ಸಾರಾಂಶ
ರಾಮನಗರ: ಬಿಡದಿ ಹೋಬಳಿ ಭದ್ರಾಪುರ ಗ್ರಾಮದ ಕಾಲೋನಿಯ ಬಾಲಕಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡರು.
ನಗರದ ಪೊಲೀಸ್ ಭವನದಲ್ಲಿರುವ ಜಿಲ್ಲಾ ಎಸ್ಪಿ ಕಚೇರಿಗೆ ಭೇಟಿ ನೀಡಿದ ನಾಗಲಕ್ಷ್ಮಿ ಚೌಧರಿ ಅವರಿಗೆ ಎಸ್ಪಿ ಶ್ರೀನಿವಾಸ್ ಗೌಡ ಘಟನೆ ಬಗೆಗಿನ ಸಿಸಿಟಿವಿ ವೀಡಿಯೋ, ಎಫ್ಎಸ್ಎಲ್ ಮತ್ತು ಮರಣೋತ್ತರ ಪರೀಕ್ಷೆ ವರದಿ ಸಹಿತ ವಿವರಿಸಿದರು. ಆನಂತರ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣೆ ಕುರಿತ ಕ್ರಮಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗಲಕ್ಷ್ಮಿ ಚೌಧರಿ, ಭದ್ರಾಪುರ ಬಾಲಕಿಯ ಸಾವಿನ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಸಿಸಿಟಿವಿ ವೀಡಿಯೋ, ಎಫ್ಎಸ್ಎಲ್ ಹಾಗೂ ಮರಣೋತ್ತರ ಪರೀಕ್ಷೆ ವರದಿ ನೋಡಿದ್ದೇನೆ. ಇದು ಹತ್ಯೆ ಅಲ್ಲ, ರೈಲ್ವೆ ಅಪಘಾತ ಎಂಬುದು ಎಲ್ಲಾ ವರದಿಗಳಲ್ಲೂ ದೃಢಪಟ್ಟಿದೆ ಎಂದು ಹೇಳಿದರು.
ಈ ಘಟನೆ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬಂದಿತ್ತು. ನಾನು ಬೇರೆ ಜಿಲ್ಲೆಗಳ ಪ್ರವಾಸದಲ್ಲಿ ಇದ್ದಿದ್ದರಿಂದ ಇಲ್ಲಿಗೆ ಬರಲು ಆಗಿರಲಿಲ್ಲ. ಇಂದು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಎಸ್ಪಿ ಜೊತೆ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರದಿ ಕೇಳಿದ್ದೇನೆ ಎಂದು ಹೇಳಿದರು.ಹಾನಗಲ್‌ನಲ್ಲಿ ಅತ್ಯಾಚಾರ ಆರೋಪಿಗಳು ಜಾಮೀನು ಪಡೆದು ರೋಡ್ ಶೋ ನಡೆಸಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ ನಾಗಲಕ್ಷ್ಮಿ ಪ್ರತಿಕ್ರಿಯಿಸಿ, ಇದು ಮನುಷ್ಯರ ಮನಸ್ಥಿತಿಯನ್ನ ತೋರುತ್ತದೆ. ನಮ್ಮ ಕಾನೂನಿಗೆ ಸಾಕ್ಷ್ಯಾಧಾರ ಮುಖ್ಯ. ಕೆಲವೊಂದು ಬಾರಿ ಸೂಕ್ತ ಸಾಕ್ಷ್ಯಾಧಾರ ಇಲ್ಲದಿದ್ದಾಗ ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆ. ನಮ್ಮ ಸರ್ಕಾರ, ಕಾನೂನು, ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಆದರೆ ಇಂತಹ ನೀಚ ಮನಸ್ಥಿತಿ ಗಳಿಗೆ ಯಾವುದೇ ಪರಿಹಾರ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
(ಫೋಟೋ ಮಗ್‌ಶಾಟ್ ಮಾತ್ರ)3ಕೆಆರ್ ಎಂಎನ್ 5.ಜೆಪಿಜಿ
ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ.