ನಾಗಮ್ಮ ನರಸಪ್ಪ ಎಂಬುವವರು ದುಬಲಗುಂಡಿ ಗ್ರಾಮದ ನಿವಾಸಿಯಾಗಿದ್ದು, ಅನಾರೋಗ್ಯದ ಕಾರಣದಿಂದಾಗಿ ಭಾನುವಾರ ಬೆಳಗ್ಗೆ ಆರೋಗ್ಯ ಕೇಂದ್ರಕ್ಕೆ ಬಂದಾಗ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲದೇ ಸೂಕ್ತ ಸಮಯಕ್ಕೆ ಚಿಕಿತ್ಸೆಗಾಗಿ ಪರದಾಡಿ ಮಹಿಳೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದರು.

ಕನ್ನಡಪ್ರಭ ವಾರ್ತೆ, ಹುಮನಾಬಾದ್

ದುಬಲಗುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿ ತಾಲೂಕಿನ ದುಬಲಗುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಶರಣಬಸಪ್ಪ ಅವರ ಮೇಲೆ ಮೃತಳ ಸಂಬಂಧಿಕರು ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ.

ಮೃತಳು ನಾಗಮ್ಮ ನರಸಪ್ಪ (63) ದುಬಲಗುಂಡಿ ಗ್ರಾಮದ ನಿವಾಸಿಯಾಗಿದ್ದು, ಅನಾರೋಗ್ಯದ ಕಾರಣದಿಂದಾಗಿ ಭಾನುವಾರ ಬೆಳಗ್ಗೆ ಆರೋಗ್ಯ ಕೇಂದ್ರಕ್ಕೆ ಬಂದಾಗ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲದೇ ಸೂಕ್ತ ಸಮಯಕ್ಕೆ ಚಿಕಿತ್ಸೆಗಾಗಿ ಪರದಾಡಿ ಮಹಿಳೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದರು. ಈ ಸಂದರ್ಭದಲ್ಲಿ ನೂರಾರು ಯುವಕರು ಜಮಾಯಿಸಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಾಟೆಗೆ ತೆದುಕೊಂಡಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಡಿಎಚ್‌ಒ ಡಾ.ಜ್ಞಾನೇಶ್ವರ ನಿರಗೂಡೆ ಹಾಗೂ ಟಿಎಚ್‌ಒ ಡಾ.ಶಿವಕುಮಾರ ಸಿದ್ದೇಶ್ವರ ಆರೋಗ್ಯ ಕೇಂದ್ರಕ್ಕೆ ಧಾವಿಸಿ ಗ್ರಾಮದ ಮುಖಂಡರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಘಟನೆ ಮಾಹಿತಿ ಪಡೆದಿದ್ದು ಈ ಸಂದರ್ಭದಲ್ಲಿ ಗ್ರಾಪಂ. ಅಧ್ಯಕ್ಷ ನಾಗರಾಜ ಭೋಜಗುಂಡಿ, ಗ್ರಾಪಂ. ಸದಸ್ಯರಾದ ಪ್ರಭು ನೆಳಗಿ, ಸತೀಷ ಪಾಂಡುರಂಗ ಇಮ್ಲೇಕರ್‌, ರಾಮಣ್ಣ ನರಸಗೊಂಡಿ, ದತ್ತು ಧಗೆ, ಬಿಜೆಪಿ ಮಂಡಲ್‌ ಅಧ್ಯಕ್ಷ ಹಾಗೂ ಗ್ರಾ,ಪಂ, ಸದಸ್ಯ ಅನೀಲ ಪಸರಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಭದ್ರೇಶ ಪಾಟೀಲ್‌ ಸೇರಿದಂತೆ ಮತ್ತಿತರರು ಇದ್ದರು.

ಘಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುಂದೆ ಇಂತಹ ಘಟನೆ ನಡೆಯದಂತೆ ಮುನ್ನಚ್ಚರಿಕೆಯಾಗಿ ಎಲ್ಲ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಬೀದರ್‌ ಡಿಎಚ್‌ಒ ಜ್ಞಾನೇಶ್ವರ ನಿರಗೂಡೆ ಹೇಳಿದರು.

ಇನ್ನು ದುಬಲಗುಂಡಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಕೆಲ ತಿಂಗಳಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡದಿರುವ ಆರೋಪಗಳು ಬರುತ್ತಿವೆ. ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಇಂತಹ ಘಟನೆ ಮರುಕಳಿದಂತೆ ಆರೋಗ್ಯ ಇಲಾಖೆ ಎಚ್ಚರ ವಹಿಸಬೇಕು ಎಂದು ದುಬಲಗುಂಡಿ ಗ್ರಾಪಂ ಅಧ್ಯಕ್ಷ ನಾಗರಾಜ ಭೋಜಗುಂಡಿ ಹೇಳಿದ್ದಾರೆ.

ವೈದ್ಯನ ಮೇಲೆ ಹಲ್ಲೆ ವಿಡಿಯೋ ವೈರಲ್‌, ಖಂಡನೆ

ಹುಮನಾಬಾದ್‌ ತಾಲೂಕಿನ ದುಬಲಗುಂಡಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ನಿರ್ಲಕ್ಷದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ವೈದ್ಯ ಡಾ. ಶರಣಬಸಪ್ಪ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆಲ ಯುವಕರು ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವೈದ್ಯರ ಮೇಲೆ ಹಲ್ಲೆ ಘಟನೆಯನ್ನು ವೈದ್ಯರ ಸಂಘ ಖಂಡಿಸಿದೆ.