ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಸಾರ್ವಜನಿಕ ಶೌಚಗೃಹ ಹತ್ತಿರವಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲಕೊಪ್ಪ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಯಾರೋ ಅಪರಿಚಿತರು ಎಸೆದಿರುವುದು ಪತ್ತೆಯಾಗಿದೆ.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸಾರ್ವಜನಿಕ ಶೌಚಗೃಹ ಹತ್ತಿರವಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲಕೊಪ್ಪ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಯಾರೋ ಅಪರಿಚಿತರು ಎಸೆದಿರುವುದು ಪತ್ತೆಯಾಗಿದೆ.ಆಲಕೊಪ್ಪರ ಗ್ರಾಮದ ಮಹಿಳೆಯರು ಬೆಳಗ್ಗೆ ಬಹಿರ್ದೆಸೆಗೆ ಎಂದು ಹೋಗುವ ವೇಳೆ ಬಟ್ಟೆಯಲ್ಲಿ ಮೃತ ಶಿಶುವನ್ನು ಇರುವುದನ್ನು ಕಂಡಿದ್ದಾರೆ. ನಂತರ ಈ ವಿಚಾರವನ್ನು ಮುದ್ದೇಬಿಹಾಳದ ಸಿಡಿಪಿಒ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬಳಿಕ ಮಾಹಿತಿ ಆಧಾರದ ಮೇಲೆ ಸಿಡಿಪಿಒ ಚಂದ್ರಕಾಂತ ಕುಂಬಾರ, ಪಿಎಸೈ ಸಂಜಯ ತಿಪ್ಪಾರೆಡ್ಡಿ ಅವರು ಸ್ಥಳಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ದೂರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಈ ವೇಳೆ ಸಿಡಿಪಿಒ ಚಂದ್ರಕಾಂತ ಕುಂಬಾರ ಮಾತನಾಡಿ, ಇದೊಂದು ಅಮಾನವೀಯ ಘಟನೆ. ಎಷ್ಟೋ ಜನರಿಗೆ ಮಕ್ಕಳಿಲ್ಲವೆಂದು ಕೊರಗುತ್ತಿದ್ದಾರೆ. ಆದರೆ, ಅನೈತಿಕ ಸಂಬಂಧದಿಂದಲೋ, ದುರುದ್ದೇಶದಿಂದಲೋ ಅಥವಾ ಇನ್ಯಾವ ಉದ್ದೇಶದಿಂದ ಈ ರೀತಿ ಕೃತ್ಯವೆಸಗಿದ್ದಾರೆ ಎಂಬುವುದು ತನಿಖೆಯಿಂದ ಗೊತ್ತಾಗಲಿದೆ. ಸದ್ಯಕ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೇಲಧಿಕಾರಿಗಳ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.-----------