ಸಾರಾಂಶ
ಎಸ್‌ಜೆಎಂ ಕ್ಯಾಂಪಸ್‌ನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಶಿವಯೋಗಿ ಸಿ.ಕಳಸದಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಯುವಕರು ಹಕ್ಕು ಮತ್ತು ಕರ್ತವ್ಯವನ್ನು ನೈತಿಕತೆಯಿಂದ ನಿಭಾಯಿಸಬೇಕು. ಭಾರತವನ್ನು ಸಾರ್ವಭೌಮ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ದೇಶಭಕ್ತಿ, ಧರ್ಮಶ್ರದ್ಧೆ, ವಿಚಾರ, ಅಭಿವ್ಯಕ್ತಿ ಮತ್ತು ಉಪಾಸನಾ ಸ್ವಾತಂತ್ರ್ಯದೊಂದಿಗೆ ಬದುಕಬೇಕಿದೆ ಎಂದು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು.ನಗರದ ಎಸ್‌ಜೆಎಂ ಕ್ಯಾಂಪಸ್‌ನಲ್ಲಿ ಭಾನುವಾರ ಆಯೋಜಿಸಲಾಗಿದ್ದ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ, ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಇಂದು ವಿಶ್ವದಾದ್ಯಂತ ನೆಲೆಸಿರುವ ಭಾರತೀಯರಿಗೆ ಸಂತಸವಾಗಿದೆ. ಶತಮಾನಗಳಿಂದ ಪರಕೀಯರ ದಾಸ್ಯಕ್ಕೆ ಒಳಗಾಗಿದ್ದೆವು. 26 ಜನವರಿ 1950ರಂದು ಗಣರಾಜ್ಯವಾಯಿತು. ಇಂದಿನ ಯುವಕರು ಮುಂದೆ ನಾಡನ್ನು ಕಟ್ಟಬೇಕಿದೆ. ಜಗತ್ತಿನಲ್ಲಿಯೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶವು ವಿವಿಧತೆಯಲ್ಲಿ ಏಕತೆಯನ್ನು ಸಾರಿದೆ. ವಿವಿಧ ಸಂಸ್ಕೃತಿ, ಭಾಷೆ, ಜನಾಂಗವನ್ನು ಮೆಟ್ಟಿ ನಿಂತು ನಾವು ಭಾರತೀಯರು ಎನ್ನುವಂತೆ ಇದ್ದೇವೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಸಾರಿದೆ. ಯುವಸಮೂಹ ನಮ್ಮ ಹಕ್ಕು, ಕರ್ತವ್ಯವನ್ನು ನಿಭಾಯಿಸುತ್ತ ದೇಶಕ್ಕೆ, ಸಂಸ್ಥೆಗೆ ಏನು ಮಾಡಿದ್ದೇವೆ ಎಂಬುದನ್ನು ನೋಡಬೇಕಿದೆ. ಈ ಸಂಸ್ಥೆ ಕಟ್ಟಬೇಕಾದರೆ ಹಿಂದಿನವರು ಪಟ್ಟ ಶ್ರಮದ ಬಗ್ಗೆ ಯೋಚಿಸಬೇಕಿದೆ. ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಕರ್ತವ್ಯ ನಿರ್ವಹಿಸಬೇಕು. ಆಡಳಿತ ಮಂಡಳಿಯು ವಿದ್ಯಾಪೀಠದ ಶಾಲಾಕಾಲೇಜುಗಳ ನೌಕರರಿಗೆ ಬರುವ ಏಪ್ರಿಲ್ ಒಂದರಿಂದ ಪರಿಷ್ಕೃತ ವೇತನವನ್ನು ಜಾರಿ ಮಾಡುವುದಾಗಿ ತಿಳಿಸಿದರು.ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ, ಎಸ್.ಎನ್.ಚಂದ್ರಶೇಖರ್, ಶಾಲಾ ಕಾಲೇಜುಗಳ ಮುಖ್ಯಸ್ಥರು ವೇದಿಕೆಯಲ್ಲಿದ್ದರು. ಇದಕ್ಕೂ ಮೊದಲು ಎಸ್‌ಜೆಎಂ ವಿದ್ಯಾಪೀಠದ ಶಾಲಾ ಕಾಲೇಜುಗಳ 20 ತಂಡಗಳು ಆಕರ್ಷಕ ಪಥಸಂಚಲನ ನಡೆಸಿಕೊಟ್ಟರು.
ಈ ವೇಳೆ ನಿವೃತ್ತ ನೌಕರರಿಗೆ, ಪಿಎಚ್.ಡಿ ಪದವಿ ಪಡೆದವರಿಗೆ, ರ‍್ಯಾಂಕ್‌ಗಳಿಸಿದ ವಿದ್ಯಾರ್ಥಿಗಳಿಗೆ, ಕ್ರೀಡಾ ಸಾಧಕರಿಗೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅತ್ಯುತ್ತಮ ಪ್ರದರ್ಶನ ನೀಡಿದ ಎಸ್‌ಜೆಎಂ ನರ್ಸಿಂಗ್ ಕಾಲೇಜು (ಪ್ರಥಮ), ಎಸ್‌ಜೆಎಂ ಆಂಗ್ಲಮಾಧ್ಯಮ ಶಾಲೆ(ದ್ವಿತೀಯ) ಮತ್ತು ಎಸ್‌ಜೆಎಂ ಪಾಲಿಟೆಕ್ನಿಕ್ (ತೃತೀಯ) ಬಹುಮಾನಗಳನ್ನು ನೀಡಲಾಯಿತು.