ಎಚ್.ಎನ್.ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರುಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕ್ಷೇತ್ರ ಮುತ್ತತ್ತಿಯಲ್ಲಿ ಸಾವಿನ ಸರಣಿ ಮುಂದುವರೆದಿದೆ. ಗುಪ್ತಗಾಮಿನಿಯಂತಿರುವ ಸುಳಿಗಳಿಗೆ ಸಿಲುಕಿ ಪ್ರವಾಸಿಗರು ಜಲಸಮಾಧಿಯಾಗುತ್ತಿದ್ದಾರೆ. ಕಳೆದ ಐದು ತಿಂಗಳಲ್ಲಿ ೧೧ ಮಂದಿ ಪ್ರವಾಸಿಗರು ನೀರಿನಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ನದಿಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದರೂ ಜನರಲ್ಲಿ ಮಾತ್ರ ಜಾಗೃತಿ ಮೂಡದಿರುವುದು ವಿಪರ್ಯಾಸ.
ಮೇಲ್ನೋಟಕ್ಕೆ ಪ್ರಶಾಂತವಾಗಿ ನದಿ ಹರಿಯುತ್ತಿರುವಂತೆ ಕಂಡರೂ ಅಲ್ಲಲ್ಲಿ ಮೃತ್ಯುಕೂಪಗಳಿರುವುದು ಗೊತ್ತೇ ಆಗುವುದಿಲ್ಲ. ನೀರಿನ ಸೆಳೆತ ಎಷ್ಟಿರುತ್ತದೆಂಬ ಅರಿವು ಯಾರಿಗೂ ಇರುವುದಿಲ್ಲ. ಇದರ ನಡುವೆ ಅಪಾಯವನ್ನು ಲೆಕ್ಕಿಸದೆ ಹುಂಬುತನದಿಂದ ನದಿಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುವವರೇ ಹೆಚ್ಚಾಗಿದ್ದಾರೆ. ಪೊಲೀಸ್ ಇಲಾಖೆಯಿಂದ ಅಳವಡಿಸಿರುವ ಎಚ್ಚರಿಕೆಯ ನಾಮಫಲಕಗಳ ಬಗ್ಗೆಯೂ ತಿಳಿದುಕೊಳ್ಳುವ, ಸ್ಥಳೀಯ ಜನರ ಮಾತುಗಳನ್ನೂ ಲೆಕ್ಕಿಸದೆ ಬೇಜವಾಬ್ದಾರಿತನದಿಂದ ನೀರಿಗಿಳಿದು ಸಾವಿಗೆ ಶರಣಾಗುತ್ತಿದ್ದಾರೆ.ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆ:
ಮುತ್ತತ್ತಿ ಪ್ರವಾಸಿಗರನ್ನು ಸೆಳೆಯುವ ಪ್ರೇಕ್ಷಣೀಯ ಸ್ಥಳ. ಪ್ರಶಾಂತವಾಗಿ ಹರಿಯುವ ಕಾವೇರಿ ನದಿ, ಅಚ್ಚ ಹಸಿರಿನಿಂದ ಕೂಡಿರುವ ದಟ್ಟ ಅರಣ್ಯದ ಸೊಬಗನ್ನು ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆ ನಿತ್ಯ ಹೆಚ್ಚಾಗುತ್ತಲೇ ಇದೆ. ಮುತ್ತತ್ತಿ ಗ್ರಾಮದಲ್ಲಿ ನೆಲೆಸಿರುವ ಶ್ರೀಆಂಜನೇಯಸ್ವಾಮಿ ರಾಜ್ಯಾದ್ಯಂತ ಅಪಾರ ಭಕ್ತರನ್ನು ಹೊಂದಿಗೆ. ಪ್ರತಿ ಶನಿವಾರ ಅತಿ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಬಂದು ಪೂಜೆ ಸಲ್ಲಿಸುತ್ತಾರೆ. ಹಲವಾರು ಸಿನಿಮಾ, ಧಾರಾವಾಹಿಗಳಿಗೂ ಮುತ್ತತ್ತಿ ಶೂಟಿಂಗ್ ಸ್ಪಾಟ್ ಆಗಿದೆ.
ಶಾಂತತೆಯ ಹಿಂದಿದೆ ಮೃತ್ಯುಕೂಪ:
ಶ್ರೀಆಂಜನೇಯಸ್ವಾಮಿಯ ದರ್ಶನ ಪಡೆದು, ಮುತ್ತತ್ತಿಯ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಂಡು, ನದಿಯ ದಡದಲ್ಲಿ ರಜೆಯ ಮೊಜನ್ನು ಜಾಲಿಯಾಗಿ ಕಳೆದುಕೊಂಡು ಹೋಗುವುದಕ್ಕೆ ಪ್ರವಾಸಿಗರು ಸೀಮಿತರಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತಿತ್ತು. ಆದರೆ, ಶಾಂತವಾಗಿ ಹರಿಯುವ ನದಿಯನ್ನು ಕಂಡ ಕೂಡಲೇ ನೀರಿಗಿಳಿಯುವ ದುಸ್ಸಾಹಸಕ್ಕೆ ಹಲವರು ಮುಂದಾಗುತ್ತಾರೆ. ನದಿಯ ಶಾಂತತೆಯ ಒಳಗಿರುವ ಮೃತ್ಯುಪಾಶ ಯಾರಿಗೂ ಗೊತ್ತೇ ಆಗುವುದಿಲ್ಲ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೋ, ಸ್ವಲ್ಪದೂರ ಈಜಿಕೊಂಡು ಬರೋಣವೆಂಬ ನೀರಿಗಿಳಿದು ಪ್ರಾಣಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಎಚ್ಚರಿಕೆಯ ಫಲಕಗಳನ್ನು ಲೆಕ್ಕಿಸುತ್ತಿಲ್ಲಕೆಲವರು ಮೋಜು-ಮಸ್ತಿ ಮಾಡುವುದಕ್ಕಾಗಿಯೇ ರಜಾ ದಿನಗಳನ್ನು ಆಯ್ಕೆ ಮಾಡಿಕೊಂಡು ಮುತ್ತತ್ತಿಗೆ ಬರುತ್ತಾರೆ. ಕಾವೇರಿ ದಡದಲ್ಲಿ ಕುಳಿತು ಮಾಂಸಾಹಾರ ಸೇವಿಸುತ್ತಾ ಮದ್ಯಪಾನ ಮಾಡುವುದು. ಮದ್ಯಸೇವಿಸಿದ ಬಳಿಕ ಕಾವೇರಿ ನದಿಯಲ್ಲಿ ಈಜಲು ಹೋಗುವುದು ಅಪಾಯಕಾರಿ ಎಂದು ತಿಳಿದಿದ್ದರೂ ಸಹ ಅದನ್ನು ಲೆಕ್ಕಿಸದೆ ಈಜಲು ಮುಂದಾಗುತ್ತಾರೆ. ಪೊಲೀಸ್ ಇಲಾಖೆಯಿಂದ ಅಳವಡಿಸಿರುವ ನಾಮಫಲಕದಲ್ಲಿ ಯಾವ ವರ್ಷದಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬ ಎಚ್ಚರಿಕೆ ಇದೆ.
ಎಲ್ಲೆಲ್ಲಿ ಸುಳಿಗಳಿವೆ, ಅಪಾಯಕಾರಿ ಸ್ಥಳಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಆದರೆ, ಅದನ್ನೊಮ್ಮೆ ನೋಡುವ, ಓದುವ ಗೋಜಿಗೆ ಹೋಗುವುದಿಲ್ಲ. ಕಾವೇರಿ ನದಿಯಲ್ಲಿ ಈಜಬಾರದು ಎಂಬಆದೇಶ ಹೊರಿಸಿದ್ದರೂ ಅದನ್ನೂ ಲೆಕ್ಕಿಸದೆ ಕೆಲವು ಪ್ರವಾಸಿಗರು ಈಜಲು ನೀರಿಗಿಳಿದು ಜಲಸಮಾಧಿಯಾಗುತ್ತಿದ್ದಾರೆ.ಕಾವೇರಿ ನದಿಯಲ್ಲಿ ನಿಂತು ಹುಚ್ಛಾಟವಾಡುತ್ತಾ ಸೆಲ್ಫಿ ತೆಗೆದುಕೊಳ್ಳುವುದು ತುಂಬಾ ಅಪಾಯಕಾರಿಯಾಗಿದ್ದರೂ ಅದನ್ನೂ ಲೆಕ್ಕಿಸದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ಐವರು ಬುಧವಾರ ನೀರೊಳಗಿನ ಮೃತ್ಯುಪಾಶಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡರು. ಈ ರೀತಿಯ ಅನಾಹುತಗಳಿಗೆ ಯಾರು ಹೊಣೆ ಎಂದರೆ ನೀರಿಗಿಳಿಯುವವರ ಬೇಜವಾಬ್ದಾರಿ ಮನೋಭಾವವೇ ಹೊಣೆ.
ಮುಂಜಾಗ್ರತೆ ಇದ್ದರೂ ಸಾವು ತಪ್ಪಿಲ್ಲಹಲಗೂರು ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ಮತ್ತು ಹಲಗೂರು ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ಮುತ್ತತ್ತಿಯಲ್ಲಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಯಾರೂ ಕೂಡ ಮದ್ಯ ಮಾರಾಟ ಮಾಡಬಾರದು ಎಂಬ ಎಚ್ಚರಿಕೆ ನೀಡಿದ್ದಾರೆ. ಮುತ್ತತ್ತಿಗೆ ಹೋಗುವ ಭೀಮೇಶ್ವರಿ ಬಳಿ ಅರಣ್ಯ ಚೆಕ್ ಪೋಸ್ಟ್‌ನಲ್ಲಿ ಮುತ್ತತ್ತಿಗೆ ಹೋಗುವ ಪ್ರವಾಸಿಗರನ್ನು ಮತ್ತು ಭಕ್ತರ ವಾಹನಗಳನ್ನು ತಪಾಸಣೆ ನಡೆಸಿ ಮದ್ಯ ಇದ್ದರೆ ಅದನ್ನು ವಶಪಡಿಸಿಕೊಂಡು ಕಳುಹಿಸುತ್ತಿದ್ದಾರೆ.
ಇಷ್ಟೆಲ್ಲಾ ಮುನ್ನೆಚ್ಚರಿಕಾ ಕ್ರಮಗಳಿದ್ದರೂ ಸಹ ಮುತ್ತತ್ತಿಯಲ್ಲಿ ಅವಘಡಗಳು ಸಂಭವಿಸುತ್ತಲೇ ಇವೆ. ಮುತ್ತತ್ತಿಯ ಕಾವೇರಿ ನದಿಯಲ್ಲಿ ಸಾವು ಸಂಭವಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ. ಈಗ ಇರುವ ನಾಮಫಲಕಗಳ ಜೊತೆ ಇನ್ನೂ ನಾಲ್ಕೈದು ಹೊಸದಾಗಿ ನಾಮಫಲಕವನ್ನು ಅಳವಡಿಸುವ ಅವಶ್ಯಕತೆ ಇದೆ. ಕಾವೇರಿ ನದಿಯ ದಡದ ಉದ್ದಕ್ಕೂ ತಂತಿ ಬೇಲಿಯನ್ನು ನಿರ್ಮಿಸಿದರೆ ಆಗ ಯಾರೂ ನೀರಿಗಿಳಿಯಲು ಸಾಧ್ಯವಿಲ್ಲವೆಂಬ ಅಭಿಪ್ರಾಯಗಳು ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿವೆ.ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಮಿತ್ರ ಎಂಬುವರನ್ನೂ ಸಹ ನೇಮಿಸಲಾಗಿದೆ. ಅವರೂ ಸಹ ಪ್ರವಾಸಿಗರಿಗೆ, ಸಾರ್ವಜನಿಕರಿಗೆ ತಿಳುವಳಿಕೆ ನೀಡುತ್ತಿದ್ದಾರೆ. ಆದರೆ, ಅವರ ಕಣ್ತಪ್ಪಿಸಿಯೂ ನೀರಿಗಿಳಿದು ಅನಾಹುತ ಮಾಡಿಕೊಳ್ಳುತ್ತಾರೆ. ಪ್ರವಾಸಿಗರು, ಭಕ್ತರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿದರಷ್ಟೇ ಇಂತಹ ಅವಘಡಗಳನ್ನು ತಡೆಯಲು ಸಾಧ್ಯ.ಐದು ವರ್ಷದಲ್ಲಿ ೩೬ ಸಾವು
ಹಲಗೂರಿನಿಂದ ೨೨ ಕಿ.ಮೀ ದೂರದಲ್ಲಿರುವ ಮುತ್ತತ್ತಿ ಗ್ರಾಮದಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಮುಳುಗಿ ಕಳೆದ ಐದು ವರ್ಷದಲ್ಲಿ ೩೬ ಮಂದಿ ಸಾಆವನ್ನಪ್ಪಿದ್ದಾರೆ. ೨೦೨೨ರಲ್ಲಿ ೬, ,೨೦೨೩ ರಲ್ಲಿ ೧೦, ೨೦೨೪ ರಲ್ಲಿ ೨, ೨೦೨೫ ರಲ್ಲಿ ೭, ಮತ್ತು ೨೦೨೬ ನೇ ಸಾಲಿನ ಐದು ತಿಂಗಳಲ್ಲಿ ಒಟ್ಟು ೧೧ ಜನ ಮೃತಪಟ್ಟಿದ್ದಾರೆ.ಮುತ್ತತ್ತಿಯಲ್ಲಿ ನಡೆಯುತ್ತಿರುವ ದುರ್ಘಟನೆಯಿಂದ ನಮಗೂ ತುಂಬಾ ಬೇಜಾರಾಗಿದೆ. ಬರುವ ಪ್ರವಾಸಿಗರು ಸ್ವಲ್ಪ ಜವಾಬ್ದಾರಿಯುತವಾಗಿ ನಡೆದುಕೊಂಡರೆ ಯಾವ ಅಪಾಯವೂ ಸಂಭವಿಸುವುದಿಲ್ಲ. ಮುತ್ತತಿಗೆ ಬರುವವರಿಗೆ ಸ್ಥಳೀಯ ವ್ಯಾಪಾರಸ್ಥರು ಕಾವೇರಿ ನದಿಯ ದಡದಲ್ಲಿ ಸ್ನಾನ ಮಾಡಿ ನೀರಿಗೆ ಇಳಿಯಬೇಡಿ. ಅಪಾಯವಿದೆ ಎಂಬ ಸೂಚನೆ ಸಲಹೆಗಳನ್ನು ನೀಡುತ್ತೇವೆ. ಆದರೆ ಅವುಗಳನ್ನು ಅವರು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ ಅವರ ಬೇಜವಾಬ್ದಾರಿಯಿಂದಲೇ ಇಂತಹ ಅವಘಡಗಳು ಸಂಭವಿಸುತ್ತಿವೆ.- ರವಿ, ಮುತ್ತತ್ತಿ ದೇಗುಲದ ಪ್ರಧಾನ ಅರ್ಚಕ