ಸಾರಾಂಶ
ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ರಸ್ತೆ ಮಾಡುವ ನೆಪದಲ್ಲಿ ರಸ್ತೆ ಬದಿಯಲ್ಲಿದ್ದ 100 ಕ್ಕೂ ಹೆಚ್ಚು ಮರ ಕಡಿದ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯಿಸಿದರು.
ಕೊರಟಗೆರೆ : ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ರಸ್ತೆ ಮಾಡುವ ನೆಪದಲ್ಲಿ ರಸ್ತೆ ಬದಿಯಲ್ಲಿದ್ದ 100 ಕ್ಕೂ ಹೆಚ್ಚು ಮರ ಕಡಿದ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯಿಸಿದರು.
ತಾಲೂಕಿನ ಜಿ.ನಾಗೇನಹಳ್ಳಿಯಿಂದ ತೀತಾ ಗ್ರಾಮದವರೆಗೆ ಪಿಡಬ್ಯ್ಲುಡಿ ಇಲಾಖೆಯಿಂದ ರಸ್ತೆಯಲ್ಲಿರುವ ಜಂಗಲ್ ತೆರವು ಮಾಡುವ ಸಂದರ್ಭದಲ್ಲಿ ಮಾದವಾರ ಸಮೀಪ ೧೦೦ಕ್ಕೂ ಹೆಚ್ಚು ಮರಗಳನ್ನು ಇಟಾಚಿ ಮೂಲಕ ಕಿತ್ತು ಹಾಕಲಾಗಿದ್ದು, ಪಿಡಬ್ಯ್ಲುಡಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರ ಕಡಿಯಲಾಗಿದೆ.
ಸಾಮಾಜಿಕ ಹೋರಾಟಗಾರ ಅರುಣ್‌ಕುಮಾರ್ ಮಾತನಾಡಿ, ರಸ್ತೆ ಬದಿಯಲ್ಲಿರುವ ೧೦೦ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಿದ್ದಾರೆ. ಮರ ಕಡಿಯದೆ ಕೆಲಸ ಮಾಡುವಂತೆ ತಿಳಿಸಲಾಗಿತ್ತು, ಆದರೂ ಮರ ಕಡಿದಿದ್ದಾರೆ. ಈ ರಸ್ತೆ ಗೊರವನಹಳ್ಳಿಗೆ ಸಂರ್ಪಕಿಸುತ್ತದೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತವೆ. ದೇವಸ್ಥಾನಕ್ಕೆ ಬರುವ ಭಕ್ತರು ಈ ರಸ್ತೆ ಬದಿಯ ಮರಗಳ ನೆರಳಲ್ಲಿ ಊಟ ಮಾಡುತ್ತಾರೆ. ಇಲ್ಲಿವರೆಗೂ ಪಿಡಬ್ಯ್ಲುಡಿ ಇಲಾಖೆ ಅಧಿಕಾರಿಗಳು ಬಂದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳಷ್ಟೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದರು.
ತೀತಾ ಗ್ರಾಮಸ್ಥ ಮಂಜುನಾಥ್ ಮಾತನಾಡಿ, ಜಿ.ನಾಗೇನಹಳ್ಳಿ ಗ್ರಾಮದಿಂದ ತೀತಾ ಗ್ರಾಮದವರೆಗೆ ರಸ್ತೆ ಅಗಲಿಕರಣ ಮಾಡಲು ಇಟಾಚಿ ಬಳಸಿ ಜಂಗಲ್ ಕ್ಲೀನ್ ಮಾಡಲಾಗುತ್ತಿದ್ದು, ರಸ್ತೆ ಬದಿ ಮರಗಳನ್ನು ಯಾರಿಗೂ ಹೇಳದೆ ಕೇಳದೆ ಕಡಿದಿದ್ದಾರೆ ಎಂದರು. ವಲಯ ಅರಣ್ಯಾಧಿಕಾರಿ ಸುರೇಶ್ ಮಾತನಾಡಿ, ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ೧೦೦ಕ್ಕೂ ಹೆಚ್ಚು ಮರ ಕಡಿದಿದ್ದಾರೆ ಎಂದು ಸಾರ್ವಜನಿಕರು ದೂರವಾಣಿ ಮೂಲಕ ತಿಳಿಸಿದ್ದಾರೆ. ಸ್ಥಳಕ್ಕೆ ನಾನು ಕೂಡ ಭೇಟಿ ನೀಡಿದ್ದು, ಎಷ್ಟು ಮರಗಳು ನಾಶವಾಗಿದ್ದಾವೆ ಎಂದು ನಮ್ಮ ಸಿಬ್ಬಂದಿ ವರದಿ ನೀಡಿದ ನಂತರ ಗುತ್ತಿಗೆದಾರನ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.