ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 900ರಷ್ಟು ವೈದ್ಯರ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ವಾರದೊಳಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಎಂಬಿಬಿಎಸ್‌ ಪೂರೈಸಿದವರು ಕರ್ತವ್ಯ ಸಲ್ಲಿಸಲು ಬಂದರೆ ಅವರಿಗೆ ಆಯಾ ಜಿಲ್ಲೆಯ ಆರೋಗ್ಯಾಧಿಕಾರಿಗಳು ಒಂದು ವಾರದೊಳಗೆ ತಾತ್ಕಾಲಿಕ ನೇಮಕಾತಿಯ ಆದೇಶ ಪತ್ರ ನೀಡಬೇಕು. ಇಲ್ಲದಿದ್ದಲ್ಲಿ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು. ನೇಮಕಗೊಂಡವರಿಗೆ ಮಾಸಿಕ 60,000 ರು. ವೇತನ ನೀಡಲಾಗುವುದು ಎಂದು ಯು.ಟಿ.ಖಾದರ್‌ ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದು ಗಮನದಲ್ಲಿದೆ. ಕಾಯಂ ನೇಮಕಾತಿ ಪ್ರಕ್ರಿಯೆ ಆಗುವವರೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು. ಹಂತ, ಹಂತವಾಗಿ ಸರ್ಕಾರಿ ಆಸ್ಪತ್ರೆಗಳ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಯಾವ ರೀತಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ಖುದ್ದಾಗಿ ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತೇನೆ. ಈ ನಿಟ್ಟಿನಲ್ಲಿ ರಾತ್ರಿ ವೇಳೆ ಆಸ್ಪತ್ರೆಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದು, ಇದೇ ರೀತಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೂಡ ದಿಢೀರ್‌ ಆಗಿ ರಾತ್ರಿ ವೇಳೆ ಆಸ್ಪತ್ರೆಗಳಿಗೆ ಭೇಟಿ ನೀಡಿ, ಪರಿಶೀಲಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.ಮಸೀದಿ, ಚರ್ಚ್‌, ದೇವಸ್ಥಾನಕ್ಕೆ ಭೇಟಿ:


ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ಸಚಿವರಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಖಾದರ್‌ಗೆ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಬಳಿಕ ಅವರು, ಉಳ್ಳಾಲ ಸಯ್ಯದ್‌ ಮದನಿ ದರ್ಗಾ, ಉಳ್ಳಾಲ ಭಗವತಿ ಕ್ಷೇತ್ರ, ಬೆಂದೂರ್‌ವೆಲ್‌ನ ಸೇಂಟ್‌ ಸೆಬಾಸ್ಟಿನ್‌ ಚರ್ಚ್, ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ದ‌.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗುತ್ತೀರಾ ಎಂಬ ಪ್ರಶ್ನೆಗೆ, ಈ ಹಿಂದೆ ನಾನು ಕೋಲಾರ, ಉಡುಪಿ ಹಾಗೂ ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಹಾಗಾಗಿ, ಮಂಗಳೂರು ಜಿಲ್ಲಾ ಉಸ್ತುವಾರಿಯನ್ನು ಬೇರೆಯವರಿಗೆ ಬೇಕಾದರೆ ಕೊಡಿ ಎಂದಿದ್ದೇನೆ. ನನಗೆ ಹೊಸ ಜಿಲ್ಲೆಯ ಉಸ್ತುವಾರಿ ನೀಡಿದರೆ ಅಲ್ಲಿನ ಅನುಭವ ಸಿಗುತ್ತದೆ. ಆದರೆ, ಮುಖ್ಯಮಂತ್ರಿಗಳು ಯಾವ ಜಿಲ್ಲೆ ಕೊಡುತ್ತಾರೋ ಅದೇ ಅಂತಿಮ ಎಂದರು.