ರೈತರ ಕಬ್ಬಿನ ಬಾಕಿ ಪಾವತಿಗೆ ಗುಡುವು: ಜಿಲ್ಲಾಧಿಕಾರಿ ಜಾನಕಿ

| Published : Oct 16 2024, 12:44 AM IST

ಸಾರಾಂಶ

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಕಬ್ಬು ಬೆಳೆಗಾರರು ಹಾಗೂ ಮುಖಂಡರ ಜೊತೆ ಜರುಗಿದ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ಘೋಷಿಸಿದ ಮೊತ್ತದ ಬಾಕಿ ಹಣವನ್ನು ಅ.20ರೊಳಗಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಗಡುವು ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಕಬ್ಬು ಬೆಳೆಗಾರರು ಹಾಗೂ ಮುಖಂಡರ ಜೊತೆ ಜರುಗಿದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಫ್ಆರ್‌ಪಿ ಪ್ರಕಾರ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ಹಣವನ್ನು ಪಾವತಿಸಿದ್ದಾರೆ. ಆದರೆ ಹೆಚ್ಚುವರಿ ಘೋಷಿಸಿದ ಮೊತ್ತವನ್ನು ಪಾವತಿಸಲು ಬಾಕಿ ಉಳಿಸಿಕೊಂಡಿದ್ದು, ರೈತರ ಮನವಿ ಹಿನ್ನೆಲೆ ಅ.20ರೊಳಗಾಗಿ ಪಾವತಿಸಿಲು ಗುಡುವು ನೀಡಲಾಗಿದೆ ಎಂದು ತಿಳಿಸಿದರು.

ರೈತರ ಮತ್ತು ರೈತ ಮುಖಂಡರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ, ಕಳೆದ 2018-19ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಘೋಷಿಸಿದ ಪ್ರತಿ ಟನ್‌ಗೆ 175 ರು.ನಂತೆ ಪಾವತಿಸಬೇಕಾದ ಮೊತ್ತ ಬಾಕಿ ಉಳಿದಿರುತ್ತದೆ. ಅದರಂತೆ 2020-21ನೇ ಸಾಲಿನಲ್ಲಿ 145ರು. ಒಟ್ಟು ₹6 ಕೋಟಿ 2022-23ನೇ ಸಾಲಿನಲ್ಲಿ ಕಾರ್ಖಾನೆ ಪ್ರಾರಂಭಿಸುವ ಮುನ್ನ ಹಿಂದಿನ ಸಾಲಿನ 2021-22ನೇ ಹೆಚ್ಚುವರಿಯಾಗಿ 62 ರು.ಗಳ ನೀಡುವುದಾಗಿ ತಿಳಿಸಿದ್ದರು. ಆದರೆ ಕೇವಲ ಒಂದು ಕಾರ್ಖಾನೆಯವರು ಮಾತ್ರ ಮೊತ್ತ ಪಾವತಿಸಿದ್ದು, ಉಳಿದ ಕಾರ್ಖಾನೆಗಳು ಮೊತ್ತ ಪಾವತಿಗೆ ರೈತರು ಪಟ್ಟು ಹಿಡಿದರು.

ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ 13 ಸಕ್ಕರೆ ಕಾರ್ಖಾನೆಗಳ ಪೈಕಿ 7 ಕಾರ್ಖಾನೆಗಳು ಡಿಜಿಟಲ್ ತೂಕದ ಯಂತ್ರ ಅಳವಡಿಸಿದ್ದು, ಇನ್ನು 6 ಕಾರ್ಖಾನೆಯವರು ಡಿಜಿಟಲ್ ಯಂತ್ರ ಅಳವಡಿಸುವ ಕಾರ್ಯ ಪ್ರಗತಿಯಲ್ಲಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ 14 ದಿನಗಳ ಒಳಗಾಗಿ ಬಿಲ್ ಪಾವತಿಸಬೇಕು. ತಪ್ಪಿದಲ್ಲಿ ಶೇ.15ರ ಬಡ್ಡಿ ಸಮೇತ ಬಿಲ್ ಪಾವತಿಸಬೇಕಾಗುತ್ತದೆ ಎಂದು ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ತಿಳಿಸಿದರು.

ಪ್ರತಿ ಸಕ್ಕರೆ ಕಾರ್ಖಾನೆಯವರು ಏಕರೂಪದ ದರ ನಿಗದಿಪಡಿಸಬೇಕು. ಈ ಕುರಿತು ಕಾರ್ಖಾನೆಯಿಂದ ಸ್ಪಷ್ಟ ಮಾಹಿತಿ ಪಡೆದುಕೊಳ್ಳಲಾಗುವುದು. ತೂಕದಲ್ಲಿ ಕಾರ್ಖಾನೆಯಿಂದ ಮೋಸ ಆಗದಂತೆ ಸೂಕ್ತ ಕ್ರಮವಹಿಸಲಾಗುವುದು. ಮೋಸ ಮಾಡುತ್ತಿರುವ ಬಗ್ಗೆ ರೈತರ ಗಮನಕ್ಕೆ ಬಂದಲ್ಲಿ ತಕ್ಷಣ ನಮಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಸರ್ಕಾರದ ನಿಯಮಾವಳಿ ಪ್ರಕಾರ ಸಕ್ಕರೆ ಕಾರ್ಖಾನೆಗಳಿಗೆ ಬಾಕಿ ಪಾವತಿಗೆ ಕ್ರಮ ವಹಿಸಲಾಗುತ್ತದೆ. ರೈತರ ಪರವಾಗಿ ಜಿಲ್ಲಾಡಳಿತ ಇದ್ದು, ಬಾಕಿ ಪಾವತಿಗೆ ನೂರಕ್ಕೆ ನೂರರಷ್ಟು ಕ್ರಮವಹಿಸಲಾಗುವುದೆಂದು ತಿಳಿಸಿದರು. ಸಕ್ಕರೆ ಕಾರ್ಖಾನೆಗಳು ದರ ನಿಗದಿಪಡಿಸುವುದೊಂದು ಪಾವತಿಸುವುದು ಒಂದು ಆಗುತ್ತಿದೆ. ತಾರತಮ್ಯ ನೀತಿಯನ್ನು ಕಾರ್ಖಾನೆಗಳು ಅನುಸರಿಸುತ್ತಿರುವುದಾಗಿ ರೈತರು ಸಭೆಗೆ ತಿಳಿಸಿದಾಗ ಈ ಬಗ್ಗೆ ಕ್ರಮವಹಿಸಲಾಗುವುದೆಂದು ತಿಳಿಸಿದರು.

ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಕ್ಕರೆ ಆಯುಕ್ತರೊಂದಿಗೆ ರೈತರು ಮತ್ತು ಕಾರ್ಖಾನೆ ಮಾಲಿಕರ ಜೊತೆ ಸಭೆ ಜರುಗಿಸುವಂತೆ ಸಭೆಯಲ್ಲಿ ರೈತರು ಹಾಗೂ ರೈತ ಮುಖಂಡರು ಮನವಿ ಮಾಡಿಕೊಂಡರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.