ರಸ್ತೆ ಅಗಲೀಕರಣ ನೆಪದಲ್ಲಿ ಮರಗಳ ಮಾರಣ ಹೋಮ

| Published : May 10 2024, 11:45 PM IST / Updated: May 11 2024, 10:40 AM IST

ಸಾರಾಂಶ

ಒಂದು ಕಡೆ ಸರ್ಕಾರ ಕಾಡು-ಬೆಳೆಸಿ ನಾಡು ಉಳಿಸಿ ಎಂಬ ಸಂದೆಶವನ್ನು ಸಾರುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರವೇ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಎರಡೂ ಬದಿ ಇದ್ದ ಬೃಹತ್ ಗಾತ್ರದ ಮರಗಳನ್ನು ನಿರ್ದಾಕ್ಷಿಣ್ಯವಾಗಿ ನಾಶ ಮಾಡಿಸುತ್ತಿದೆ.

 ಗೌರಿಬಿದನೂರು :  ರಸ್ತೆ ಅಗಲೀಕರಣಕ್ಕಾಗಿ ನಗರದ ಗುಂಡಾಪುರಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ಮರಗಳ ಹನನ ಮಾಡಲಾಗಿದೆ. ದಾರಿಹೋಕರಿಗೆ ನೆರಳಾಗಿದ್ದ ಸುಮಾರು 354 ಮರಗಳ ಕಡಿತಲೆ ಮಾಡಿರುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ದ್ವಿಪಥ ರಸ್ತೆ ನಿರ್ಮಾಣ ಮಾಡಲು ಮರಗಳನ್ನು ಕಡಿದಿರುವುದು ಎಷ್ಟರ ಮಟ್ಟಿಗೆ ಸರಿ. ಒಂದು ಮರ ಕಡಿದರೆ ಅದರ ಅಕ್ಕ ಪಕ್ಕ 10 ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಮತೋಲನ ಕಾಪಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪರಿಸರದ ಮೇಲೆ ದುಷ್ಪರಿಣಾಮ

ರಸ್ತೆಯ ಎರಡೂ ಬದಿ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಳು ಇಲ್ಲದೆ ರಸ್ತೆಯೆಲ್ಲಾ ಬರಿದಾಗಿ ಕಾಣುತ್ತಿದೆ. ‘ಒಂದು ಮರ ಬೆಳೆಸಲು ಕನಿಷ್ಠ 13 ರಿಂದ 15 ವರ್ಷಗಳ ಕಾಲ ಬೇಕಾಗುತ್ತದೆ. ಅದು ತನ್ನ ಜೀವಿತಾವಧಿಯಲ್ಲಿ ಆಮ್ಲಜನಕ ನೀಡುತ್ತದೆ ಮತ್ತು ಪರೋಕ್ಷವಾಗಿ ಮಾನವನಿಗೆ, ಪ್ರಾಣಿ-ಪಕ್ಷಿಗಳಿಗೆ ಅನೇಕ ರೀತಿಯ ಅನುಕೂಲ ನೀಡುತ್ತದೆ. ಮರಗಳ ಹನನದಿಂದ ಪರಿಸರ ಅಸಮತೋಲನ ಉಂಟಾಗುತ್ತದೆ.ಒಂದು ಕಡೆ ಸರ್ಕಾರ ಕಾಡು-ಬೆಳೆಸಿ ನಾಡು ಉಳಿಸಿ ಎಂಬ ಸಂದೆಶವನ್ನು ಸಾರುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರವೇ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಎರಡೂ ಬದಿ ಇದ್ದ ಬೃಹತ್ ಗಾತ್ರದ ಮರಗಳನ್ನು ನಿರ್ದಾಕ್ಷಿಣ್ಯವಾಗಿ ನಾಶ ಮಾಡಿಸುತ್ತಿದೆ. ಈ ರಸ್ತೆಯಲ್ಲಿ ಸರಿಸುಮಾರು 60 -70 ವರ್ಷಗಳಿಂದ ಮನುಷ್ಯರಿಗೆ, ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡುತ್ತಿದ್ದ ಮರಗಳು ಈಗ ಕೊಡಲಿಗೆ ಕೊಡಲಿ ಬಲಿಯಾಗಿವೆ.

ಸಸಿಗಳನ್ನು ನೆಟ್ಟು ಪೋಷಿಸಿ

ನಗರ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆ, ಇದಕ್ಕೆ ಸರಿಯಾಗಿ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತದೆ. ಟ್ರಾಫಿಕ್‌ ಸಮಸ್ಯೆ ಪರಿಹರಿಸಲು ರಸ್ತೆ ವಿಸ್ತರಣೆ ಅಗತ್ಯ. ಆದರೆ, ಮರ ಕಡಿಯುವ ಮುನ್ನ ಅಕ್ಕ ಪಕ್ಕ ಗಿಡ ನೆಟ್ಟು ಪೋಷಿಸಬೇಕು. ಸರಿಯಾಗಿ ರೀತಿಯಲ್ಲಿ ಯೋಚಿಸಿ ಕಾಮಗಾರಿ ಮಾಡಿದ್ದಿದ್ದರೆ ಪರಿಸರದ ಮೇಲೆ ದೌರ್ಜನ್ಯ ನಡೆಸಿದಂತಾಗುತ್ತದೆ.

 … 

ರಾಷ್ಟೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದಾಗಿ ರಸ್ತೆ ಬದಿ ಮರಗಳನ್ನು ಅನಿವಾರ್ಯವಾಗಿ ಕಡಿಯಲಾಗಿದೆ. ಆದರೆ ಕತ್ತರಿಸಿದ ಪ್ರತಿಯೊಂದು ಮರಕ್ಕೂ ಬದಲು 10 ಗಿಡಗಳನ್ನು ನೆಡಲಾಗುವುದು.

ಮಲ್ಲಿಕಾರ್ಜುನ್, ಎಇಇ, ಹೆದ್ದಾರಿ ಪ್ರಾಧಿಕಾರ.

ಸಾರ್ವಜನಿಕರಿಗೆ ಗಿಡ ಮರಗಳ ಅನಿವಾರ್ಯತೆ ಈಗ ಅರಿವಾಗುತ್ತಿದೆ. ಮಳೆಗಾಲ ಪ್ರಾರಂಭವಾದ ಗಿಡಗಳನ್ನು ಬೆಳೆಸಲು ಸರ್ಕಾರ ಹಲವಾರು ಯೋಜನೆಗಳನ್ನು ಪೂಪಿಸಿದೆ. ಸಾರ್ವಜನಿಕರು ಈ ಯೋಜನೆಗಳನ್ನು ಬಳಸಿಕೊಂಡು ಉತ್ತಮ ಪರಿಸರ ನಿರ್ಮಿಸಬಹುದು.

ಹಂಸವಿ, ವಲಯ ಅರಣ್ಯಾಧಿಕಾರಿ.