ಸಾರಾಂಶ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ತಾಲೂಕಿನ ಹಂಪಸಂದ್ರ ಗ್ರಾ.ಪಂ. ವ್ಯಾಪ್ತಿಯ ಗರುಡಾಚಾರ್ಲಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಿಂದ ನೀಡಿರುವ ಪೌಷ್ಟಿಕ ಆಹಾರ ಬೆಲ್ಲದ ಪ್ಯಾಕೆಟ್ ನಲ್ಲಿ ಸತ್ತ ಇಲಿ ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಸಂಸದ ಡಾ.ಸುಧಾಕರ್ ಒತ್ತಾಯಿಸಿದ್ದಾರೆ.ಈ ಸಂಬಂಧ ಪೋಸ್ಟ್ ಹಂಚಿಕೊಂಡಿರುವ ಡಾ.ಕೆ.ಸುಧಾಕರ್, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಡಾಚಾರಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ವಿತರಿಸಲಾದ ಆಹಾರದಲ್ಲಿ ಸತ್ತ ಇಲಿಯ ಅವಶೇಷ ಪತ್ತೆಯಾಗಿರುವುದು ತೀವ್ರ ಆತಂಕ ಮೂಡಿಸಿದೆ ಎಂದಿದ್ದಾರೆ.
ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ಪ್ರಕರಣವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರು ಈ ಬಗ್ಗೆ ಕೂಡಲೇ ತನಿಖೆಗೆ ಆದೇಶ ಮಾಡಬೇಕು ಮತ್ತು ಅಂಗನವಾಡಿಗೆ ಕಳಪೆ ಆಹಾರ ಪೂರೈಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಗುತ್ತಿಗೆದಾರನಿಗೆ ನೋಟಿಸ್ಇನ್ನೂ ಅಂಗನವಾಡಿಗಳಿಗೆ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರಾದ ಬಾಗೇಪಲ್ಲಿ ತಾಲೂಕು ಯಲ್ಲಂಪಲ್ಲಿ ಎಂ.ಎಸ್.ಪಿ.ಎಸ್ ಸಂಸ್ಥೆಯವರಿಗೆ ನೋಟಸ್ ನೀಡಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಅಧಿಕಾರಿ ರಫೀಕ್ ತಿಳಿಸಿದ್ದಾರೆ.
ಅಂಗನವಾಡಿ ಶಿಕ್ಷಕಿ ಭಾಗ್ಯಮ್ಮ ಮಾತನಾಡಿ ಗುಡಿಬಂಡೆ ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಗುತ್ತಿಗೆದಾರರು ಸರಬರಾಜು ಮಾಡುತ್ತಾರೆ. ನಾವು ಅವನ್ನು ವಿತರಿಸಿದ್ದೇವೆ ಅಷ್ಟೇ. ಪ್ಯಾಕೆಟ್ ಒಳಗೆ ಇಲಿ ಸತ್ತಿರುವುದಕ್ಕೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ.ಚಿಕ್ಕಬಳ್ಳಾಪುರ ಆಹಾರ ಸುರಕ್ಷತಾಧಿಕಾರಿ ಹರೀಶ್, ಬಾಗೇಪಲ್ಲಿ ತಾಲೂಕು ಯಲ್ಲಂಪಲ್ಲಿ ಎಂ.ಎಸ್.ಪಿ.ಎಸ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.