ಬಲಾಡ್ಯ ಉದ್ಯಮಿಗಳ ಸಾಲ ಮನ್ನಾದ ಬಗ್ಗೆ ಚರ್ಚಿಸಿ : ಹೆಗ್ಡೆ ಸವಾಲು

| Published : Mar 31 2024, 02:05 AM IST / Updated: Mar 31 2024, 02:06 AM IST

ಬಲಾಡ್ಯ ಉದ್ಯಮಿಗಳ ಸಾಲ ಮನ್ನಾದ ಬಗ್ಗೆ ಚರ್ಚಿಸಿ : ಹೆಗ್ಡೆ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಬಡವರ ಆರ್ಥಿಕ ಜೀವನ ಸುಧಾರಣೆಗೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವುದನ್ನು ಚರ್ಚಿಸುವ ಬಿಜೆಪಿ, ಉದ್ಯಮಿಗಳ ಕೋಟಿಗಟ್ಟಲೇ ಸಾಲಮನ್ನಾದ ಬಗ್ಗೆ ಚರ್ಚಿಸದೇ ಮೌನವಹಿಸಿರುವುದು ಸರಿಯೇ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕೆ. ಜಯಪ್ರಕಾಶ್ ಹೆಗ್ಡೆ ಪ್ರಶ್ನಿಸಿದರು.

ಚಿಕ್ಕಮಗಳೂರು ಜಿಲ್ಲಾ ಆಟದ ಮೈದಾನದಲ್ಲಿ ಬೆಳ್ಳಂಬೆಳಿಗ್ಗೆ ವಾಯು ವಿಹಾರಿಗಳನ್ನು ಭೇಟಿ ಮಾಡಿ ಮತಯಾಚನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಡವರ ಆರ್ಥಿಕ ಜೀವನ ಸುಧಾರಣೆಗೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವುದನ್ನು ಚರ್ಚಿಸುವ ಬಿಜೆಪಿ, ಉದ್ಯಮಿಗಳ ಕೋಟಿಗಟ್ಟಲೇ ಸಾಲಮನ್ನಾದ ಬಗ್ಗೆ ಚರ್ಚಿಸದೇ ಮೌನವಹಿಸಿರುವುದು ಸರಿಯೇ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕೆ. ಜಯಪ್ರಕಾಶ್ ಹೆಗ್ಡೆ ಪ್ರಶ್ನಿಸಿದರು.

ನಗರದಲ್ಲಿ ಮುಂಜಾನೆಯಿಂದ ಜಿಲ್ಲಾ ಆಟದ ಮೈದಾನದಲ್ಲಿ ವಾಯುವಿಹಾರಿಗಳನ್ನು ಭೇಟಿ ಮಾಡಿ ಬಳಿಕ ಶ್ರೀ ಕೊಲ್ಲಾಪುರದಮ್ಮದೇವಿ ದರ್ಶನ ಪಡೆದು ಹಿರೇಮಗಳೂರು ಹಾಗೂ ನರಿಗುಡ್ಡೇನಹಳ್ಳಿ ಗ್ರಾಮಗಳಿಗೆ ಚುನಾವಣಾ ಪ್ರಯುಕ್ತ ಶನಿವಾರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪರ ಮತಯಾಚಿಸಿದರು. ಸಂವಿಧಾನದಡಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷದ ಕಟ್ಟಾಳು ನಾವುಗಳು. ಅದೇ ಸಂವಿಧಾನದ ತಿದ್ದುಪಡಿಗೆ ಹೊರಟಿರುವ ಬಿಜೆಪಿಗೆ ಸಂವಿಧಾನ ಬೇಡವಾದಂತಿದೆ. ಹಾಗಾಗಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಂವಿಧಾನ ಅಪಾಯದಂಚಿನಲ್ಲಿರುವ ಹಿನ್ನೆಲೆಯಲ್ಲಿ ಕಾಪಾಡುವ ಜವಾಬ್ದಾರಿ ನಿಮ್ಮ ಮತಗಳ ಮೇಲೆ ನಿಂತಿದೆ ಎಂದರು.ಪ್ರಸ್ತುತ ಹಾಲಿ ಸಂಸದರು ಕಳೆದ ಹತ್ತು ವರ್ಷಗಳಿಂದ ಏನನ್ನು ಮಾಡದೇ ಜಿಲ್ಲೆಯ ಶೋಭೆಯನ್ನು ಹಾಳುಗೆಡವಲಾಗಿದೆ. ಅಡಕೆ, ಕಾಫಿ ಹಾಗೂ ರೈತರ ತುರ್ತು ಸಂದರ್ಭದಲ್ಲಿ ಸ್ಪಂದಿಸಿ ಪರಿಹಾರ ಒದಗಿಸದಿರುವುದು ಸ್ಥಳೀಯವಾಗಿ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಇಂದಿಗೂ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಟೀಕಿಸಿದರು.ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕಟಿಬದ್ಧವಾಗಿ ನಿರ್ಧಾರ ಕೈಗೊಂಡಿದ್ದು ಮತದಾರರು ಈ ಬಾರಿ ಲೋಕಸಭಾ ಚುನಾವಣೆ ಯಲ್ಲಿ ಅತ್ಯಧಿಕ ಮತಗಳಿಂದ ಜಯಗೊಳಿಸಿದರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ಶತಸಿದ್ಧ ಎಂದ ಅವರು, ಚಿಕ್ಕಮಗಳೂರಿಗೆ ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳು, ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಗಳು ಎಂದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಹತ್ತು ತಿಂಗಳ ಅವಧಿಯಲ್ಲೇ ಐದು ಗ್ಯಾರಂಟಿಗಳನ್ನು ಘೋಷಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದೆ. ಇಂದಿನ ಚುನಾವಣೆ ಪಕ್ಷದ ಸವಾಲಾಗಿದ್ದು ಕಾರ್ಯಕರ್ತರು ದೃತಿಗೆಡದೇ ಪ್ರತಿ ಬೂತ್‌ಗಳಲ್ಲಿ ಅತಿಹೆಚ್ಚು ಮತದಾನಕ್ಕೆ ಪ್ರಕ್ರಿಯೆಯಲ್ಲಿ ತೊಡಗಿ ಚಿಕ್ಕಮಗಳೂರನ್ನು ಮತ್ತೊಮ್ಮೆ ಕಾಂಗ್ರೆಸ್‌ನ ಭದ್ರಬುನಾದಿಯಾಗಿ ಮುನ್ನೆಡೆಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಹಾಲಿ ಸಂಸದರು ಕ್ಷೇತ್ರದಲ್ಲಿ ಕೇವಲ ಕಾಲಹರಣ ಮಾಡಿಕೊಂಡಿರುವುದು ಗಮನಿಸಿ, ಅವರದೇ ಪಕ್ಷದ ಮುಖಂಡರೇ ಗೋಬ್ಯಾಕ್ ಶೋಭಾ ಅಭಿಯಾನ ಆರಂಭಿಸಿರುವುದು ಮತದಾರರೇ ಮರೆಯದಿರಿ. ಕೇಂದ್ರದಿಂದ ಕಾಫಿ, ಅಡಿಕೆಗೆ ಪರಿಹಾರ ಹಾಗೂ ರೈಲ್ವೆ ತಂದಿದ್ದೇವೆ ಎಂದು ಹೇಳಿ ಬಾಯ್ತುಂಬ ರೈಲನ್ನೇ ಬಿಡುತ್ತಿದ್ದಾರೆ ಎಂದು ಹೇಳಿದರು.ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಸರಳ, ಸಜ್ಜನ ವ್ಯಕ್ತಿ ಜಯಪ್ರಕಾಶ್ ಹೆಗ್ಡೆ ಬಗ್ಗೆ ಇಲ್ಲಸಲ್ಲದ ಆರೋಪ ಸಹಿಸುವುದಿಲ್ಲ. ರೈತರು, ದಲಿತರು, ಅಲ್ಪಸಂಖ್ಯಾತರು ಹಾಗೂ ಬಡವರ ಪರ ಅತ್ಯಂತ ಕಾಳಜಿ ಹೊಂದಿರುವವರ ಬಗ್ಗೆ ಸುಳ್ಳು ಅಪಾದನೆ ಮಾಡುವ ವಿರೋಧಿಗಳಿಗೆ ತಕ್ಕ ಪಾಠವಾಗಿ ಈ ಬಾರಿ ಚುನಾ ವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಮಾಜಿ ಅಧ್ಯಕ್ಷ ಡಾ.ಡಿ.ಎಲ್.ವಿಜಯ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಕೃಷಿ ಉತ್ಪನ್ನಗಳ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಪಕ್ಷದ ವಕ್ತಾರ ರೂಬೆನ್‌ಮೋಸಸ್, ಜಿಪಂ ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ಮುಖಂಡರಾದ ಪ್ರಕಾಶ್, ಹಿರೇಮಗಳೂರು ರಾಮಚಂದ್ರ, ಸಂತೋಷ್, ಕೆ.ಭರತ್, ನಾಸಿರ್ ನಿಸಾರ್ ಅಹ್ಮದ್ ಹಾಗೂ ಕಾರ್ಯಕರ್ತರು ಇದ್ದರು. 30 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ವಾಯು ವಿಹಾರಿಗಳ ಬಳಿ ಮತಯಾಚಿಸಿದರು.