲ್ಲೆಗೆ ಬೇಕಾಗಿಲ್ಲ. ರೈತರ ಉಳಿಯಬೇಕಾಗಿದೆ. ಹೀಗಾಗಿ ಅವರು ಜಿಲ್ಲೆ ಬಿಟ್ಟು ತೊಲಗಲಿ ಎಂದು ಆಗ್ರಹಿಸಿ ಆಂದೋಲನ ನಡೆಸಲಾಗುತ್ತಿದೆ ಎಂದು ಹೇಳಿದರು.

ರೈತರ ಬದುಕು ಬವಣೆ ಸಂಕಷ್ಟಗಳು ಹೇಳತೀರದ್ದಾಗಿದ್ದು, ಹಾಲಿ ಇರುವ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ರೈತರ ಬದುಕನ್ನು ದುಸ್ತರ ಮಾಡುತಿದೆ. ರೈತರು ಸ್ಭೆರಿದಂತೆ ಜನಸಾಮಾನ್ಯರ ವಿರುದ್ದ ಪೊಲೀಸರು ಸುಳ್ಳು ಕೇಸುಗಳನ್ನು ಹಾಕುತ್ತಿದ್ದಾರೆ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರ ಬದುಕನ್ನು ಅಸ್ಥಿರಗೊಳಿಸಿದೆ ಎಂದು ದೂರಿದರು.

ಬಿಡದಿ ಹೋಬಳಿ, ಭೈರಮಂಗಲ ಹಾಗೂ ಕಂಚಗಾರನಹಳ್ಳಿ ವ್ಯಾಪ್ತಿಯ ರೈತರ ಫಲವತ್ತಾದ 9600 ಎಕರೆ ಕೃಷಿ ಭೂಮಿಯನ್ನು ಎಐ ಸಿಟಿ ನೆಪದಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳಲು ಹೊರಟಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಕೆಲ ನಾಯಕರು ಬಿಡದಿ ಹೋಬಳಿಯಲ್ಲಿ ಜಿಲ್ಲಾಧಿಕಾರಿಗಳ ಸಂಬಂಧಿಕರ ಹೆಸರಿನಲ್ಲಿ ಬೇನಾಮಿ ಭೂಮಿ ನೋಂದಣಿಯಾಗಿದೆ ಎಂದು ದೂರುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ರೈತ ಸಂಘದ ಉಪಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ಬಿಡದಿ ಹೋಬಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲಿ 9600 ಎಕರೆ ಭೂಮಿಯನ್ನು ಎಐ ಸಿಟಿಗಾಗಿ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ಸರ್ಕಾರ ಹೊರಡಿಸಿದ್ದ ಮೊದಲ ನೋಟಿಫಿಕೇಷನ್‌ನಲ್ಲಿ 9600 ಪೈಕಿ 2600 ಸರ್ಕಾರಿ ಭೂಮಿ ಇದೆ ಎಂದು ತಿಳಿಸಲಾಗಿತ್ತು. ಆದರೀಗ 720 ಎಕರೆ ಸರ್ಕಾರಿ ಭೂಮಿ ಇದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಉಳಿದ ಸರ್ಕಾರಿ ಭೂಮಿ ಎಲ್ಲ ಹೋಯಿತು. ಜಿಲ್ಲಾಡಳಿತ ತಕ್ಷಣ 9600 ಎಕರೆ ಭೂಮಿಯ ವಿಚಾರದಲ್ಲಿ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಪಾದಯಾತ್ರ ಮಾಡಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರ ಯೋಜನೆಯನ್ನು ಅನುಷ್ಟಾನಕ್ಕೆ ತಂದಿಲ್ಲ. ಕೇಂದ್ರ ಸರ್ಕಾರದ ವಿರುದ್ದ ಬೊಟ್ಟು ಮಾಡಿ ನೆಪ ಮಾಡುತ್ತಿದೆ. ಸುಪ್ರಿಂ ಕೋರ್ಟ್‌ನಲ್ಲಿ ಕರ್ನಾಟಕದ ಪರ ತೀರ್ಪು ಕೊಟ್ಟಿದ್ದರೂ ರಾಜ್ಯ ಸರ್ಕಾರ ಮೌನ ವಹಿಸಿದೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ತಿಮ್ಮೇ ಗೌಡ, ಕಾರ್ಯಾಧ್ಯಕ್ಷ ಪುಟ್ಟಸ್ವಾಮಿ, ಬೆಂಗಳೂರು ವಿಭಾಗದ ಅಧ್ಯಕ್ಷ ಚಂದ್ರಶೇಖರ್, ಹೋರಾಟಗಾರ ಪ್ರಶಾಂತ್ ಹೊಸದುರ್ಗ, ಜೈ ಭೀಮ್ ಸಂಘಟನೆಯ ಕಿರಣ್ ಸಾಗರ್, ಚೆಲುವರಾಜು, ಭೂ ಹಿತ ರಕ್ಷಣಾ ವೇದಿಕೆಯ ನಾಗರಾಜ್, ಪ್ರಮುಖರಾದ ನಾಗರಾಜ್, ಶಿವು ಇತರರಿದ್ದರು.

ಬಾಕ್ಸ್ .............

ಬೇಡಿಕೆಗಳು ಏನು ?

ಎಪಿಎಂಸಿ ಗಳಲ್ಲಿ ನಿಲ್ಲದ ಕಮಿಷನ್ ದಂದೆ ಕೂಡಲೇ ನಿಲ್ಲಿಸಬೇಕು, ಆನೇಕಲ್ ತಾಲೂಕು ಸರ್ಜಾಪುರ ಭಾಗದ 2500 ಎಕರೆ ರೈತರ ಫಲವತ್ತಾದ ಭೂಮಿಯನ್ನು ಕೆಐಡಿಬಿಗೆ ಭೂ ಸ್ವಾಧೀನ ಹೊರಟಿರುವ ರಾಜ್ಯ ಸರ್ಕಾರದ ಅವೈಜ್ಞಾನಿಕ ನೀತಿಯನ್ನು ಕೈಬಿಡಬೇಕು. ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷವನ್ನು ತಪ್ಪಿಸಬೇಕು. ಕೃಷಿ ಪಂಪ್ ಸೆಟ್‌ಗಳ ಸಕ್ರಮಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಬೀದಿನಾಯಿಗಳ ಸಮಸ್ಯೆ ನಿವಾರಿಸಬೇಕು, ಫಾರಂ ನಂ.50, 53ರಲ್ಲಿ ಅಕ್ರಮ ಸಾಗುವಳಿಯ ಸಕ್ರಮ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಸರ್ಕಾರದ ಆದೇಶದನ್ವಯ ಪರಿಗಣಿಸಬೇಕು. ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಸೂಕ್ತ ತನಿಖೆ ನಡೆಸಬೇಕು. ರೈತರು, ಕನ್ನಡ ಹಾಗೂ ದಲಿತ ಪರ ಹೋರಾಟಗಾರರ ಮೇಲಿನ ಮೊಕದ್ದಮೆ ವಾಪಸ್ ಪಡೆಯಬೇಕು.

31ಕೆಆರ್ ಎಂಎನ್ 4.ಜೆಪಿಜಿ

ಜಯ ಕರ್ನಾಟಕ ಸಂಘಟನೆ ರಾಜ್ಯ ಸಂಚಾಲಕ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.