ವನ್ಯಜೀವಿಗಳ ಸಾವು: ಕೆಪಿಟಿಸಿಎಲ್‌ಗೆ ನೋಟಿಸ್‌

| Published : Jul 21 2024, 01:18 AM IST

ಸಾರಾಂಶ

ವಿದ್ಯುತ್ ಸ್ಪರ್ಶ ಹಾಗೂ ಅಸ್ವಾಭಾವಿಕ ಕಾರಣಗಳಿಂದ ಆನೆ ಸೇರಿದಂತೆ ವನ್ಯಜೀವಿಗಳು ಸಾವನ್ನಪುತ್ತಿರುವ ಬಗ್ಗೆ ಉತ್ತರ ನೀಡುವಂತೆ ಸೂಚಿಸಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಸಲ್‌) ಹಾಗೂ ಎಲ್ಲ ಎಸ್ಕಾಂಗಳಿಗೆ ಹೈಕೋರ್ಟ್‌ ನೋಟಿಸ್ ಜಾರಿ ಮಾಡಿದೆ.

ಕನ್ನಪಡ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ವಿದ್ಯುತ್ ಸ್ಪರ್ಶ ಹಾಗೂ ಅಸ್ವಾಭಾವಿಕ ಕಾರಣಗಳಿಂದ ಆನೆ ಸೇರಿದಂತೆ ವನ್ಯಜೀವಿಗಳು ಸಾವನ್ನಪುತ್ತಿರುವ ಬಗ್ಗೆ ಉತ್ತರ ನೀಡುವಂತೆ ಸೂಚಿಸಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಸಲ್‌) ಹಾಗೂ ಎಲ್ಲ ಎಸ್ಕಾಂಗಳಿಗೆ ಹೈಕೋರ್ಟ್‌ ನೋಟಿಸ್ ಜಾರಿ ಮಾಡಿದೆ.

ಮೈಸೂರಿನಲ್ಲಿ ಅಶ್ವತ್ಥಾಮ ಆನೆ ಸೇರಿದಂತೆ ರಾಜ್ಯದ ವಿವಿಧ ಪ್ರದೇಶದಲ್ಲಿ ಆನೆಗಳು ವಿದ್ಯುತ್‌ ಸ್ಪರ್ಶದಿಂದ ಹಾಗೂ ಅಸ್ವಾಭಾವಿಕವಾಗಿ ಸಾವನ್ನಪ್ಪಿರುವ ಬಗ್ಗೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ವಿಚಾರಣೆಗೆ ಬಂದಿತ್ತು.

ಅರ್ಜಿಯಲ್ಲಿ ಕೆಪಿಟಿಸಿಎಲ್‌ ಹಾಗೂ ರಾಜ್ಯದ ಎಲ್ಲ ಎಸ್ಕಾಂಗಳನ್ನು ಪ್ರತಿವಾದಿ ಮಾಡಲಾಗಿತ್ತು. ಇದರಿಂದ ಅರ್ಜಿ ಕುರಿತು ಉತ್ತರಿಸುವಂತೆ ಎಲ್ಲ ಪ್ರತಿವಾದಿಗಳಿಗೆ ಸೂಚಿಸಿದ ನ್ಯಾಯಪೀಠವು ವಿಚಾರಣೆಯನ್ನು ಆ.12ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಸರ್ಕಾರಿ ಪರ ವಕೀಲರು, ವನ್ಯಜೀವಿಗಳ ಸಾವಿಗೆ ಸಂಬಂಧಿಸಿದಂತೆ ವನ್ಯಜೀವಿ ಧಾಮಗಳಲ್ಲಿ ಅಳವಡಿಸಿರುವ ವಿದ್ಯುತ್ ತಂತಿಗಳು ಮುಖ್ಯ ಕಾರಣವಾಗಿದೆ. ಈ ವಿದ್ಯುತ್ ತಂತಿಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ. ಅರಣ್ಯದಂಚಿನ ಕೃಷಿ ಭೂಮಿಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗುತ್ತಿದೆ. ಕಡಿಮೆ ಎತ್ತರದಲ್ಲಿ ತಂತಿಗಳ ಅಳವಡಿಸಲಾಗಿದೆ. ಇದರಿಂದ ವನ್ಯಜೀವಿಗಳ ಜೀವಕ್ಕೆ ಅಪಾಯವಾಗಿದೆ. ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಎಲ್ಲ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಅರಣ್ಯ ಇಲಾಖೆಯಿಂದ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ, ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.