ಜ್ವರದ ಹಿನ್ನೆಲೆಯಲ್ಲಿ ಗಂಗಾವತಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದ 9 ತಿಂಗಳ ಮಗು ಚಿಕಿತ್ಸೆ ವೇಳೆ ಮೃತಪಟ್ಟ ಹಿನ್ನೆಲೆಯಲ್ಲಿ, ಮಗುವಿನ ಮೃತದೇಹದೊಂದಿಗೆ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ಎದುರು ಧರಣಿ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಗಂಗಾವತಿ: ಜ್ವರದ ಹಿನ್ನೆಲೆಯಲ್ಲಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದ 9 ತಿಂಗಳ ಮಗು ಚಿಕಿತ್ಸೆ ವೇಳೆ ಮೃತಪಟ್ಟ ಹಿನ್ನೆಲೆಯಲ್ಲಿ, ಮಗುವಿನ ಮೃತದೇಹದೊಂದಿಗೆ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ಎದುರು ಧರಣಿ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಆನೆಗುಂದಿ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಂಬೇಡ್ಕರ್ ನಗರದ ನಿವಾಸಿಗಳಾದ ಮುರ್ತುಜಾ ಹಾಗೂ ಅಸ್ಮಾ ದಂಪತಿಯ 9 ತಿಂಗಳ ಪುತ್ರ ಅರ್ಫಾನ್ ಜ್ವರ ಮತ್ತು ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಸುಮಾರು 10 ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದ. ಮಗುವಿನ ಶ್ವಾಸಕೋಶದಲ್ಲಿ ಕಫ ಇದ್ದಿದ್ದರಿಂದ ಉಸಿರಾಟದ ತೊಂದರೆ ಹೆಚ್ಚಾಗಿತ್ತು. ಇದಕ್ಕೆ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮಗು ಮೃತಪಟ್ಟಿದೆ.ಆಸ್ಪತ್ರೆ ಎದುರು ಧರಣಿ: ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮಗುವಿನ ಪಾಲಕರು ಆಸ್ಪತ್ರೆ ಮುಂದೆ ಮಗುವಿನ ಮೃತದೇಹ ಇಟ್ಟು ಧರಣಿ ನಡೆಸಿದರು. ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ತಕ್ಷಣ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಲು ಮುಂದಾದರೂ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದರು.
ಮಗುವಿನ ಸಾವಿನಿಂದ ಆಘಾತಕ್ಕೊಳಗಾದ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕು, ಮಗುವನ್ನು ಕಳೆದುಕೊಂಡ ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ಪರಿಹಾರ ಒದಗಿಸಬೇಕು ಎಂದು ಪೋಷಕರು ಹಾಗೂ ಸಾರ್ವಜನಿಕರು ಒತ್ತಾಯಿಸಿದರು.ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ. ಮಕ್ಕಳ ತಜ್ಞರು ಮಗುವನ್ನು ಉಳಿಸುವುದಕ್ಕಾಗಿ ಶ್ರಮ ಪಟ್ಟಿದ್ದಾರೆ. ಶ್ವಾಸಕೋಶದಲ್ಲಿ ಕಫ ಇದ್ದಿದ್ದರಿಂದ ಉಸಿರಾಟ ತೊಂದರೆಯಾಗಿದೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ವಿಚಾರಣೆ ನಡೆಸಿ, ಕ್ರಮ ಕೈಗೊಳ್ಳಲಾಗುತ್ತದೆ. ಮಗು ಮೃತಪಟ್ಟಿರುವುದು ಖೇದಕರ ಎಂದು ಕೊಪ್ಪಳ ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ. ಈಶ್ವರ ಸವಡಿ ಹೇಳಿದ್ದಾರೆ.