ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಚರ್ಚೆ ಜೋರಾಗಿ ನಡೆಯುತ್ತಿರುವ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬುಧವಾರ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಚರ್ಚೆ ಜೋರಾಗಿ ನಡೆಯುತ್ತಿರುವ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬುಧವಾರ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆಯ ಮಾತುಗಳನ್ನಾಡಿದ್ದಾರೆ. ಈ ವಿಚಾರಗಳು ಹೆಚ್ಚಿನ ಚರ್ಚೆಯಾಗುತ್ತಿರುವಾಗಲೇ ಡಿ.ಕೆ. ಶಿವಕುಮಾರ್‌ ಬುಧವಾರ ಮಧ್ಯಾಹ್ನ ದೆಹಲಿಗೆ ತೆರಳುತ್ತಿದ್ದು, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆಗೆ ಬರುತ್ತಿರುವ ಕಾರಣ, ವಕೀಲರೊಂದಿಗೆ ಚರ್ಚೆ ನಡೆಸಲು ಡಿ.ಕೆ. ಶಿವಕುಮಾರ್‌ ದೆಹಲಿಗೆ ತೆರಳುತ್ತಿರುವ ಕುರಿತು ಉಪಮುಖ್ಯಮಂತ್ರಿ ಅವರ ಕಚೇರಿ ಮಾಹಿತಿ ನೀಡಿದೆ.

ಆದರೆ, ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗಳಿರುವಾಗಲೇ ದೆಹಲಿಗೆ ತೆರಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ದೆಹಲಿಗೆ ತೆರಳುವ ಡಿ.ಕೆ. ಶಿವಕುಮಾರ್‌, ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆಗಳಿವೆ.