ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಉಳಿತಾಯ ಖಾತೆ ಹೊಂದಿರುವವರು ಆಗಾಗ್ಗೆ ಬ್ಯಾಂಕ್ ಗಳಲ್ಲಿ ವ್ಯವಹಾರ ಮಾಡಿದರೆ ಸರ್ಕಾರದ ಹಲವು ಯೋಜನೆಗಳ ಜೊತೆಗೆ ಬ್ಯಾಂಕುಗಳ ಉಪಯೋಗವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್ ಸಲಹೆ ನೀಡಿದರು. ನಗರದ ಸರ್ಕಾರಿ ಮಹಿಳಾ ಕಾಲೇಜು (ಸ್ವಾಯತ್ತ) ಅರ್ಥಶಾಸ್ತ್ರ ವಿಭಾಗ ಹಾಗೂ ಲೀಡ್ ಬ್ಯಾಂಕ್ ವತಿಯಿಂದ ಕಾಲೇಜಿನ ಎ.ವಿ.ಆರ್ ಸಭಾಂಗಣದಲ್ಲಿ ನಡೆದ ಹಣಕಾಸು ಸಾಕ್ಷರತಾ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ 18 ಲಕ್ಷ ಜನಸಂಖ್ಯೆಯಿದ್ದು, 54 ಲಕ್ಷ ಖಾತೆಗಳನ್ನು ಬ್ಯಾಂಕುಗಳಲ್ಲಿ ತೆರೆಯಲಾಗಿದೆ. ಜನ್‌ಧನ್ ಖಾತೆ ತೆರೆದರೂ ಹಲವು ಮಂದಿ ವರ್ಷಗಳಿಂದಲೂ ವ್ಯವಹಾರ ಮಾಡಿಲ್ಲ. ಇದರಿಂದಾಗಿ ಖಾತೆಗಳು ಮುಚ್ಚಿಹೋಗುವ ಸಾಧ್ಯತೆಗಳಿವೆ. ತಕ್ಷಣ ಬ್ಯಾಂಕಿಗೆ ಆಧಾರ್ ಕಾರ್ಡ್ ಕೊಂಡೊಯ್ದು ಅವುಗಳನ್ನು ಮತ್ತೆ ಪುನಶ್ಚೇತನಗೊಳಿಸಿಕೊಳ್ಳಬಹುದು ಎಂದು ಹೇಳಿದರು.
ಇತ್ತೀಚೆಗೆ ಸೈಬರ್ ಕ್ರೈಮ್ ಗಳು ಹೆಚ್ಚಾಗುತ್ತಿವೆ. ಪ್ರತಿ 15 ದಿನಗಳಿಗೊಮ್ಮೆ ಸೆಕ್ಯೂರಿಟಿ ಸೈಬರ್ ಪೊಲೀಸ್ ಇಲಾಖೆಯಿಂದ ಮಾಹಿತಿಗಳು ಬರುತ್ತಿವೆ. ಮೊಬೈಲ್‌ಗಳಲ್ಲಿ ಕೆಲವು ಆಪ್‌ಗಳು ಸಿಗುತ್ತವೆ. ಅವುಗಳನ್ನು ಡೌನ್‌ಲೋಡ್ ಮಾಡಿದರೆ ಸಾಕು, ನಮ್ಮೆಲ್ಲಾ ಮಾಹಿತಿಯನ್ನೂ ಅವರು ಕಸಿದುಕೊಳ್ಳುತ್ತಾರೆ. ಜೊತೆಗೆ ಖಾತೆಯಲ್ಲಿದ್ದ ಹಣವನ್ನೂ ದೋಚುತ್ತಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಉದಾಹರಣೆ ಸಮೇತ ವಿವರಿಸಿದರು.ಸಾಲ ಕೊಡುತ್ತೇವೆ ಎಂಬ ಆಮಿಷದೊಂದಿಗೆ 10 ಸಾವಿರ ಸಾಲ ನೀಡಿ, 1 ಸಾವಿರ ಇಟ್ಟುಕೊಂಡು 9 ಸಾವಿರ ಕೊಡುತ್ತಾರೆ. ಅದಕ್ಕೆ ಶೇ.25 ರಿಂದ 36ರಷ್ಟು ಬಡ್ಡಿ ಹಾಕುತ್ತಾರೆ. ಇದಲ್ಲದೆ, ಸರ್ವೀಸ್ ಚಾಜ್ ಇತರೆ ಸಬೂಬು ಹೇಳಿ 10 ರಿಂದ 15 ಸಾವಿರ ಹೆಚ್ಚುವರಿ ಹಣ ವಸೂಲಿ ಮಾಡುತ್ತಾರೆ. ಇಂತಹ ಸಾಲದ ಆ್ಯಪ್ ಗಳನ್ನು ಬಳಸಬೇಡಿ ಎಂದು ಯುವಜನರಿಗೆ ಕಿವಿಮಾತು ಹೇಳಿದರು.
ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ. ಹೇಮಲತಾ ಮಾತನಾಡಿ, ಸಾಕ್ಷರತೆ ಆರಂಭ ಮತ್ತು ನಾವು ಬ್ಯಾಂಕುಗಳಲ್ಲಿ ಏನೆಲ್ಲಾ ವ್ಯವಹಾರ ಮಾಡಬೇಕು. ಎಷ್ಟು ಎಚ್ಚರಿಕೆ ಇರಬೇಕು ಎಂಬುದರ ಕುರಿತು ಉದಾಹರಣೆ ಸಮೇತ ವಿವರಿಸಿದರು.ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ಬಿ. ಪವನ್ ಕುಮಾರ್, ಆರ್ಥಿಕ ಹಣಕಾಸು ವಿಭಾಗದ ಸಮಾಲೋಚಕಿ ಕೆ.ಪಿ.ಅರುಣಕುಮಾರಿ, ಕಾಲೇಜಿನ ಅರ್ಥಶಾಸ್ತ್ರ ವಿಷಯದ ಮುಖ್ಯಸ್ಥ ವರದರಾಜೇಗೌಡ, ಡಾ. ಲತಾ, ಡಾ. ಗುಲೆ ಆರಿಫಾ ಇತರರು ಇದ್ದರು.