ಎಸ್.ಎಂ.ಕೃಷ್ಣ ನನಗೆ ತಂದೆ ಸಮಾನರು: ಡಿಕೆಶಿ

| Published : Dec 11 2024, 12:46 AM IST

ಸಾರಾಂಶ

ಎಸ್.ಎಂ.ಕೃಷ್ಣ ಅವರು ನನಗೆ ತಂದೆ ಸಮಾನರು. ನನ್ನ ಬದುಕಿನಲ್ಲಿ ಆಗಿರುವ ಬದಲಾವಣೆಗೆ ಅವರ ಮಾರ್ಗದರ್ಶನವೇ ಕಾರಣ. ಅವರು ನವ ಕರ್ನಾಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಸ್.ಎಂ.ಕೃಷ್ಣ ಅವರು ನನಗೆ ತಂದೆ ಸಮಾನರು. ನನ್ನ ಬದುಕಿನಲ್ಲಿ ಆಗಿರುವ ಬದಲಾವಣೆಗೆ ಅವರ ಮಾರ್ಗದರ್ಶನವೇ ಕಾರಣ. ಅವರು ನವ ಕರ್ನಾಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಎಸ್.ಎಂ. ಕೃಷ್ಣ ಅವರ ಕೊಡುಗೆಗಳನ್ನು ನೆನೆದು ಮಂಗಳವಾರ ಭಾವುಕರಾಗಿ ಮಾತನಾಡಿದ ಅವರು, ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿದರೆ, ಎಸ್.ಎಂ ಕೃಷ್ಣ ವಿಕಾಸಸೌಧ ಕಟ್ಟಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ರೈಲು ಕೊಡುಗೆ ನೀಡಿದರು. ಅವರು ಮುಖ್ಯಮಂತ್ರಿ ಆಗಿದ್ದಾಗ ಕಡೆಯ ಬಜೆಟ್ ಗಾತ್ರ 26 ಸಾವಿರ ಕೋಟಿ ರು. ಆದರೆ, ಇಂದು 3.83 ಲಕ್ಷ ಕೋಟಿ ರು.ಗೆ ಏರಿದೆ. ಅವರು ರಾಜ್ಯಕ್ಕೆ ಆರ್ಥಿಕ ಶಕ್ತಿ ತುಂಬಿದರು ಎಂದು ಡಿ.ಕೆ.ಶಿವಕುಮಾರ್ ಕೊಂಡಾಡಿದರು.

ರಾಜ್ಯ ವಿಕಾಸವಾಗಲಿ ಎಂದು ವಿಕಾಸಸೌಧ, ಎಲ್ಲರಿಗೂ ಉದ್ಯೋಗ ಸಿಗಲಿ ಎಂದು ಉದ್ಯೋಗ ಸೌಧ ಕಟ್ಟಿದರು. ರಾಜ್ಯದಲ್ಲಿ ಪಾನೀಯ ನಿಗಮ ಸ್ಥಾಪಿಸಿ ರಾಜ್ಯದ ಬೊಕ್ಕಸಕ್ಕೆ ಹಣ ಬರುವಂತೆ ಮಾಡಿದರು. ಕಾವೇರಿ ನೀರಿಗಾಗಿ ಅಧಿಕಾರ ತ್ಯಜಿಸಲು ಮುಂದಾಗಿದ್ದರು. ಡಾ.ರಾಜಕುಮಾರ್ ಅಪಹರಣವಾದಾಗ ಸುರಕ್ಷಿತವಾಗಿ ಕರೆತರಲು ಪಟ್ಟ ಪರಿಶ್ರಮ ನಮಗೆ ಮಾತ್ರ ಗೊತ್ತು ಎಂದು ಡಿ.ಕೆ.ಶಿವಕುಮಾರ್ ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಸ್ತ್ರೀಶಕ್ತಿ ಕಾರ್ಯಕ್ರಮ, ಯಶಸ್ವಿನಿ ಕಾರ್ಯಕ್ರಮ, ರೈತರ ಜಮೀನಿಗಾಗಿ ಭೂಮಿ ಸಾಫ್ಟ್‌ವೇರ್, ಬೆಂಗಳೂರನ್ನು ಐಟಿ ರಾಜಧಾನಿಯಾಗಿ ಮಾಡಿ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಮೀನುಗುವಂತೆ ಮಾಡಿದರು. ದಕ್ಷ ಆಡಳಿತಕ್ಕೆ ಅವರು ಮಾದರಿಯಾಗಿದ್ದರು. ಬೆಂಗಳೂರು ಅಭಿವೃದ್ಧಿ, ಇಲ್ಲಿನ ಉದ್ಯೋಗ ಸೃಷ್ಟಿ ವ್ಯವಸ್ಥೆ ಅವರ ಸಾಧನೆಗೆ ಸಾಕ್ಷಿ ಎಂದು ಡಿ.ಕೆ.ಶಿವಕುಮಾರ್ ಸ್ಮರಿಸಿದರು.ಅವರು ನನ್ನ ಸಂಬಂಧಿ. ನನ್ನ ರಾಜಕೀಯ ಮಾರ್ಗದರ್ಶಕರು ಎಂಬುದು ಬೇರೆ ವಿಚಾರ. ಅವರಿಂದ ಸಾಕಷ್ಟು ವಿಚಾರ ಕಲಿತ ಹೆಮ್ಮೆ ನಮಗಿದೆ. ದೂರದೃಷ್ಟಿಯುಳ್ಳ ಶ್ರೇಷ್ಠ ವ್ಯಕ್ತಿ. ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

====ಸೋಮನಹಳ್ಳಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ: ಬೆಂಗಳೂರಿನಿಂದ ಮದ್ದೂರಿನ ಸೋಮನಹಳ್ಳಿಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಬುಧವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 3.00ಗಂಟೆವರೆಗೂ ಮಂಡ್ಯ, ಮೈಸೂರು ಭಾಗದ ಜನರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.