ನಿಡಶೇಸಿ ಗ್ರಾಮದ ಗಂಗೂರಪ್ಪ ಮಲ್ಲಸಮುದ್ರ ಅವರು ಮಂಗಳವಾರ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಪುತ್ರ ಬಸವರಾಜ ಸೇರಿದಂತೆ ಸ್ನೇಹಿತರು ಬೆಂಗಳೂರಿನಿಂದ ಕಾರಿನಲ್ಲಿ ಊರಿಗೆ ಬರುತ್ತಿದ್ದರು. ಆದರೆ ಕಸ್ತೂರಿ ರಂಗಪ್ಪನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕುಷ್ಟಗಿ: ಅಪ್ಪನ ಅಂತ್ಯಸಂಸ್ಕಾರಕ್ಕೆ ಕಣ್ಣೀರಿನಿಂದಲೇ ಊರಿಗೆ ಹೊರಟಿದ್ದ ಮಗನ ಬದುಕಿನ ಪಯಣವೂ ಅರ್ಧದಲ್ಲೇ ಅಂತ್ಯಗೊಂಡಿದೆ.
ತಂದೆಯ ಅಗಲಿಕೆಯ ನೋವಿನೊಂದಿಗೆ ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದ ತಾಲೂಕಿನ ನಿಡಶೇಸಿಯ ಯುವಕ ಸೇರಿದಂತೆ ಮೂವರು ಯುವಕರು ಹೆದ್ದಾರಿ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಂಗಳವಾರ ಸಂಜೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಸ್ತೂರಿ ರಂಗಪ್ಪನಹಳ್ಳಿ ಬಳಿ ನಡೆದಿದೆ.ಮೃತಪಟ್ಟವರನ್ನು ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಬಸವರಾಜ ಮಲ್ಲಸಮುದ್ರ (21), ಯಲಬುರ್ಗಾ ತಾಲೂಕಿನ ಮಾಟರಂಗಿ ಗ್ರಾಮದ ಶಶಿಧರ್ (22) ಹಾಗೂ ಮಂಜುನಾಥ ಬಳೂಟಗಿ (22) ಎಂದು ಗುರುತಿಸಲಾಗಿದೆ.
ನಿಡಶೇಸಿ ಗ್ರಾಮದ ಗಂಗೂರಪ್ಪ ಮಲ್ಲಸಮುದ್ರ ಅವರು ಮಂಗಳವಾರ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಪುತ್ರ ಬಸವರಾಜ ಸೇರಿದಂತೆ ಸ್ನೇಹಿತರು ಬೆಂಗಳೂರಿನಿಂದ ಕಾರಿನಲ್ಲಿ ಊರಿಗೆ ಬರುತ್ತಿದ್ದರು. ಆದರೆ ಕಸ್ತೂರಿ ರಂಗಪ್ಪನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ತಂದೆಯ ಅಂತಿಮ ದರ್ಶನ ಪಡೆಯಲು ಬರುತ್ತಿದ್ದ ಬಸವರಾಜ, ಅವರ ಅಂತ್ಯಸಂಸ್ಕಾರಕ್ಕೂ ಮುನ್ನವೇ ದುರಂತಕ್ಕೀಡಾಗಿರುವುದು ಕುಟುಂಬದವರ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಒಂದೆಡೆ ತಂದೆಯ ಸಾವಿನ ದುಃಖ, ಮತ್ತೊಂದೆಡೆ ಮಗನ ಸಾವಿನ ಸುದ್ದಿ. ನಿಡಶೇಸಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ನಿಡಶೇಸಿಯ ಪ್ರವೀಣ ಹಾಗೂ ಮಾಟರಂಗಿಯ ಹನುಮೇಶ್ ಅವರನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.