Debate over forest rights and the Kasturirangan Report in the Youth Parliament session
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ತಿನಲ್ಲಿ ಅರಣ್ಯ ಹಕ್ಕು ಕಾಯ್ದೆ 2006 ಮತ್ತು ಕಸ್ತೂರಿ ರಂಗನ್ ವರದಿ ಜಟಾಪಟಿ ನಡೆಯಿತು.ಅರಣ್ಯ ಹಕ್ಕು ಕಾಯ್ದೆ 2006ರ ಅಡಿಯಲ್ಲಿ ಬುಡಕಟ್ಟು ಸಮುದಾಯದವರಿಗೆ ಸಾಂಪ್ರದಾಯಿಕ ಆಚರಣೆ ಹಾಗೂ ವಾಸಸ್ಥಳಗಳಿಗೆ ಹಕ್ಕು ಪತ್ರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದರು.
ಸಲ್ಲಿಕೆಯಾಗಿದ್ದ ಸುಮಾರು 2,89,230 ಅರ್ಜಿಗಳ ಪೈಕಿ ಕೇವಲ 15,000 ಅರ್ಜಿಗಳನ್ನು ಮಾತ್ರ ಪುರಸ್ಕರಿಸಲಾಗಿದ್ದು, 2,58,109 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ದೂರಿದರು.ಒಂದು ಕಡೆ ಕಸ್ತೂರಿ ರಂಗನ್ ವರದಿ ಜಾರಿಯಾಗಬೇಕು ಎನ್ನುವ ವಿಪಕ್ಷಗಳು, ಮತ್ತೊಂದೆಡೆ ಅರಣ್ಯವಾಸಿಗಳಿಗೆ ಹಕ್ಕು ಪತ್ರ ನೀಡುವ ವಿಚಾರದಲ್ಲಿ ದ್ವಂದ್ವ ನಿಲುವು ತಾಳುತ್ತಿವೆ ಎಂದು ಆಡಳಿತ ಪಕ್ಷದವರು ತಿರುಗೇಟು ನೀಡಿದ್ದರಿಂದ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ಕಬ್ಬು ಬೆಳೆಗಾರರ ಸಮಸ್ಯೆ:ಸದನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ಸದಸ್ಯರು, ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯ ಶಿಫಾರಸಿನಂತೆ ರೈತರ ಉತ್ಪಾದನಾ ವೆಚ್ಚಕ್ಕಿಂತ ಶೇ. 50ರಷ್ಟು ಹೆಚ್ಚುವರಿ ಬೆಲೆ ನೀಡಬೇಕು. ಆದರೆ ಪ್ರಸ್ತುತ ಪ್ರತಿ ಟನ್ ಕಬ್ಬಿಗೆ ಕೇವಲ 3,000 ದಿಂದ 3,300 ರು. ಮಾತ್ರ ಸಿಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಆಡಳಿತ ಪಕ್ಷದ ಸದಸ್ಯರು, ಕೇಂದ್ರ ಸರ್ಕಾರವು 2025-26ನೇ ಹಂಗಾಮಿಗೆ ಶೇ. 10.25ರಷ್ಟು ಮೂಲ ಇಳುವರಿ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3,550 ರು. ಎಫ್ಆರ್ಪಿ ನಿಗದಿಪಡಿಸಿದೆ ಹಾಗೂ ಕಟಾವು ಮತ್ತು ಸಾಗಣೆ ವೆಚ್ಚ ಸೇರಿದಂತೆ ರೈತರ ಇತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ ಎಂದರು. ಈ ವೇಳೆ ಎಫ್ಆರ್ಪಿ ಕುರಿತ ವಿಚಾರವಾಗಿ ಉಭಯ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು.ಹೊಸ ಫಸಲ್ ಬಿಮಾ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಬೆಳೆ ನಾಶವಾದಾಗ ರೈತರು ಅರ್ಜಿ ಸಲ್ಲಿಸಿದರೂ ಚೆಕಿಂಗ್ ಪ್ರಕ್ರಿಯೆ 3-4 ತಿಂಗಳು ತಡವಾಗುತ್ತಿರುವುದರಿಂದ ಸಕಾಲಕ್ಕೆ ವಿಮೆ ಸಿಗುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು. ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿಯಾದಾಗ ಸರ್ಕಾರ ನೀಡುವ ಪರಿಹಾರವೇ ಬೇರೆ ಮತ್ತು ಬೆಳೆ ವಿಮೆಯೇ ಬೇರೆ ಎಂಬ ಕುರಿತು ಸದನದಲ್ಲಿ ಚರ್ಚೆಯಾಯಿತು. ಜೊತೆಗೆ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂಬ ವಿಷಯವೂ ಪ್ರಸ್ತಾಪವಾಯಿತು.
ಕೆಪಿಎಸ್ ಸಿ 362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ರದ್ದತಿ ಚರ್ಚೆ:2011ರ ಕೆಪಿಎಸ್ಸಿ ನೇಮಕಾತಿ ಪ್ರಾಧಿಕಾರದ ಮೂಲಕ ನೇಮಕವಾಗಿದ್ದ 362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯನ್ನು ಸುಪ್ರೀಂ ರದ್ದುಪಡಿಸಿರುವ ವಿಚಾರ ಸದನದಲ್ಲಿ ಪ್ರತಿಧ್ವನಿಸಿತು. ನೇಮಕಾತಿ ರದ್ದಾಗಿರುವುದರಿಂದ ಆ ಅಧಿಕಾರಿಗಳ ಮುಂದಿನ ಭವಿಷ್ಯ ಹಾಗೂ ಕೆಪಿಎಸ್ಸಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ಸದಸ್ಯರು ಗಂಭೀರವಾಗಿ ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕೇವಲ ಶೇ.17ರಷ್ಟು ಎಂಜಿನಿಯರಿಂಗ್ ಪದವೀಧರರಿಗೆ ಮಾತ್ರ ಉದ್ಯೋಗ ಸಿಕ್ಕಿದ್ದು, ಉಳಿದ ಶೇಕಡಾ 83ರಷ್ಟು ಪದವೀಧರರಿಗೆ ಉದ್ಯೋಗ ಸಿಗಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬ ಪ್ರಶ್ನೆಯನ್ನು ವಿರೋಧ ಪಕ್ಷದ ಸದಸ್ಯರು ಕೇಳಿದರು.ಪದವೀಧರರಿಗೆ ಉದ್ಯೋಗ ಒದಗಿಸಲು ಮತ್ತು ಅವರ ಕೌಶಲ ವೃದ್ಧಿಸಲು ಹಲವು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಆಡಳಿತ ಪಕ್ಷದ ಸದಸ್ಯರು ಉತ್ತರಿಸಿದರು.
ಮುಖ್ಯಮಂತ್ರಿಯಾಗಿ ಅಂಶಕ್, ವಿರೋಧ ಪಕ್ಷದ ನಾಯಕರಾಗಿ ಹಾಲಸ್ವಾಮಿ ಮತ್ತು ಸಭಾಪತಿಯಾಗಿ ದೀಕ್ಷಿತಾ ಸಿ ಅವರು ಯುವ ಸಂಸತ್ ನ ಹುದ್ದೆಗಳನ್ನು ನಿರ್ವಹಿಸಿದರು.------------------ಬಾಕ್ಸ್...ಯುವಶಕ್ತಿಯೇ ದೇಶ ಮುನ್ನಡೆಸುವ ದೊಡ್ಡ ಶಕ್ತಿ: ಅರುಣ್
ಶಿವಮೊಗ್ಗ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಮ್ಮ ಇಂದಿನ ಯುವ ಶಕ್ತಿಯೇ ದೇಶವನ್ನು ಮುನ್ನಡೆಸುವ ದೊಡ್ಡ ಶಕ್ತಿಯಾಗಿದ್ದು, ಸಂಸತ್ತಿನ ಕಾರ್ಯವೈಖರಿ, ಶಾಸನ ರಚನೆ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಗಳ ಬಗ್ಗೆ ಯುವಜನತೆ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಯುವ ಸಂಸತ್ ಎಂಬುದು ಕೇವಲ ಒಂದು ಸ್ಪರ್ಧೆಯಲ್ಲ. ಇದು ನಮ್ಮ ಸಂಸದೀಯ ವ್ಯವಸ್ಥೆ, ಸಂವಿಧಾನದ ಮೌಲ್ಯಗಳು, ಕಾನೂನು ರಚನೆಯ ಪ್ರಕ್ರಿಯೆ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬಗೆಯನ್ನು ಹತ್ತಿರದಿಂದ ಅರಿತುಕೊಳ್ಳುವ ಒಂದು ಅದ್ಭುತ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ,ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಅನಲಾ, ಬಿಇಓ ರಮೇಶ್, ರಾಘವೇಂದ್ರ, ರಾಜೇಶ್ವರಿ, ಅಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.--------------ಬಾಕ್ಸ್..
ರೈತರು, ರ್ಮಿಕರ ಬಗ್ಗೆ ಗಂಭೀರವಾಗಿ ಆಲೋಚಿಸಿ: ಚನ್ನಬಸಪ್ಪಆಡಳಿತ ಮತ್ತು ವಿರೋಧ ಪಕ್ಷಗಳು ದೇಶದ ನಾಗರಿಕರು, ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರ ಬಗ್ಗೆ ಸಮಗ್ರವಾಗಿ ಆಲೋಚಿಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ 1 ರು. ಹೆಚ್ಚಿಸಿ, ಆ ಹಣವನ್ನು ದೇಶದ ಅಭಿವೃದ್ಧಿ ಮತ್ತು ರಸ್ತೆ ಸಂಪರ್ಕಕ್ಕೆ ಬಳಸಿಕೊಂಡರು. ಯುದ್ಧದ ಸಮಯದಲ್ಲಿ ಪಕ್ಷಭೇದ ಮರೆತು ವಿರೋಧ ಪಕ್ಷವು ಆಡಳಿತ ಪಕ್ಷಕ್ಕೆ ಸಹಕಾರ ನೀಡಿತ್ತು. ವಾಜಪೇಯಿ ಅವರು ಇಂದಿರಾ ಗಾಂಧಿಯವರನ್ನು''''''''ದೇಶ ರಕ್ಷಿಸಿದ ದುರ್ಗಿ'''''''' ಎಂದು ಕರೆದಿದ್ದರು. ಪಕ್ಷಕ್ಕಿಂತ ದೇಶ ಮಿಗಿಲು. ಸದನದಲ್ಲಿ ಕೇವಲ ಪ್ರಶ್ನೋತ್ತರಗಳಾಗದೆ, ಸಮಗ್ರ ಅಧ್ಯಯನ ನಡೆಸಬೇಕು. ಜನರ ಹಿತಕ್ಕಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.-----------
ಪೋಟೋ: 13ಎಸ್ಎಂಜಿಕೆಪಿ11ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ತಿನ ದೃಶ್ಯ.