ಸಾರಾಂಶ
ದೇವರಹಿಪ್ಪರಗಿ: ಎತ್ತಿನ ಗಾಡಿ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದ ಪರಿಣಾಮ ಎತ್ತುಗಳು ಸಾವನ್ನಪ್ಪಿದ ದುರ್ಘಟನೆ ಸೋಮವಾರ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ಯಮನಪ್ಪ ಬಸಗೊಂಡಪ್ಪ ವಡ್ಡೊಡಗಿ ಎಂಬುವರ ಎತ್ತುಗಳೇ ಸಾವನ್ನಪ್ಪಿವೆ. ಯಮನಪ್ಪ ಹಿಂದೆ ₹ 1 ಲಕ್ಷ ಬೆಲೆಬಾಳುವ ಎರಡು ಹೋರಿಗಳನ್ನು ಖರೀದಿಸಿದ್ದರು. 3 ವರ್ಷ ವಯಸ್ಸಿನ ಈ ಹೋರಿಗಳನ್ನು ಸೋಮವಾರ ಜಮೀನಿನಲ್ಲಿ ಗಾಡಿಗೆ ಕಟ್ಟಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಎತ್ತುಗಳು ಏಕಾಏಕಿ ಗಾಬರಿಗೊಂಡು ಹೋರಿಗಳು ಮನಬಂದಂತೆ ಓಡಲಾರಂಭಿಸಿವೆ. ಎಷ್ಟೇ ನಿಯಂತ್ರಿಸಿದರೂ ನಿಲ್ಲದೇ ಓಡಿದ್ದು, ರಭಸದಲ್ಲಿ ಹೋರಿಗಳು ಗಾಡಿ ಸಮೇತ ಜಮೀನಿನಲ್ಲಿದ್ದ ಬಾವಿಗೆ ಬಿದ್ದಿವೆ. ಈ ಘಟನೆ ಸುತ್ತಮುತ್ತಲಿನ ತೋಟದ ಮನೆಯಲ್ಲಿ ವಾಸವಾಗಿರುವ ರೈತರಿಗೆ ತಿಳಿಯುತ್ತಿದ್ದಂತೆ ಘಟನಾ ಸ್ಫಳಕ್ಕೆ ಆಗಮಿಸಿ ಬಾವಿಯಿಂದ ಎತ್ತುಗಳನ್ನು ಹೊರ ತೆಗೆಯುವಷ್ಟರಲ್ಲಿ ಅವುಗಳ ಪ್ರಾಣ ಪಕ್ಷಿ ಹಾರಿಹೋಗಿತ್ತು. ಸ್ಥಳಕ್ಕೆ ಕಂದಾಯ ಹಾಗೂ ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.