ಸಾರಾಂಶ
ಜಲಾಶಯದ ಮೇಲೆ ಕೇವಲ ರೈತರಲ್ಲದೆ ಈ ಭಾಗದಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸುಮಾರು 2 ಲಕ್ಷ ಜನರು ಜಲಾಶಯದ ಮೇಲೆ ಅವಲಂಬಿತರಾಗಿದ್ದಾರೆ.
ರೈತರ ಮನವಿ ಸ್ವೀಕರಿಸಿದ ರಾಯಚೂರು ಸಂಸದ
ಕನ್ನಡಪ್ರಭ ವಾರ್ತೆ ಮುನಿರಾಬಾದ್ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ರಾಯಚೂರು ಸಂಸದ ಕುಮಾರ ನಾಯಕ ತಿಳಿಸಿದ್ದಾರೆ.
ಇಲ್ಲಿನ ವಿಶ್ವೇಶ್ವರಯ್ಯ ಸರ್ಕಲ್‌ನಲ್ಲಿ ತುಂಗಭದ್ರಾ ಉಳಿಸಿ ಎನ್ನುವ ಘೋಷವಾಕ್ಯದಡಿ ರಾಯಚೂರಿನ ಸಿರವಾರ ತಾಲೂಕಿನಿಂದ ಮುನಿರಾಬಾದಿಗೆ ಪಾದಯಾತ್ರೆ ಮೂಲಕ ಬಂದ 200ಕ್ಕೂ ಅಧಿಕ ರೈತರ ಮನವಿ ಸ್ವೀಕರಿಸಿ ಮಾತನಾಡಿದರು.ಪಾದಯಾತ್ರೆ ಮಾಡುವುದು ಒಂದು ದೊಡ್ಡ ವಿಷಯ, ರೈತರ ಬಗ್ಗೆ ತಮಗೆ ಹೆಮ್ಮೆ ಇದೆ. ತಾವು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಮತ್ತು ಬಳ್ಳಾರಿ ಸಂಸದ ತುಕರಾಮರೊಂದಿಗೆ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಲೋಕಸಭೆಯಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಮಾತನಾಡಿದ ರೈತ ಮುಖಂಡ ಎಚ್.ಎಂ. ಬಡಿಗೇರ, ತುಂಗಭದ್ರಾ ಜಲಾಶಯ 70 ವರ್ಷ ಹಳೆಯದಾಗಿದ್ದು, ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಇದನ್ನು ಸರಿಯಾಗಿ ನಿರ್ವಹಿಸದ ಕಾರಣ ಜಲಾಶಯದ ಗೇಟು ಕಿತ್ತುಕೊಂಡು ಹೋಗಿದೆ. ಇದೇ ಮೊದಲು ಮತ್ತು ಕೊನೆಯದಾಗಬೇಕು. ಮತ್ತೊಮ್ಮೆ ಅವಘಡ ಸಂಭವಿಸಿದರೆ ರೈತರು ದಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ತುಂಗಭದ್ರಾ ಜಲಾಶಯದ ಗೇಟುಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಗೇಟು ತುಕ್ಕು ಹಿಡಿದು ಕಿತ್ತುಕೊಂಡು ಹೋಗಿ ಜಲಾಶಯದಿಂದ ಸುಮಾರು 33 ಟಿಎಂಸಿ ನೀರು ನದಿಗೆ ಹೋಗಿದೆ. ನದಿಗೆ ಹರಿದಿದ್ದು ನೀರಲ್ಲ, ಅದು ರೈತರ ರಕ್ತ ಎಂದು ರಾಯಚೂರು ರೈತ ಸಂಘದ ಜಿಲ್ಲಾಧ್ಯಕ್ಷೆ ಅನಿತಾ ಬಸವರಾಜ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಶರಣೇಗೌಡ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಅಕ್ಕಿಯನ್ನು ರಪ್ತು ಮಾಡಲಾಗುತ್ತಿದೆ. ಈ ಭಾಗದಿಂದ ಸರ್ಕಾರಕ್ಕೆ ₹6000 ಕೋಟಿ ವಾರ್ಷಿಕ ಅದಾಯ ಇದೆ. ಜಲಾಶಯದ ಮೇಲೆ ಕೇವಲ ರೈತರಲ್ಲದೆ ಈ ಭಾಗದಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸುಮಾರು 2 ಲಕ್ಷ ಜನರು ಜಲಾಶಯದ ಮೇಲೆ ಅವಲಂಬಿತರಾಗಿದ್ದಾರೆ. ಸರ್ಕಾರವು ಜಲಾಶಯದ ನಿರ್ವಹಣೆಗೆ ₹ 100 ಕೋಟಿ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವರಾಜ, ಹನುಮಂತಪ್ಪ ನಾಯಕ ಹಾಗೂ ಇತರರು ಇದ್ದರು.