ಸಾರಾಂಶ
ಎನ್.ನಾಗೇಂದ್ರಸ್ವಾಮಿ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಸಾರ್ವಜನಿಕ ಶಿಕ್ಷಣ ಇಲಾಖೆಯ ಚಾ.ನಗರ ಉಪ ನಿರ್ದೇಶಕರು ಕೇವಲ ಕೊಳ್ಳೇಗಾಲದ ಅಬ್ದುಲ್ ಕಲಾಂ ಸಂಸ್ಥೆಯಡಿ ಮನವಿ ಸಲ್ಲಿಸಿದ್ದಕ್ಕೆ ಪರಿಶೀಲಿಸದೆ ಯೋಗ ಮತ್ತು ಗಣಕಯಂತ್ರ ತರಬೇತಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಂಸ್ಥೆಗೆ ಆದೇಶ ನೀಡಿದ ಪ್ರಮಾದಿಂದಾಗಿ ಜಿಲ್ಲಾದ್ಯಂತ ಕೊಳ್ಳೇಗಾಲ, ಯಳಂದೂರು, ಹನೂರು, ಗುಂಡ್ಲುಪೇಟೆ, ಚಾ.ನಗರ ಹೀಗೆ ಹಲವು ಕಡೆ ಸಾಕಷ್ಟು ಮಂದಿ ನೌಕರಿ ಸಿಗುತ್ತೆ ಎಂಬ ಆಸೆಗೆ ಲಕ್ಷಾಂತರ ರು. ಕಳೆದುಕೊಳ್ಳುವಂತಾಗಿ ಮೋಸ ಹೋಗಿದ್ದಾರೆ.ಹೌದು, ಈ ಕುರಿತು ಅಬ್ದುಲ್ ಕಲಾಂ ಸಂಸ್ಥೆಯಡಿ ಕೆಲಸಕ್ಕೆ ಸೇರಿಸಿಕೊಳ್ಳಲು ಇಲಾಖೆ ಹೆಸರೇಳಿ ಲಕ್ಷಾಂತರ ರು.ಸುಲಿಗೆ ನಡೆಸಲಾಗುತ್ತಿದೆ ಎಂಬುದರ ಕುರಿತು ಕನ್ನಡಪ್ರಭ ಸುದೀರ್ಘ ವರದಿ ಪ್ರಕಟಿಸಿ ಡಿ.27ರ ಪತ್ರಿಕೆಯಲ್ಲಿ ಗಮನ ಸೆಳೆಯಲಾಗಿತ್ತು. ಇದಕ್ಕೂ ಮುನ್ನ ಡಿ.25ರಂದು ಹನೂರು ಬಿಇಒ ಗುರುಲಿಂಗಯ್ಯ ಅವರು ಕಲಾಂ ಸಂಸ್ಥೆಯಿಂದ ನೇಮಕಗೊಂಡ ಅಟೆಂಡರ್‌ಗಳನ್ನು ಮಾತ್ರ ಬಿಡುಗಡೆಗೊಳಿಸಿ ಎಂಬ ಆದೇಶದ ಕುರಿತು, ಆ ಆದೇಶ ಹುಟ್ಟು ಹಾಕಿದ ಸಂಶಯ ಕುರಿತು ಸಹಾ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೆ ಇಲಾಖೆಯು ಎಚ್ಚೆತ್ತು ನಾವು ನೀಡಿದ ಆದೇಶವನ್ನೇ ಹಿಂಪಡೆದಿದ್ದೇವೆ ಎಂದು ಡಿಡಿಪಿಐ ಹೇಳಿಕೆ ಅಚ್ಚರಿ ನೀಡಿದೆ. ಮಾತ್ರವಲ್ಲ ನಾನಾ ಸಂಶಯಗಳಿಗೂ ಎಡೆ ಮಾಡಿಕೊಟ್ಟಂತಾಗಿದೆ.
ಡಿಡಿಪಿಐ ಅನುಮತಿ ಬಳಿಕ ನೇಮಕಾತಿಗೆ ಲಕ್ಷಾಂತರ ರು.ವಸೂಲಿ!: ಈ ವಿಚಾರದಲ್ಲಿ ಒರ್ವ ಫಲಾನುಭವಿಯಿಂದ ₹50ಸಾವಿರದಿಂದ 1,60,000 ತನಕ ಅನಧಿಕೃತವಾಗಿ ಪಡೆಯಲಾಗಿದೆ, ನೌಕರಿ ಕಾಯಂ ಆಗುತ್ತೆ ಎಂದು ಸಹಾ ನಂಬಿಸಲಾಗಿದೆ. ಮೊದಲು 11ತಿಂಗಳು, ನಂತರ ನಿಮ್ಮ ಸೇವಾ ಅವಧಿ 5 ವರ್ಷದ ತನಕ ಇರುತ್ತೆ ಎಂದು ನಂಬಿಸಲಾಗಿದೆ. ಮೊದಲೇ ಹಿಂದುಳಿದ ಜಿಲ್ಲೆ, ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಳ. ಇನ್ನು ಡಿಡಿಪಿಐ ಆದೇಶವಿದೆ. ಹಾಗಾಗಿ ಸಂಸ್ಥೆಯ ಕೆಲವರ ತಂತ್ರಗಾರಿಕೆಗೆ ಮಣಿದು ಹಣ ನೀಡಿ ಕೆಲಸಗಿಟ್ಟಿಸಿದ್ದಾರೆ. ಆದರೆ ಕೆಲಸ ಪಡೆದ ತಿಂಗಳೊಳಗೆ ವಾಪಸ್ಸು ಬರುವ ಸ್ಥಿತಿ ನಿರ್ಮಾಣವಾಗಿದ್ದು ಈಗ ಹಣ ನೀಡಿ ಕಳೆದುಕೊಂಡವರ ಪಾಡೇನು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.ಯಾವುದೆ ಒಬ್ಬ ಉನ್ನತ ಸ್ಥಾನದಲ್ಲಿರುವ ಅಧಿಕಾರಿ ಜವಾಬ್ದಾರಿ ಅರಿತು ಆದೇಶ ಹೊರಡಿಸಿದ್ದರೆ ಇಂದು ಆಗಬಹುದಾದ ದೊಡ್ಡ ಪ್ರಮಾದ ತಪ್ಪಿಸಬಹುದಿತ್ತು, ಆದರೆ ನಿಯಮ ಮೀರಿ ಆದೇಶ ನೀಡಿದ್ದಕ್ಕಾಗಿ ಇಂದು ಶಿಕ್ಷಣ ಇಲಾಖೆಯೇ ತಲೆ ತಗ್ಗಿಸುವಂತಾಗಿರುವುದು ವಿಷಾದದ ಸಂಗತಿ. ಸದ್ಯ ಶಾಲೆಯಲ್ಲಿ ಯೋಗ, ಕಂಪ್ಯೂಟರ್ ಮತ್ತು ಅಟೆಂಡರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಮೊದಲೆ ಕಲಾಂ ಸಂಸ್ಥೆಗೆ ಹಣ ನೀಡಿ ಬಂದಿದ್ದಾರೆ, ತಿಂಗಳ ಸಂಬಳ ಬರುತ್ತೆ ಎಂಬ ಅಭಿಲಾಷೆಯೊಂದಿಗೆ ನಮಗೊಂದು ಕೆಲಸ ಸಿಕ್ಕಿದೆ ಎಂದು ಸಂತಸದಲ್ಲಿದ್ದಾರೆ, ಆದರೆ ಈಗ ಅವರನ್ನು ಶಾಲೆಯಿಂದ ಹೊರಗೆ ಕಳುಹಿಸಿ ಎಂಬ ಡಿಡಿಪಿಐ ಸಂದೇಶ ಅವರಲ್ಲಿ ಅಚ್ಚರಿ ಮಾತ್ರವಲ್ಲ ಕಂಗಾಲಾಗುವಂತೆ ಮಾಡಲಿದೆ. ಈ ಪ್ರಕರಣದಲ್ಲಿ ಸಂಸ್ಥೆಯ ಕೆಲವರ ಜೊತೆ ಶಿಕ್ಷಣ ಇಲಾಖೆಯ ಕೆಲವರು ಕೈಜೋಡಿಸಿದ್ದೆ ಇಂತಹ ಅದ್ವಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಬಿಇಒ ಒಬ್ಬರು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅದರಲ್ಲೂ ಎಷ್ಟು ಮಂದಿಯನ್ನು ಆಯಾ ಶೈಕ್ಷಣಿಕ ವಲಯಗಳಲ್ಲಿ ನೇಮಿಸಿಕೊಳ್ಳಲಾಗಿದೆ ಎಂಬ ಪ್ರಶ್ನೆಗೆ ಹನೂರು ಬಿಇಒ ಗುರುಲಿಂಗಯ್ಯ ಅವರು ಉತ್ತರಿಸಲು ಸಿದ್ದರಿಲ್ಲ, ಕಾರಣ ಅವರಿಗೆ ಎಷ್ಟು ಮಂದಿ ಕೆಲಸ ಸೇರಿಕೊಂಡಿದ್ದಾರೆ ಎಂಬುದೇ ತಿಳಿದಿಲ್ಲ, ಆದರೂ ಅಟೆಂಡರ್‌ಗಳನ್ನು ವಾಪಸ್ಸು ಕಳುಹಿಸಿ ಎಂಬ ಆದೇಶದ ಹಿನ್ನೆಲೆ ಪ್ರಶ್ನಿಸಿದರೂ ಅವರು ಉತ್ತರಿಸಲು ಸಿದ್ಧರಿಲ್ಲ ಎನ್ನುತ್ತದೆ ಇಲಾಖೆ ಮೂಲಗಳು. ಅದೇ ರೀತಿಯಲ್ಲಿ ಕೊಳ್ಳೇಗಾಲದಲ್ಲಿ 33ಮಂದಿಯನ್ನು ಡಿಡಿಪಿಐ ಆದೇಶದ ಮೇರೆಗೆ ನೇಮಿಸಿಕೊಳ್ಳಲಾಗಿದೆ, ಅವರನ್ನು ವಾಪಸ್ಸು ಕಳುಹಿಸಿ ಎಂಬ ಡಿಡಿಪಿಐ ಆದೇಶ ನಮಗೆ ಸಿಕ್ಕಿಲ್ಲ, ಬಂದರೆ ಪರಿಶೀಲಿಸಲಾಗುವುದು ಎಂದು ಬಿಇಒ ಮಂಜುಳ ತಿಳಿಸಿದ್ದಾರೆ.ನಾವೇ ಅರ್ಜಿ ಕರೆದು ಅರ್ಹರನ್ನು ನೇಮಿಸಿಕೊಳ್ಳುತ್ತೇವೆ:
ಸದ್ಯ ಸಂಸ್ಥೆಯ ಮನವಿ ಪರಿಗಣಿಸಿ ಆದೇಶ ನೀಡಲಾಗಿತ್ತು, ಆದರೆ ಇಲ್ಲಿನ ಲೋಪ, ಅಕ್ರಮ ಕಂಡು ಆದೇಶವನ್ನು ಹಿಂಪಡೆಯಲಾಗಿದ್ದು ಮುಂದಿನ ದಿನಗಳಲ್ಲಿ ಅರ್ಹತೆಗನುಗುಣವಾಗಿ ನೇಮಕಕ್ಕಾಗಿ ನಾವೇ ಅರ್ಜಿ ಕರೆಯುತ್ತೇವೆ ಎಂದು ಡಿಡಿಪಿಐ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಸಂಸ್ಥೆ ಉಚಿತವಾಗಿ ನಾವೇ ಸಂಬಳ ನೀಡುತ್ತೇವೆ, ನೀವು ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅನುಮತಿ ನೀಡಲಾಯಿತು.ಇಲ್ಲಿ ಅವ್ಯವಹಾರ ಸಂಬಂಧ ಹಣ ನೀಡಿ ಕಳೆದುಕೊಂಡವರು ಇಲಾಖೆಗೆ ದೂರು ಸಲ್ಲಿಸಿದರೆ ನಾವು ಸಂಸ್ಥೆಯವರಿಂದ ಹಣ ವಾಪಸ್ಸು ನೀಡುವ ಬಗ್ಗೆ ಚರ್ಚಿಸಿ ಎಚ್ಚರಿಕೆ ನೀಡುತ್ತೇನೆ, ಹಣ ವಾಪಸ್ಸು ನೀಡದ ಪಕ್ಷದಲ್ಲಿ ಕ್ರಿಮಿನಲ್ ಮೊಕದ್ದಮೆ ನೀಡುವ ನಿಟ್ಟಿನಲ್ಲಿ ಕ್ರಮವಹಿಸುವೆ. ಈಗಾಗಲೇ 10ದಿನದ ಹಿಂದೆ ಅಬ್ದುಲ್ ಕಲಾಂ ಸಂಸ್ಥೆ ನೀಡಿದ ಆದೇಶವನ್ನು ಹಿಂಪಡೆಯಲಾಗಿದ್ದು ರದ್ದು ಮಾಡಲಾಗಿದೆ. ಆದೇಶ ಪ್ರತಿ ಇಂದು ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಸೋಮವಾರ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಪಾಪ ಸೇರಿಸಿಕೊಳ್ಳಿ ಅಂದಿದ್ರಂತೆ ಬಿಇಒ:ಇತ್ತೀಚೆಗೆ ಹನೂರು ಬಿಆರ್‌ಸಿ ಕೇಂದ್ರದಲ್ಲಿ ನಡೆದ ಶಿಕ್ಷಕರ ಸಭೆಯಲ್ಲಿ ಕೆಲವರು ಹಣ ನೀಡಿ ಶಾಲೆಗೆ ಬಂದಿದ್ದಾರೆ. ಪಾಪ ಅವರಾರಿಗೂ ಮುಖ್ಯಶಿಕ್ಷಕರು ತೊಂದರೆ ನೀಡದಂತೆ ಸೇರಿಸಿಕೊಳ್ಳಿ ಎಂದು ಗುರುಲಿಂಗಯ್ಯ ಅವರು ಶಿಕ್ಷಕರ ಸಭೆಯಲ್ಲಿ ಪ್ರಸ್ತಾಪಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಬಿಇಒ ಅವರಿಗೆ ಡಿಡಿಪಿಐ ಮೌಖಿಕವಾಗಿ ನೇಮಕಗೊಂಡವರ ಆದೇಶ ರದ್ದುಗೊಳಿಸಿ ವಾಪಸ್ಸು ಕಳುಹಿಸಲು ಸೂಚಿಸಿದ್ದರು ಎನ್ನಲಾಗಿದೆ. ಆದರೆ ಹನೂರು ಬಿಇಒ ಅವರು ಕೇವಲ ಅಟೆಂಡರ್ ನೇಮಕಾತಿ ಆದೇಶ ಹಿಂಪಡೆದಿರುವ ಕುರಿತು ಆದೇಶಿಸಿ ಸಂಬಂಧಿಸಿದ ಮುಖ್ಯಶಿಕ್ಷಕರಿಗೆ ನಿರ್ದೇಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟಾರೆ ಈ ಪ್ರಕರಣದಲ್ಲಿ ಡಿಡಿಪಿಐ ಅವರು ಸಂಬಂಧಪಟ್ಟ ಜಿಪಂ ಸಿಇಒ, ಜಿಲ್ಲಾಧಿಕಾರಿ ಅನುಮತಿ ಪಡೆದು ಕಲಾಂ ಸಂಸ್ಥೆಯ ನೇಮಕಾತಿ ಪ್ರಕ್ರಿಯೆಗೆ ಅನುಮತಿ ನೀಡಬೇಕಿತ್ತು. ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ, ಅದರಲ್ಲೂ ಹನೂರಿನಲ್ಲೂ ಈ ನೇಮಕಾತಿಗೆ ದಂಧೆಯೇ ನಡೆದಿದೆ ಎಂದು ಹೇಳಲಾಗಿದ್ದು ಈ ಸಂಬಂಧ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಉನ್ನತ ತನಿಖೆ ನಡೆಯಬೇಕಿದೆ. ಜೊತೆಗೆ ಹಣ ಕಳೆದುಕೊಂಡವರ ನೆರವಿಗೂ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ತಾನೇ ಮಾಡಿದ ತಪ್ಪಿಗೆ ನಿಲ್ಲಬೇಕಿದೆ ಎನ್ನುತ್ತಾರೆ ನಾಗರೀಕರು.ಬಡ್ಡಿ ಸಾಲ, ಚಿನ್ನ ಅಡವಿಟ್ಟು ಹಣ ನೀಡಿಕೆನೇಮಕಗೊಂಡ ನೂರಾರು ಮಂದಿ ಪೈಕಿ ಶೇ.80ರಷ್ಟು ಮಂದಿ ಬಡ್ಡಿಗಾಗಿ ಸಾಲ ಮಾಡಿದ್ದರೆ, ಇನ್ನು ಕೆಲವರು ತಮ್ಮ ಬಳಿಯಿದ್ದ ಚಿನ್ನಾಭರಣಗಳನ್ನು ಗಿರಿವಿಗೆ ಇಟ್ಟು ಕೆಲಸ ಸಿಗುತ್ತೆ ಎಂಬ ಆಸೆಯಿಂದ ಸಂಸ್ಥೆಗೆ ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲ ಶಿಕ್ಷಣ ಇಲಾಖೆಯ ಸಿಬ್ಬಂದಿಗೂ ನೀಡಲಾಗಿದೆ. ಹಾಗಾಗಿ ಇಂದು ಇಲಾಖೆ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದರೆ ಅವರ ಪಾಡೇನು ಎಂಬ ಪ್ರಶ್ನೆಯೂ ಉದ್ಬವಿಸಿದ್ದು ವಂಚಿತರು ಪೊಲೀಸ್ ಠಾಣಾ ಮೆಟ್ಟಿಲೇರುತ್ತಾರಾ ಕಾದು ನೋಡಬೇಕಿದೆ.
ಹಣ ನೀಡಿದವರು ದೂರು ನೀಡಿದರೆ ಸಂಸ್ಥೆ ವಿರುದ್ಧ ಕ್ರಮ: ಡಿಡಿಪಿಐಅಬ್ದುಲ್ ಕಲಾಂ ಸಂಸ್ಥೆ ಗಣಕಯಂತ್ರ ತರಬೇತಿ ಮತ್ತು ಯೋಗ ಶಿಕ್ಷಕರನ್ನು ಉಚಿತವಾಗಿ ನೇಮಿಸಿ ಶಾಲೆಗೆ ಕಳುಹಿಸುವ ಕುರಿತು ಇಲಾಖೆಯಿಂದ ಹೊರಡಿಸಿದ್ದ ಆದೇಶ ಹಿಂಪಡೆಯಲಾಗಿದೆ. ಸಂಬಂಧಿಸಿದ ಎಲ್ಲ ಶಾಲೆಗಳ ಶಿಕ್ಷಕರು, ಬಿಇಒಗಳು ಶಾಲೆಗೆ ಹಾಜರಾಗಿರುವವರನ್ನು ವಾಪಸ್ಸು ಕಳುಹಿಸಲು ನಿರ್ದೇಶನ ನೀಡಲಾಗಿದೆ. ಈ ಸಂಸ್ಥೆ ನೇಮಕಾತಿ ವಿಚಾರದಲ್ಲಿ ಅರ್ಹರನ್ನು ಪರಿಗಣಿಸಿಲ್ಲ. ಅಲ್ಲದೆ ನೇಮಕದ ವೇಳೆ ನಿಯಮ ಗಾಳಿಗೆ ತೂರಿ ಹಣ ಪಡೆದಿದ್ದರೆ, ಪಡೆದ ಬಗ್ಗೆ ಫಲಾನುಭವಿಗಳಿಗೆ ಇಲಾಖೆಗೆ ದೂರು ನೀಡಿದರೆ ಮೊದಲು ಅನ್ಯಾಯಕ್ಕೊಳಗಾದವರಿಗೆ ಹಣ ಹಿಂತಿರುಗಿಸಲು ಸೂಚಿಸಲಾಗುವುದು, ಒಂದು ವೇಳೆ ಇದಕ್ಕೆ ಅನುಮತಿ ಪಡೆದ ಸಂಸ್ಥೆ ಸಹಕರಿಸದಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮವಹಿಸಲಾಗುವುದು ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ತಿಳಿಸಿದ್ದಾರೆ.