Deadline set for providing infrastructure to fishermen's colony: Mudnala
-ಮೀನುಗಾರರ ಸ್ಥಿತಿಗತಿ ಬಗ್ಗೆ ಸಭೆ ನಡೆಸಿದ ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ
--ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಹೊರವಲಯದಲ್ಲಿರುವ ಮೀನುಗಾರರ ಕಾಲೋನಿಗೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಭೇಟಿ ನೀಡಿ, ಕುಡಿವ ನೀರು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯ ಒದಗಿಸಿಕೊಡಲು ಒಂದು ವಾರ ಗಡುವು ನೀಡಲಾಗಿದ್ದು, ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ಕೆ. ಮುದ್ನಾಳ್ ಆಡಳಿತಕ್ಕೆ ಎಚ್ಚರಿಸಿದ್ದಾರೆ.ಮಂಗಳವಾರ ರಾತ್ರಿ ಮೀನುಗಾರರ ಈ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿದ ಮುದ್ನಾಳ್, ಕಾಲೋನಿಯ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮೀನುಗಾರ ಜಾಗೃತಿ ಸಭೆ ನಡೆಸಿ ಮಾತನಾಡಿದರು. ಕಾಲೋನಿಯಲ್ಲಿ ಕಡುಬಡವರು ಕೃಷಿ ಕೂಲಿ ಕಾರ್ಮಿಕರ ವಾಸಮಾಡುತ್ತಿದ್ದು, ಭೀಕರ ಬರಗಾಲದಲ್ಲಿ ಕುಡಿವ ನೀರು ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಣದೇ ಗಬ್ಬೆದ್ದು ನಾರುತ್ತಿದೆ ಎಂದು ಅಲ್ಲಿನ ಅವ್ಯವಸ್ಥೆಗಳ ಕಂಡು ದಂಗಾಗಿ ಕಿಡಿ ಕಾರಿದರು.
ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕಲುಷಿತ ನೀರಿನಲ್ಲಿ ವಿಷ ಜಂತುಗಳಿಂದ ಜನರು ಶಾಲಾ ಮಕ್ಕಳು ಓಡಾಡಲು ಭಯದ ಪರಿಸ್ಥಿತಿ ನಿರ್ಮಾಣವಾಗಿದೆ. ಮೀನುಗಾರಿಕೆ ಇಲಾಖೆಯಿಂದ ಕಡುಬಡವ ಮೀನುಗಾರರಿಗೆ ಸರ್ಕಾರದ ಸೌಲಭ್ಯ ಸಿಗದೆ ವಂಚಿತರಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದ ಒಳಗಡೆ ಸೂಕ್ತವಾದ ಚರಂಡಿ ಸಿಸಿ ರಸ್ತೆ, ಶುದ್ಧ ಕುಡಿವ ನೀರು ಇಲ್ಲದೆ ತೆಗ್ಗುಗುಂಡಿಗಳಲ್ಲಿ ಚರಂಡಿ ನೀರು ನಿಂತು ಗಬ್ಬೆದ್ದು ನಾರುತ್ತಿದೆ. ಇದರಿಂದಾಗಿ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಎದುರಾಗಿದೆ.
ನಗರದಲ್ಲಿ ಡೆಂಘೀ, ಮಲೇರಿಯಾ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಸೊಳ್ಳೆಗಳ ಹಾವಳಿಗೆ ಜನರು ಪರದಾಡುತ್ತಿದ್ದಾರೆ ಎಂದರು.ಜಿಲ್ಲಾಧಿಕಾರಿಗಳು, ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ೨೪ ಗಂಟೆಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಕಳ್ಳಾಟ ಆಡುತ್ತಿರುವ ಕೆಳಮಟ್ಟದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಎಲ್ಲ ಸಮಸ್ಯೆಗಳಿಗೆ ಇತ್ಯಾರ್ಥಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಯಾದಗಿರಿ - ಪಗಲಾಪುರ ಹೋಗುವ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮೀನುಗಾರ ಮುಖಂಡರು ಮಹಿಳೆಯರು ಯುವಕರು ಸಭೆಯಲ್ಲಿ ಭಾಗವಹಿಸಿದ್ದರು.-
25ವೈಡಿಆರ್9 : ಯಾದಗಿರಿ ನಗರದ ಹೊರವಲಯದಲ್ಲಿರುವ ಮೀನುಗಾರರ ಕಾಲೋನಿಯ ನೋಟ.25ವೈಡಿಆರ್10 : ಯಾದಗಿರಿ ನಗರದ ಹೊರವಲಯದಲ್ಲಿರುವ ಮೀನುಗಾರರ ಕಾಲೋನಿಯಲ್ಲಿ ಸಾಮಾಜಿಕ ಕಾರ್ಯಕರ್ತ ಉಮೇಶ ಮುದ್ನಾಳ್ ಸಭೆ ನಡೆಸಿದರು.