ತಾಲೂಕಿನ ಕೋಣಾರೆಯ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ೩ ದಿನಗಳ ಕಾಲ ಆಯೋಜಿಸಿದ್ದ ದಿ.ದೇವರು ಹೆಗಡೆ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಬಹುವಿಧ ವಿಶೇಷಗಳಿಂದ ಜನಮಾನಸದಲ್ಲಿ ಅಚ್ಚೊತ್ತಿದಂತೆ ಶಾಶ್ವತ ನೆಲೆಯಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೆರೆಕೈ ಉಮಾಕಾಂತ ಭಟ್ । ಜನಮನಸೂರೆಗೊಂಡ ಯಕ್ಷಗಾನ
ಕನ್ನಡಪ್ರಭ ವಾರ್ತೆ ಕುಮಟಾತಾಲೂಕಿನ ಕೋಣಾರೆಯ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ೩ ದಿನಗಳ ಕಾಲ ಆಯೋಜಿಸಿದ್ದ ದಿ.ದೇವರು ಹೆಗಡೆ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಬಹುವಿಧ ವಿಶೇಷಗಳಿಂದ ಜನಮಾನಸದಲ್ಲಿ ಅಚ್ಚೊತ್ತಿದಂತೆ ಶಾಶ್ವತ ನೆಲೆಯಾಯಿತು.
ಕೆರೆಕೈ ಉಮಾಕಾಂತ ಭಟ್‌ರಿಂದ ಉದ್ಘಾಟನೆಗೊಂಡ ದೇವರು ಹೆಗಡೆ ಜನ್ಮಶತಮಾನೋತ್ಸವದ ಆರಂಭದ ದಿನ ಮುಖ್ಯ ಅತಿಥಿಯಾಗಿ ಉದ್ಯಮಿ ಮಂಜುನಾಥ ಭಟ್ ಸುವರ್ಣಗದ್ದೆ ಪಾಲ್ಗೊಂಡಿದ್ದು, ದೇವರು ಹೆಗಡೆ ಸಂಸ್ಮರಣೆಯಲ್ಲಿ ಲಕ್ಷ್ಮೀ ದೇವರು ಹೆಗಡೆ ಅವರಿಗೆ ಮತ್ತು ವೆಂಕಟ್ರಮಣ ಹೆಗಡೆ ಹುಳಸೆಮಕ್ಕಿ ಅವರ ಸಂಸ್ಮರಣೆಯಲ್ಲಿ ಜಿ.ವಿ. ಹೆಗಡೆ ಹುಳಸೆಮಕ್ಕಿ ಅವರಿಗೆ ಗೌರವ ಸಮರ್ಪಿಸಲಾಯಿತು. ಬಳಿಕ ಸೀತಾಪಹಾರ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು. ಎರಡನೇ ದಿನ ಕಲಾವಿದ ಕೃಷ್ಣ ಯಾಜಿ ಬಳ್ಕೂರು, ಉದ್ಯಮಿ ವಿದ್ಯಾಧರ ಹೆಗಡೆ ಕಲ್ಲಬ್ಬೆ ಪಾಲ್ಗೊಂಡಿದ್ದು ದಿ.ಕೃಷ್ಣ ಭಾಗವತ ಕಡತೋಕಾ ಅವರ ಸಂಸ್ಮರಣೆಯಲ್ಲಿ ಎಂ.ಕೆ. ಭಟ್ ಕಡತೋಕಾ ಅವರನ್ನು ಹಾಗೂ ವಿಷ್ಣು ಹೆಗಡೆ ಯಡೆಕೇರಿ ಅವರ ಸಂಸ್ಮರಣೆಯಲ್ಲಿ ಎಲ್.ವಿ. ಭಟ್ ಕಲ್ಲಬ್ಬೆ ಅವರನ್ನು ಗೌರವಿಸಲಾಯಿತು. ನಂತರ ಗದಾಯುದ್ಧ ಯಕ್ಷಗಾನ ಜನಮನಸೂರೆಗೊಂಡಿತು.3ನೇ ದಿನ ಸಮಾರೋಪದಲ್ಲಿ ಅತಿಥಿಗಳಾಗಿ ಕೆರೆಮನೆ ಶಿವಾನಂದ ಹೆಗಡೆ, ಮೋಹನ ಹೆಗಡೆ ಹೆರವಟ್ಟಾ ಪಾಲ್ಗೊಂಡಿದ್ದು ಸಂಪೂರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷವೇದಿಕೆಯ ಅಧ್ಯಕ್ಷ ಸುಬ್ರಾಯ ಭಟ್ ದಾನಿಗಳಿಗೆ ಗೌರವಿಸಿದರು. ಬಳಿಕ ಭಕ್ತಪ್ರಹ್ಲಾದ ಯಕ್ಷಗಾನದಲ್ಲಿ ಹಿರಣ್ಯ ಕಶಿಪುವಾಗಿ ಸುಬ್ರಹ್ಮಣ್ಯ ಚಿಟ್ಟಾಣಿ, ಕಯಾಧುವಾಗಿ ಸುಬ್ರಹ್ಮಣ್ಯ ಮೂರೂರು, ತಿಲಕ್ ಹೆಗಡೆ ಪ್ರಹ್ಲಾದನ ಪಾತ್ರ ನರಸಿಂಹನಾಗಿ ಆನಂದ ಭಟ್ ಕೆಕ್ಕಾರು ಭಾವಪೂರ್ಣವಾಗಿ ಅಭಿನಯಿಸಿ ಕಲಾರಸಿಕರನ್ನು ಖುಷಿಪಡಿಸಿದರು.ಕಾರ್ಯಕ್ರಮದ ಎಲ್ಲಾ ದಿನಗಳಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಕಿಕ್ಕಿರಿದು ಸೇರಿದ್ದ ಯಕ್ಷಗಾನ ಮತ್ತು ದಿ. ದೇವರು ಹೆಗಡೆ ಅಭಿಮಾನಿಗಳು ಮೂರೂ ದಿನಗಳಲ್ಲಿ ಹೆಸರಾಂತ ಕಲಾವಿದರ ಸಂಯೋಜನೆಯಲ್ಲಿ ಹಿಮ್ಮೇಳ ಹಾಗೂ ಮುಮ್ಮೇಳದ ವೈಭವಕ್ಕೆ ಸಾಕ್ಷಿಯಾದರು. ಹಿಮ್ಮೇಳದಲ್ಲಿ ರಾಘವೇಂದ್ರ ಜನ್ಸಾಲೆ, ಸರ್ವೇಶ್ವರ ಕೋಣಾರೆ, ರಾಮಕೃಷ್ಣ ಹಿಲ್ಲೂರ, ಎಪಿ ಪಾಠಕ್, ಶಶಾಂಕ ಆಚಾರ್ಯ, ಸುಬ್ರಹ್ಮಣ್ಯ ಹೆಗಡೆ, ಪ್ರಜ್ವಲ್ ಮುಂಡಾಡಿ, ಗಜಾನನ ಸಾಂತೂರು, ನರಸಿಂಹ ಹೆಗಡೆ, ಗಜಾನನ ಹೆಗಡೆ ಕಲಾವಂತಿಕೆ ಮೆರೆದರೆ, ಮುಮ್ಮೇಳದಲ್ಲಿ ವಿದ್ಯಾಧರ ಜಲವಳ್ಳಿ, ಅಶೋಕ ಭಟ್ ಸಿದ್ದಾಪುರ, ಸಂಜಯ ಬಿಳಿಯೂರು, ವಿನಯ ಬೇರೊಳ್ಳಿ, ಮಂಜುನಾಥ ಹಿಲ್ಲೂರು, ನಾಗೇಂದ್ರ ಮೂರೂರು, ಶಿವಾನಂದ ಹೆಗಡೆ ಕೆರೆಮನೆ, ಸದಾಶಿವ ಭಟ್, ತಿಮ್ಮಪ್ಪ ಹೆಗಡೆ ಶಿರಳಗಿ, ವಿಘ್ನೇಶ್ವರ ಹಾವಗೋಡಿ, ಈಶ್ವರ ಅಂಸಳ್ಳಿ, ಅನಂತ ಹೆಗಡೆ ದಂತಳಿಕೆ ಮುಂತಾದ ಹೆಸರಾಂತ ಕಲಾವಿದರು ಪಾತ್ರ ನಿರ್ವಹಿಸಿ ಕರತಾಡನ ಗಿಟ್ಟಿಸಿದರು. ಯಕ್ಷವೇದಿಕೆಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಮೂರೂರು ನಿರ್ವಹಿಸಿದರು.