ಹಾನಗಲ್ಲ: ಕಳೆದ ವರ್ಷದ ಶುಂಠಿ ಬೆಳೆವಿಮಾ ಪರಿಹಾರ ತಾಲೂಕಿನ ೬ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಬಿಡುಗಡೆಯಾಗದಿರುವುದನ್ನು ಖಂಡಿಸಿ, ಆ.೧೩ರ ಒಳಗಾಗಿ ಬಿಡುಗಡೆಗೊಳಿಸದಿದ್ದಲ್ಲಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ತೋಟಗಾರಿಕೆ ಸಹಾಯಕ ನಿರ್ದೇಶಕರಿಗೆ ಎಚ್ಚರಿಸಿದೆ.

ಮಂಗಳವಾರ ತೋಟಗಾರಿಕಾ ಇಲಾಖೆಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ತಾಲೂಕಿನ ೪೨ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊದಲ ಪಟ್ಟಿಯಲ್ಲಿ ೧೬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶುಂಠಿ ಮತ್ತು ಹಸಿ ಮೆಣಸಿನಕಾಯಿ ಬೆಳೆವಿಮೆ ಪರಿಹಾರ ಬಿಡುಗಡೆಯಾಗಿರಲಿಲ್ಲ. ನಂತರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ ನಂತರ ಕಂಚಿನೆಗಳೂರು, ನರೇಗಲ್ಲ, ಬೆಳಗಾಪೇಟ, ಕೂಡಲ, ಆಲದಕಟ್ಟಿ, ಹುಲ್ಲತ್ತಿ, ಕರಗುದರಿ ಗ್ರಾಮಗಳ ರೈತರಿಗೆ ಹಣ ಜಮಾ ಆಗಿದೆ. ಆದರೆ ಈಗ ತಾಲೂಕಿನ ಮಾರನಬೀಡ, ಅರಳೇಶ್ವರ, ಮಾಸನಕಟ್ಟಿ, ಕೊಪ್ಪರಸಿಕೊಪ್ಪ, ಬೈಚವಳ್ಳಿ, ಬಮ್ಮನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರಿಗೆ ಇದುವರೆಗೂ ಬೆಳೆವಿಮೆ ಪರಿಹಾರ ಜಮಾ ಆಗಿಲ್ಲ. ಪರಿಹಾರದ ಮೊತ್ತವೂ ಘೋಷಣೆಯಾಗಿಲ್ಲ ಎಂದರು.

ಆ.೧೩ರ ಒಳಗಾಗಿ ಈ ಎಲ್ಲ ರೈತರಿಗೆ ಪರಿಹಾರ ಹಣ ಸಂದಾಯವಾಗದಿದ್ದರೆ ಅನಿವಾರ್ಯವಾಗಿ ತೋಟಗಾರಿಕೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ರೈತ ಸಂಘ ಎಚ್ಚರಿಕೆ ನೀಡಿದೆ.

ಇದಕ್ಕೆ ಉತ್ತರಿಸಿದ ತೋಟಗಾರಿಕೆ ಸಹಾಯಕ ನಿರ್ದೇಶಕ ಜಿ.ಆರ್.ವೀರಭದ್ಯಸ್ವಾಮಿ, ಈ ಸಮಸ್ಯೆಯ ಅರಿವು ಇಲಾಖೆಗೆ ಬಂದಿದೆ. ಈ ಕುರಿತು ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹವಾಮಾನ ವರದಿಯ ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವು ಗ್ರಾಪಂಗಳಿಗೆ ಅನಾನುಕೂಲವಾಗಿದೆ. ಕೂಡಲೇ ಸರಿಪಡಿಸಲು ಮೇಲಧಿಕಾರಿಗಳ ಗಮನಕ್ಕೆ ತಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಅಶೋಕ ಸಂಸಿ, ರಾಜೀವ ದಾನಪ್ಪನವರ, ಎಸ್.ಎನ್.ಮಣಕಟ್ಟಿ, ಆರ್.ಐ. ಕಳ್ಳಿಮನಿ, ಸಿ.ಎಸ್. ಹಡಪದ, ಪಿ.ಬಿ. ಗಂಜೀಗಟ್ಟಿ, ಸಿ.ಎಸ್. ಕೂಡಲ, ಸೋಮಣ್ನ ಜಡೆಗೊಂಡರ, ಮಲ್ಲಿಕಾರ್ಜುನ ನೆಗವಣಗಿ ಮೊದಲಾದವರು ಇದ್ದರು.


ತಹಸೀಲ್ದಾರರಿಗೆ ಮನವಿ: ಇನ್ನೊಂದೆಡೆ ತಾಲೂಕು ಗ್ಯಾರಂಟಿ ಸಮಿತಿ ಮಾಜಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ತಾಲೂಕು ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿ, ೨೦೨೫-೨೬ನೇ ಕೃಷಿ ವರ್ಷದಲ್ಲಿ ಶುಂಠಿ ಬೆಳೆವಿಮೆ ಲೆಕ್ಕಾಚಾರದಲ್ಲಿ ಸಾಂವಸಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರಿಗೆ ತಾರತಮ್ಯವಾಗಿದೆ. ಇಲ್ಲಿ ರೈತರು ಹೆಚ್ಚು ಶುಂಠಿ ಬೆಳೆಗಾರರಾಗಿದ್ದಾರೆ. ಇದನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಈ ಅವಧಿಯಲ್ಲಿ ಕೊಳೆ ರೋಗ, ಎಲೆ ಚುಕ್ಕೆ ರೋಗ ಬಂದು ಬೆಳೆ ಬಹಳಷ್ಟು ಹಾಳಾಗಿದೆ. ಇದರ ವರದಿಯೂ ಕೂಡ ತೋಟಗಾರಿಕೆ ಇಲಾಖೆ ತಿಳಿದದ್ದೇ ಇದೆ. ರೈತರು ಇದರಿಂದ ತೀವ್ರ ಆರ್ಥಿಕ ಹಾನಿಗೊಳಗಾಗಿದ್ದಾರೆ. ಸಾಂವಸಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿ ಹೆಕ್ಟೇರ್‌ಗೆ ೭೮ ಸಾವಿರ ರು. ಶುಂಠಿ ಬೆಳೆವಿಮೆ ಬಿಡುಗಡೆಯಾಗಿದ್ದರೆ, ಡೊಳ್ಳೆಶ್ವರ ಗ್ರಾಪಂ ಗೆ ೮೭ ಸಾವಿರ ರು, ಬಾಳಂಬಿಡ ಗ್ರಾಪಂಗೆ ೮೪ ಸಾವಿರ ರು. ಬಿಡುಡೆಯಾಗಿವೆ. ಸರಿಸಮಾನ ಹವಾಮಾನ ಇರುವ ಗ್ರಾಪಂಗಲ್ಲಿ ಒಂದೇ ರೀತಿ ಬೆಳೆವಿಮೆ ಪ್ರಕಟವಾಗಬೇಕಾಗಿತ್ತು. ಕೂಡಲೇ ಇಲಾಖೆ ಈ ತಾರತಮ್ಯ ಸರಿಪಡಿಸುವಂತೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಫಕ್ಕೀರಪ್ಪ ಹಂಚಿನಮನಿ, ಚನ್ನಮಲ್ಲಪ್ಪ ಶಿವಣ್ಣನವರ, ಸಿ.ಜಿ. ಶಿವಣ್ಣನವರ, ಮಲ್ಲಿಕಾರ್ಜುನ ರಾಮಾಪುರ ಮೊದಲಾದವರು ಇದ್ದರು.