ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಒಡಿಶಾದ ಭುವನೇಶ್ವರದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಗೌಡೇನಹಳ್ಳಿಯ ಕ್ರೀಡಾಪಟು ಜಿ.ಕೆ.ವಿಜಯಕುಮಾರಿ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸೌಧದ ಕೊಠಡಿ ಸಂಖ್ಯೆ 337ರಲ್ಲಿ ಸನ್ಮಾನಿಸಿ ಅಭಿನಂದಿಸಿದರು.ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಅಥ್ಲೆಟಿಕ್ಸ್‌ನಲ್ಲಿ ನನಗೆ ಹೆಚ್ಚಿನ ಆಸಕ್ತಿ. ಹೀಗಾಗಿ ವಿಜಯಕುಮಾರಿ ಅವರ ಸಾಧನೆ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಗಮನಿಸಿ ಮಂಡ್ಯದ ಸಾಧಕಿಗೆ ಅಭಿನಂದಿಸಲಾಗುತ್ತಿದೆ. ಈಕೆಯ ಸಾಧನೆಗೆ ನನ್ನ ಸಂಪೂರ್ಣ ಸಹಕಾರ ನೆರವು ಇರಲಿದೆ ಎಂದರು.
ಮಂಡ್ಯದ ಹೆಣ್ಣುಮಗಳು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ. ಆಕೆಯ ತರಬೇತಿಗೆ ಬೇಕಾದ ಸಕಲ ವ್ಯವಸ್ಥೆ ಮಾಡಲಾಗುವುದು. ಹಣಕಾಸಿನ ಸಮಸ್ಯೆ ಇದೆ ಎಂದು ತಿಳಿದು ಪಾಲಿಕೆ ವತಿಯಿಂದ 10 ಲಕ್ಷ ರು. ಪ್ರೋತ್ಸಾಧನ ನೀಡಲಾಗುವುದು. ಈ ವರ್ಷ 5 ಲಕ್ಷ ರು.ಚೆಕ್ ಅನ್ನು ನೀಡಲಾಗಿದೆ. ಮುಂದಿನ ವರ್ಷ 5 ಲಕ್ಷ ರು. ನೀಡುವುದಾಗಿ ತಿಳಿಸಿದರು.ಬಳಿಕ ಕ್ರೀಡಾಪಟು ವಿಜಯಕುಮಾರಿ ಮಾತನಾಡಿ, ನನ್ನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಶಾಸಕ ದಿನೇಶ್ ಗೂಳಿಗೌಡರಿಗೆ ಅಭಿನಂದನೆ ಸಲ್ಲಿಸಿದರು.
ಆರೋಗ್ಯ ಮತ್ತು ಹಣಕಾಸು ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿಂದ ಕ್ರೀಡೆಯಲ್ಲಿ ಉತ್ಸಾಹ ಕಳೆದುಕೊಂಡಿದ್ದೆ. ಈಗ ನನ್ನ ಸಾಧನೆ ಗುರುತಿಸಿ 5 ಲಕ್ಷ ರು.ಗಳ ಚೆಕ್ ಅನ್ನು ನೀಡಿ ಗೌರವಿಸಿರುವುದು ನನ್ನ ಉಮ್ಮಸ್ಸು ಹಿಮ್ಮಡಿಯಾಗಿದೆ ಎಂದರು.ಒಡಿಶಾದ ಭುವನೇಶ್ವರದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ 53.40 ಸೆಕೆಂಡ್ ಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿ ರಾಜ್ಯದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇವರ ಈ ಸಾಧನೆ ರಾಜ್ಯದ ಇತರೆ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ.
ವಿಜಯಕುಮಾರಿ ತಂದೆ ಕುಮಾರ ಕೃಷಿಕರಾಗಿದ್ದರೆ, ತಾಯಿ ಪ್ರೇಮ ಗೃಹಿಣಿ. ಪತಿ ತರುಣ್ ಶೇಖರ್ ಕ್ರೀಡಾ ತರಬೇತುದಾರರಾಗಿದ್ದಾರೆ. ಶಾಲಾ ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟುವಾಗಿ 16ನೇ ವಯಸಿಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI)ಗೆ ಆಯ್ಕೆಯಾದರು. ಬಳಿಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.ನಿರಂತರ ಅಭ್ಯಾಸ ಸತತ ಪರಿಶ್ರಮದಿಂದ ಚಿನ್ನದ ಪದಕ ಪಡೆದಿರುವ ವಿಜಯಕುಮಾರಿ ಅವರು ಮುಂದೆ ಕಾಮನ್‌ವೆಲ್ತ್ ಏಷಿಯನ್ ಗೇಮ್ಸ್ ಗೆ ಆಯ್ಕೆಯಾಗಿ ಭಾರತದ ಕೀರ್ತಿ ಪತಾಕೆ ಹಾರಿಸುವ ಇಂಗಿತ ಹೊಂದಿದ್ದಾರೆ.
2014ರಲ್ಲಿ LUSOFONIA ಗೇಮ್ಸ್ ನಲ್ಲಿ 4*400 ರಿಲೆಯಲ್ಲಿ ಚಿನ್ನದ ಪದಕ ಹಾಗೂ 400 ಮೀಟರ್ ನಲ್ಲಿ ಬೆಳ್ಳಿ ಪದಕ, 2014ರಲ್ಲಿ ಏಷಿಯನ್ ಜ್ಯೂನಿಯರ್ ಅಥ್ಲೆಟಿಕ್ಸ್ ನಲ್ಲಿ 4*400 ರಿಲೆಯಲ್ಲಿ ಚಿನ್ನದ ಪದಕ, 2019ರಲ್ಲಿ ಸೌತ್ ಏಷಿಯನ್ ಗೇಮ್ಸ್ ನಲ್ಲಿ 400 ಮೀಟರ್ ನಲ್ಲಿ ಕಂಚಿನ ಪದಕ, 2025 ಆಗಸ್ಟ್ 10ರಂದು ಭುವನೇಶ್ವರದಲ್ಲಿ ನಡೆದ ವಿಶ್ವ ಅಥ್ಲಿಟಿಕ್ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದಲ್ಲಿ 400 ಮೀಟರ್ ಸ್ಪರ್ಧೆಯಲ್ಲಿ ಚಿನ್ನದ ಪದಕದ ಜೊತೆಗೆ ರಾಷ್ಟ್ರೀಯ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕ ಗಳಿಸಿದ್ದಾರೆ.ವಿಜಯಕುಮಾರಿ ಅವರಿಗೆ ಈಗಾಗಲೇ ಏಕಲವ್ಯ ಪ್ರಶಸ್ತಿ, ಜೀಜಾಬಾಯಿ ಪ್ರಶಸ್ತಿ, ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಪ್ರಶಸ್ತಿ, ಮಂಡ್ಯ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಲಭಿಸಿವೆ.