ಹಾವೇರಿ ತಾಪಂ ಕಚೇರಿ ಆವರಣದಲ್ಲಿರುವ ಲೋಕಸಭಾ ಸದಸ್ಯರ ಜನಸಂಪರ್ಕ ಕಾರ್ಯಾಲಯದಲ್ಲಿ ರಾಷ್ಟ್ರೀ ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಹಾವೇರಿ: ಸಾಗರ ಮಾಲಾ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಹಾವೇರಿಯಿಂದ ಶಿರಸಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮೇ ಅಂತ್ಯದೊಳಗೆ ವಾಹನ ಸಂಚಾರಕ್ಕೆ ಯೋಗ್ಯವಾಗಿಸಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸೂಚಿಸಿದರು.ಇಲ್ಲಿನ ತಾಪಂ ಕಚೇರಿ ಆವರಣದಲ್ಲಿರುವ ಲೋಕಸಭಾ ಸದಸ್ಯರ ಜನಸಂಪರ್ಕ ಕಾರ್ಯಾಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.ಹಾನಗಲ್ಲಿನ ನಾಲ್ಕರ ಕ್ರಾಸ್‌ನಿಂದ ಸಮ್ಮಸಗಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ಹಾವೇರಿಯಿಂದ ಹಾನಗಲ್ ಸಂಪರ್ಕಿಸುವ ರಸ್ತೆ ಅಲ್ಲಲ್ಲಿ ಹಾಳಾಗಿದ್ದು ಅದನ್ನು ಸರಿ ಪಡಿಸಬೇಕು ಎಂದು ಸೂಚಿಸಿದರು.

ಯೋಜನೆಯ ಕಾಮಗಾರಿ ವಿಳಂಬ ಮಾಡದೇ ಮೇ ತಿಂಗಳು ಮುಗಿಯುವಷ್ಟರಲ್ಲಿ ವಾಹನ ಸಂಚಾರಕ್ಕೆ ಸುಗಮಗೊಳಿಸಬೇಕು. ನಾನು ಬಹಳ ಗಂಭೀರವಾಗಿ ಹೇಳುತ್ತಿದ್ದೇನೆ. ನನ್ನ ಜೊತೆಗೆ ಆಟ ಆಡಬೇಡಿ, ಕೆಲಸ ಸರಿಯಾಗಿ ಮಾಡದಿದ್ದರೆ ನಿಮ್ಮನ್ನು ಹತ್ತು ವರ್ಷಗಳವರೆಗೆ ಕಪ್ಪು ಪಟ್ಟಿಗೆ ಸೇರಿಸುತ್ತೇನೆ. ನನಗೆ ಕೆಲಸ ಆಗಬೇಕು ಅಷ್ಟೇ. ನಾನು ಬೇರೆ ರಾಜಕಾರಣಿ ತರಹ ಅಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.ಈಗಾಗಲೇ ಮಾಡಿರುವ 5 ಕಿಮೀ ರಸ್ತೆಯನ್ನು ವಾಹನ ಸಂಚಾರ ಮಾಡುವ ಹಾಗೇ ಮಾಡಿ ಉಳಿದ 3ಕಿಮೀ ಯಾವಾಗ ಮಾಡುತ್ತೀರಿ ಹೇಳಿ, ಕಂತ್ರಿಕೊಪ್ಪದಿಂದ ಸಮ್ಮಸಗಿವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದನ್ನು ವಾಹನ ಸಂಚಾರಕ್ಕೆ ಅನುಕೂಲ ಮಾಡಬೇಕು. ಮೊದಲಿಗೆ ಇರುವ ರಸ್ತೆಯನ್ನು ಸಂಪೂರ್ಣವಾಗಿ ತೆಗೆದು 2 ಪದರು ಹಾಕಿ ವಾಹನ ಸಂಚಾರಕ್ಕೆ ಸರಿ ಪಡಿಸಬೇಕು. ಅಕ್ಕಿಆಲೂರು ಬಸ್ ನಿಲ್ದಾಣದ ಎದುರಿಗೆ ರಸ್ತೆಯಲ್ಲಿ ನೀರು ನಿಲ್ಲುವುದನ್ನು ಸರಿ ಪಡಿಸಬೇಕು. ಶುಕ್ರವಾರ ನಾನೇ ಕಾಮಗಾರಿ ವೀಕ್ಷಣೆಗೆ ಬರುತ್ತೇನೆ ಎಂದು ಹೇಳಿದರು. ಹಾನಗಲ್ ನಾಲ್ಕರ ಕ್ರಾಸ್‌ಯಿಂದ 4.5 ಕಿ.ಮೀ. ಹನುಮನಕೊಪ್ಪವರೆಗೆ ಡಿಬಿಎಂ (ಡೆನ್ಸ್ ಬಿಟುಮಿನಸ್ ಮ್ಯಾಕಡಮ್) ಮುಗಿದಿದೆ. ಹನುಮನಕೊಪ್ಪದಿಂದ ಬ್ಯಾಲಹಳ್ಳಿ 2.5 ಕಿಮೀವರೆಗೆ, ಅಲ್ಲಿಂದ ಸಮ್ಮಸಗಿ ತನಕ ರಸ್ತೆ ಸಂಪೂರ್ಣ ಹಾಳಾಗಿದೆ. ಸಬ್ ಗ್ರೇಡ್ ಮಾಡಿ ಡಿಬಿಎಂ ಮುಗಿಸಲು 25 ದಿನ ಬೇಕು. ಬಾಲಹಳ್ಳಿಯಿಂದ ಕತ್ರಿಕೊಪ್ಪ 1 ಕಿಮೀವರೆಗೆ ಡಿಬಿಎಂ ಮಾಡಲು ಇದೇ ಮೇ 10ವರೆಗೆ ವಾಹನ ಸಂಚಾರಕ್ಕೆ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದರು.ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಹೊನ್ನಾವರ ಎನ್‌ಎಚ್‌ಎಐನ ಪಿಡಿ ಎಂ.ಶಿವಕುಮಾರ, ಸೈಟ್ ಎಂಜಿನಿಯರ್ ಅಮರ, ಟೀಮ್ ಲೀಡರ್ ವಿನಾಯಕ ಸೊಂಟಕ್ಕೆ, ರಾಘವೇಂದ್ರ, ಎಂ.ಎಸ್.ಖಾನ್ ಸೇರಿದಂತೆ ಹಿರಿಯ ಇಂಜನಿಯರಗಳು ಉಪಸ್ಥಿತರಿದ್ದರು.