ಡಿಸಿಎಂ ಪರಿಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತೆ

| Published : Nov 21 2025, 01:00 AM IST

ಡಿಸಿಎಂ ಪರಿಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಘಟನೆ, ಪರಿಶ್ರಮ ಹಾಗೂ ಹೋರಾಟದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಜನರಿಗೆ ಉತ್ತಮ ಆಡಳಿತ ಕೊಡಲು ಸಾಧ್ಯವಾಗಿದೆ. ಅವರ ಪರಿಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂದು ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ತಿಳಿಸಿದರು.

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಘಟನೆ, ಪರಿಶ್ರಮ ಹಾಗೂ ಹೋರಾಟದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಜನರಿಗೆ ಉತ್ತಮ ಆಡಳಿತ ಕೊಡಲು ಸಾಧ್ಯವಾಗಿದೆ. ಅವರ ಪರಿಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂದು ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ತಿಳಿಸಿದರು.

ತಾಲೂಕಿನ ಬಿಳಗುಂಬ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಸಂಜೀವಿನಿ ಕಟ್ಟಡ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನಿ ಸಿಪಾಯಿ. ಅವರು ಅಧಿಕಾರಕ್ಕಾಗಿ ಎಂದೂ ಅವಕಾಶವಾದಿಗಳಾಗಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ರವರು ತಮ್ಮ ಜವಬ್ದಾರಿಯನ್ನು ನಿರ್ವಹಿಸುವ ಹಾಗೂ ಪಕ್ಷ ಸಂಘಟನೆ ಉದ್ದೇಶದಿಂದ ವರಿಷ್ಟರೊಂದಿಗೆ ಚರ್ಚಿಸಲು ದೆಹಲಿಗೆ ಹೋಗಿ ಬರುತ್ತಾರೆ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ. ಅವರ ಪರಿಶ್ರಮ ಮತ್ತು ಪ್ರಾರ್ಥನೆ ಯಾವತ್ತಿಗೂ ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನೊಬ್ಬ ಶಾಸಕನಾಗಿದ್ದು, ಜನರ ಸೇವೆಗೆ ನನ್ನೆಲ್ಲ ಸಮಯವನ್ನು ಮೀಸಲಿಟ್ಟಿದ್ದೇನೆ. ನನಗೆ ನನ್ನದೆ ಆದ ಜವಬ್ದಾರಿಯಿದ್ದು, ರಾಜಕೀಯವಾಗಿ ಕ್ಷೇತ್ರ ಮುಂದುವರೆದಿದೆ. ಆದರೆ , ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ರಾಮನಗರ ಕ್ಷೇತ್ರದ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸುತ್ತಾ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ನನಗೆ ಯಾವ ವಿಚಾರವಾಗಿಯೂ ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಹಾಗೂ ರಾಜ್ಯದ ಉಸ್ತುವಾರಿಗಳಾದ ಸುರ್ಜೇವಾಲ ಸೂಚನೆ ನೀಡಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ಗೆ ಬೇರೆ ಕೆಲಸ ಇಲ್ಲ, ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕೆ ಮಾಡುವುದೇ ಅವರ ಕೆಲಸವಾಗಿದೆ. ಅವರು ಟೀಕೆ ಟಿಪ್ಪಣಿ ಮಾಡಿ ನಮ್ಮನ್ನು ಎಚ್ಚರಿಸುತ್ತಿರಲಿ, ನಾವು ಜವಬ್ದಾರಿಯಿಂದ ಕೆಲಸ ಮಾಡಿ ತೋರಿಸುತ್ತೇವೆ ಎಂದು ತಿರುಗೇಟು ನೀಡಿದರು.

ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಹೆಚ್ಚಿನ ಬಹುಮತ ನೀಡಿದ್ದರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಕಳೆದ ಎರಡೂವರೆ ವರ್ಷಗಳಲ್ಲಿ ಜನರಿಗೆ ಕೊಟ್ಟ ಮಾತಿನಂತೆ ನಡೆದು ಕೊಂಡು ಬಂದಿದೆ.

ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗುವ ಜೊತೆಗೆ ಐದು ಗ್ಯಾರಂಟಿ ಯೋಜನೆಯಡಿ 2.83 ಲಕ್ಷ ಯಜಮಾನಿಯರಿಗೆ 23 ಕಂತುಗಳಲ್ಲಿ 1,150 ಕೋಟಿ ರು. ಹಣ ಪಾವತಿಯಾಗಿದೆ. ಈ ಜಿಲ್ಲೆಗೆ ಪ್ರತಿ ತಿಂಗಳು 53 ಕೋಟಿ ರು ಹಣ ಮಧ್ಯವರ್ತಿಗಳ ಹಾವಳಿಯಿಲ್ಲದೆ ಹೆಣ್ಣುಮಕ್ಕಳ ಖಾತೆಗೆ ನೇರವಾಗಿ ಪಾವತಿ ಯಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗ್ರಾಮಸ್ಥರಿಂದ ಮನವಿ ಸಲ್ಲಿಕೆ :

25ನೇ ವಾರ್ಡಿನ ಬೋಳಪ್ಪನಹಳ್ಳಿ ಕೆರೆ ಬಳಿ ಬಿಳಗುಂಬ ಗ್ರಾಮಕ್ಕೆ ತೆರಳುವ ರಸ್ತೆ ವಿಸ್ತರಣೆ ಕಾಮಗಾರಿ ತೊಡಕಾಗಿದ್ದು, ಈ ಬಗ್ಗೆ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು. ಹಾಗೆಯೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳು ಮತ್ತು ಕುಂದು ಕೊರತೆಗಳ ಬಗ್ಗೆ ಸಾರ್ವಜನಿಕರು ಶಾಸಕರಿಗೆ ಮನವಿಗಳನ್ನು ಸಲ್ಲಿಸಿದರು.

ಇದೇ ವೇಳೆ ಬಿಳಗುಂಬ ಗ್ರಾಮದ ಸುನಿಲ್‌ಕುಮಾರ್, ವಿಕಾಸ್, ಅಭಿ ಮತ್ತು ಧನಂಜಯ್ಯ ಅವರು ಜೆಡಿಎಸ್ ತೊರೆದು ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಚ್.ರಾಜು, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಬಿಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ.ನವೀನ್‌ಗೌಡ, ಉಪಾಧ್ಯಕ್ಷೆ ಸೌಭಾಗ್ಯಮ್ಮ, ಸದಸ್ಯರಾದ ಚಂದ್ರಶೇಖರ್ (ಕೆಂಚೇಗೌಡ), ಶಿವಲಿಂಗಯ್ಯ, ನಾಗಮ್ಮ, ಯಶೋಧಮ್ಮ, ಭಾಗ್ಯಮ್ಮ, ಲೋಕೇಶ್, ಶಿವಣ್ಣ, ಮಾಜಿ ಅಧ್ಯಕ್ಷರಾದ ಪ್ರಭಣ್ಣ, ಪಾಪಣ್ಣ, ತಾಪಂ ಮಾಜಿ ಅಧ್ಯಕ್ಷ ಪ್ರಾಣೇಶ್, ಮುಖಂಡರಾದ ರಘು, ಬಿ.ಟಿ.ರಾಜೇಂದ್ರ, ಉಮಾಶಂಕರ್, ಕಾಂಗ್ರೆಸ್ ಸಮಿತಿ ಕಾರ್ಮಿಕ ಘಟಕದ ಅಧ್ಯಕ್ಷ ದೇವರಾಜು, ತಾಪಂ ಸಹಾಯಕ ನಿರ್ದೇಶಕ ರೂಪೇಶ್‌ಕುಮಾರ್, ಪಿಡಿಒ ಎಂ.ಎಚ್.ಮಹೇಶ್, ಕಾರ್ಯದರ್ಶಿ ತಿಮ್ಮಯ್ಯ ಹಾಜರಿದ್ದರು.

20ಕೆಆರ್ ಎಂಎನ್ 3.ಜೆಪಿಜಿ

ಬಿಳಗುಂಬ ಗ್ರಾಮದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಸಮ್ಮುಖದಲ್ಲಿ ಯುವ ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.