ಕಾಂಗ್ರೆಸ್ಸಿನ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಅಧಿವೇಶನದಲ್ಲಿ ಚರ್ಚೆ : ವಿಪಕ್ಷ ನಾಯಕ ಆರ್.ಅಶೋಕ್

| Published : Dec 10 2024, 12:32 AM IST / Updated: Dec 10 2024, 12:48 PM IST

ಕಾಂಗ್ರೆಸ್ಸಿನ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಅಧಿವೇಶನದಲ್ಲಿ ಚರ್ಚೆ : ವಿಪಕ್ಷ ನಾಯಕ ಆರ್.ಅಶೋಕ್
Share this Article
  • FB
  • TW
  • Linkdin
  • Email

ಸಾರಾಂಶ

ಅನುದಾನದಲ್ಲಿ ತಾರತಮ್ಯ ಮತ್ತು ಇತರೆ ವಿಷಯಗಳ ಕುರಿತು ಇಲ್ಲಿನ ಅಧಿವೇಶನದಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

 ಬೆಳಗಾವಿ : ಅನುದಾನದಲ್ಲಿ ತಾರತಮ್ಯ ಮತ್ತು ಇತರೆ ವಿಷಯಗಳ ಕುರಿತು ಇಲ್ಲಿನ ಅಧಿವೇಶನದಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಬೆಳಗಾವಿಯ ಖಾಸಗಿ ಹೊಟೇಲ್ಲೊಂದರಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಬಿಜೆಪಿ ಜನಪ್ರತಿನಿಧಿಗಳ ಸಭೆ ಇಂದು ಒಂದು ಗಂಟೆಗೂ ಹೆಚ್ಚು ಕಾಲ ನಡೆದಿದೆ ಎಂದು ಅವರು ತಿಳಿಸಿದರು. ಹೆಚ್ಚಿನ ಶಾಸಕರು ಅನುದಾನದ ತಾರತಮ್ಯ ಆಗುತ್ತಿದೆ ಎಂದು ತಿಳಿಸಿದ್ದಾರೆ ಎಂದರು.ಅನುದಾನ ಇಲ್ಲದ ಕಾರಣ ರಸ್ತೆ ಸಮಸ್ಯೆ ಆಗಿದೆ. ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ತಿಳಿಸಿದ್ದಾರೆ. ಅತಿವೃಷ್ಟಿ ಬಂದರೂ ಹಣ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದಾರೆ. 

ಇವೆಲ್ಲವನ್ನು ಚರ್ಚೆಗೆ ತೆಗೆದುಕೊಳ್ಳಲು ಕೋರಿದ್ದಾರೆ. ಅಲ್ಲದೆ, ಬಾಣಂತಿಯರ ಸಾವು, ಮಕ್ಕಳ ಸಾವಿನ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ ಎಂದರು.ಬೆಳಗಾವಿ ಅಧಿವೇಶನ ಎಂದೊಡನೆ ಮಲೆನಾಡು ಪ್ರದೇಶದ ವಿಚಾರ ಚರ್ಚೆಗೆ ಬರುತ್ತಿಲ್ಲ ಎಂದಿದ್ದಾರೆ. ಅದನ್ನು ಕೂಡ ಚರ್ಚಿಸುತ್ತೇವೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ದುಡ್ಡು ಕೊಡದೆ ಏನು ಕೆಲಸವೂ ಆಗುತ್ತಿಲ್ಲ ಎಂದು ದೂರಿದ್ದಾರೆ. 

ಗುತ್ತಿಗೆದಾರರು ಲಂಚ ಕೊಟ್ಟು ಕೆಲಸ ಗುತ್ತಿಗೆ ಪಡೆಯುತ್ತಿದ್ದಾರೆ. ಶಾಸಕರಿಗೆ ಗೌರವ ಇಲ್ಲ ಎಂಬ ವಿಚಾರವೂ ಚರ್ಚೆ ಮಾಡಲು ಕೋರಿದ್ದಾರೆ. ತಾರತಮ್ಯ ಮತ್ತು ಕೃಷ್ಣಾ ಯೋಜನೆಗೆ (ಯುಕೆಪಿ) ಹಣ ನೀಡದೆ ಇರುವ ಕುರಿತು ಕೂಡ ಚರ್ಚೆ ನಡೆದಿದ್ದು ಇವೆಲ್ಲವುಗಳನ್ನು ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದು ವಿವರಿಸಿದರು.

ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದ್ದರು. ಒಟ್ಟಿಗೆ ಇರಲು ಸಹಮತ ವ್ಯಕ್ತವಾಗಿದೆ. ಇಂದಿನ ಸಭೆ ಮುಕ್ತವಾದ ವಾತಾವರಣದಲ್ಲಿ ನಡೆದಿದೆ. 

ಸಿಗುವ 5 ದಿನದಲ್ಲಿ ಕಾಂಗ್ರೆಸ್ಸಿನ ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.ಯತ್ನಾಳ್, ರಮೇಶ್ ಜಾರಕಿಹೊಳಿ ಅವರು ನನ್ನ ಜೊತೆ ಫೋನ್ ಮಾಡಿ ಮಾತನಾಡಿದ್ದಾರೆ. ಈ ಸಭೆಗೆ ಬರಲಾಗುವುದಿಲ್ಲ. ಮುಂದಿನ ಬಾರಿ ಬರುವುದಾಗಿ ಹೇಳಿದ್ದಾರೆ. ಶಾಸಕರಿಗೆ ಸಮಸ್ಯೆಗಳಿದ್ದರೆ ಬಂದು ಮಾತನಾಡಿ ಎಂದು ಅಧ್ಯಕ್ಷರೂ ಹೇಳಿದ್ದಾರೆ ಎಂದು ತಿಳಿಸಿದರು. 

ಇವತ್ತಿನ ಅಸೆಂಬ್ಲಿಯಲ್ಲಿ ನಾವೆಲ್ಲರೂ ಒಟ್ಟಾಗಿ ಹೋಗಿದ್ದೇವೆ ಎಂದು ಹೇಳಿದರು.ಪಂಚಮಸಾಲಿ ವಿಚಾರದಲ್ಲಿ ಸರ್ಕಾರವನ್ನು ಬಗ್ಗುಬಡಿದು ಗೆಲುವು ಸಾಧಿಸಿದ್ದೇವೆ. ಅನುಮತಿಯೂ ಸಿಕ್ಕಿದೆ ಎಂದ ಅವರು, ನಾಳೆ ವಕ್ಫ್ ಬೋರ್ಡ್ ಕುರಿತು ಚರ್ಚೆ ಇದೆ. ಬಳಿಕ ಪಂಚಮಸಾಲಿ ಹೋರಾಟದ ಜಾಗಕ್ಕೆ ಭೇಟಿ ಕೊಡಲಿದ್ದೇನೆ. ಇದು ತುಘಲಕ್ ಆಡಳಿತ ಎಂದು ಜರಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯಸಹ ಉಸ್ತುವಾರಿ ಸುಧಾಕರ ರೆಡ್ಡಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ, ವಿಧಾನ ಪರಿಷತ್ತಿನ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.

ಶಾಸಕಾಂಗ ಸಭೆಗೆ ರೇಬಲ್ಸ್‌ ಗೈರು:

ಶಾಸಕಾಂಗ ಸಭೆಗೂ ಬಿಜೆಪಿ ಬಣ ಬಡೆದಾಟ ತಟ್ಟಿದೆ. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಎಸ್‌.ಟಿ.ಸೋಮಶೇಕರ, ಶಿವರಾಮ ಹೆಬ್ಬಾರ ಸಭೆಗೆ ಗೈರಾಗಿರುವುದು ಕಂಡುಬಂತು. ಯತ್ನಾಳ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕರಾದ ಚಂದ್ರಪ್ಪ, ಬಿ.ಪಿ.ಹರೀಶ ಸಭೆಗೆ ಹಾಜರಿದ್ದರು.