ಪಾದಚಾರಿ ರಸ್ತೆ ಸಾಕಷ್ಟು ಅತಿಕ್ರಮಣವಾಗಿದೆ.
ಹೂವಿನಹಡಗಲಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಫುಟ್‌ಪಾತ್ ಅತಿಕ್ರಮಣವಾಗಿದ್ದು, ಡಿ. 27ರೊಳಗೆ ತೆರವು ಮಾಡಬೇಕೆಂದು ತಹಸೀಲ್ದಾರ್ ಜಿ. ಸಂತೋಷಕುಮಾರ ಸೂಚಿಸಿದ್ದಾರೆ.
ಇಲ್ಲಿನ ಪುರಸಭೆ ಕಚೇರಿಯಲ್ಲಿ ಪೌರಾಯುಕ್ತ ಎಚ್.ಇಮಾಮ್ ಸಾಹೇಬ್ ಹಾಗೂ ತಹಸೀಲ್ದಾರ್ ಜಿ. ಸಂತೋಷ ಕುಮಾರ ಅವರ ನೇತೃತ್ವದಲ್ಲಿ ಜರುಗಿದ ಬೀದಿ ಬದಿ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದರು.ಕಳೆದ ಡಿ. 15 ರಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು, ಪಟ್ಟಣದ ಫುಟ್‌ಪಾತ್‌ನ್ನು ವೀಕ್ಷಣೆ ಮಾಡಿದ್ದರು. ಪಾದಚಾರಿ ರಸ್ತೆ ಸಾಕಷ್ಟು ಅತಿಕ್ರಮಣವಾಗಿದೆ. ಇದರಿಂದ ಸಾರ್ವಜನಿಕರಿಗೆ, ವಾಹನಗಳ ಓಡಾಟಕ್ಕೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಭೆ ಮಾಡಿ ಕ್ರಮಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಗೆ ಡಿಸಿ ಸೂಚಿಸಿದ್ದರು. ಆದ್ದರಿಂದ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.
ಬೀದಿ ಬದಿ ವ್ಯಾಪಾರಿಗಳನ್ನು ತಾತ್ಕಾಲಿಕವಾಗಿ ಸೋಗಿ ರಸ್ತೆಯಲ್ಲಿನ ಎಡ ಭಾಗ, ಎಸ್‌ಪಿವಿ ಸರ್ಕಾರಿ ಶಾಲೆ ಮುಂಭಾಗ ಹಾಗೂ ಹಳೆ ತಹಸೀಲ್ದಾರ್ ಕಚೇರಿ ಬಳಿ ಸ್ಥಳಾಂತರಕ್ಕೆ ಜಾಗಗಳನ್ನು ಗುರುತಿಸಲಾಗಿದೆ. ಹಳೆ ತಹಸೀಲ್ದಾರ್ ಕಚೇರಿ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಿ, ಫುಡ್‌ಪಾರ್ಕ್ ಮಾಡುವಂತೆ ಡಿಸಿ ಉದ್ದೇಶಿಸಿದ್ದಾರೆ. ಇದರ ಸಾಧಕ-ಬಾಧಕಗಳನ್ನು ಚರ್ಚಿಸಿ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.ಬೀದಿ ಬದಿ ವ್ಯಾಪಾರಿಗಳ ಸ್ಥಳಾಂತರಕ್ಕೆ ಡಿ. 27 ಕೊನೆ ದಿನವಾಗಿದ್ದು, ತಾವೇ ಸ್ವಪ್ರೇರಣೆಯಿಂದ ಅಕ್ರಮಿತ ಫುಟ್‌ಪಾತ್ ತೆರವು ಮಾಡಬೇಕೆಂದು ಸೂಚನೆ ನೀಡಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತ, ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದಿಂದ ಸೋಗಿ ರಸ್ತೆ ವರೆಗೆ, ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದಿಂದ ಉದ್ಭವ ವೃತ್ತದ ವರೆಗೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಎ.ಪಿ.ಜೆ.ಡಾ. ಅಬ್ದುಲ್ ಕಲಾಂ ವೃತ್ತ ವರೆಗಿನ ಫುಟ್‌ಪಾತ್ ಮೇಲಿನ ಎಲ್ಲ ಅಂಗಡಿಗಳನ್ನು ತೆರವು ಮಾಡಲು ನಿರ್ಧರಿಸಲಾಗಿದೆ.ಈ ಸಂದರ್ಭದಲ್ಲಿ ತಹಸೀಲ್ದಾರ್ ಜಿ.ಸಂತೋಷಕುಮಾರ್, ಪುರಸಭೆ ಪೌರಾಯುಕ್ತ ಎಚ್.ಇಮಾಮ್ ಸಾಹೇಬ್ ಹಾಗೂ ಬೀದಿ ಬದಿ ವ್ಯಾಪಾರಸ್ಥರು ಸಭೆಯಲ್ಲಿದ್ದರು.