: ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನೂ ಕಲಿಸಬೇಕು. ಹಿರಿಯರ ಬಗ್ಗೆ ಕಾಳಜಿ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಕರೆ ನೀಡಿದರು.

ಮಡಿಕೇರಿ: ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನೂ ಕಲಿಸಬೇಕು. ಹಿರಿಯರ ಬಗ್ಗೆ ಕಾಳಜಿ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಕರೆ ನೀಡಿದರು. ಭಾರತ ಸರ್ಕಾರ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ಶಿಶು ಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ನಡೆದ ಹಿರಿಯ ನಾಗರಿಕರಿಗೆ ಆರೋಗ್ಯ ಮತ್ತು ವೈದ್ಯಕೀಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ನಾಗರಿಕರನ್ನು ಪ್ರೀತಿ ಗೌರವ ಮತ್ತು ತಾಳ್ಮೆಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ದೊಡ್ಡ ಹುದ್ದೆಗಳಿಗೆ ಏರಿಸುವುದಷ್ಟೇ ಪೋಷಕರ ಜವಾಬ್ದಾರಿಯಲ್ಲ. ಅವರಲ್ಲಿ ಮಾನವೀಯ ಮೌಲ್ಯಗಳು, ಸಂಸ್ಕಾರ ಮತ್ತು ಹಿರಿಯರ ಬಗ್ಗೆ ಗೌರವ ಬೆಳೆಸುವುದು ಕೂಡ ಅಷ್ಟೇ ಮುಖ್ಯ ಎಂದು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಯೋಗೇಶ್ ಮಾತನಾಡಿ, ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹಿರಿಯ ನಾಗರಿಕರ ಸಾಲಿಗೆ ಸೇರುತ್ತಾರೆ ಎಂಬ ಸತ್ಯವನ್ನು ಮರೆಯಬಾರದು. ಹಿರಿಯ ನಾಗರಿಕರಿಗೆ ಕಾನೂನಿನಡಿ ನ್ಯಾಯ ದೊರಕಿಸಿಕೊಡುವ ವ್ಯವಸ್ಥೆಗಳಿವೆ. ಹೆತ್ತವರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

‘ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವೃದ್ಧರಿಗೆ ಯಾರಾದರೂ ನೆರವು ನೀಡಿದರೆ ಅದನ್ನು ನೋಡಿ ಭಾವುಕರಾಗುವ ನಾವು, ನಮ್ಮ ಮನೆಯಲ್ಲಿರುವ ತಂದೆ-ತಾಯಿ ಹಾಗೂ ಅಜ್ಜ-ಅಜ್ಜಿಯರನ್ನು ಏಕೆ ಅದೇ ಪ್ರೀತಿಯಿಂದ ನೋಡಿಕೊಳ್ಳುತ್ತಿಲ್ಲ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೊರಗಿನವರ ಬಗ್ಗೆ ತೋರುವ ಕಾಳಜಿ ನಮ್ಮ ಹೆತ್ತವರ ಬಗ್ಗೆಯೂ ಇರಬೇಕು ಎಂದು ತಿಳಿಸಿದರು.’ಕೊಡಗು ಜಿಲ್ಲಾಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗದ ವೈದ್ಯಾಧಿಕಾರಿ ಡಾ.ಸತೀಶ್ ಮಾತನಾಡಿ, ಯುವ ವಯಸ್ಸಿನಲ್ಲಿ ನಾವು ರೂಢಿಸಿಕೊಳ್ಳುವ ಧೂಮಪಾನ, ಮದ್ಯಪಾನ ಸೇರಿದಂತೆ ಹಲವು ಕೆಟ್ಟ ಅಭ್ಯಾಸಗಳು ವೃದ್ಧಾಪ್ಯದಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆದ್ದರಿಂದ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.ಸಾಂತ್ವನ ಕೇಂದ್ರದ ಅಧ್ಯಕ್ಷರು ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಬಿ.ಕೆ.ರವೀಂದ್ರ ರೈ ಮಾತನಾಡಿ, ವೃದ್ಧಾಪ್ಯದಲ್ಲಿ ಹಿರಿಯರಿಗೆ ಹಣಕಾಸಿನ ನೆರವಿಗಿಂತಲೂ ಪ್ರೀತಿ, ಆತ್ಮೀಯತೆ ಮತ್ತು ಮಾನಸಿಕ ಬೆಂಬಲ ಹೆಚ್ಚು ಅಗತ್ಯವಾಗಿರುತ್ತದೆ ಎಂದರು.ಹಿರಿಯ ನಾಗರಿಕ ಸುನಂದ ಪ್ರಾರ್ಥಿಸಿದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಜಿ.ವಿಮಲ ಸ್ವಾಗತಿಸಿದರು, ಮಾಹಿತಿ ಸಲಹೆಗಾರರಾದ ನವೀನ್ ನಿರೂಪಿಸಿ, ವಂದಿಸಿದರು.

ಹಿರಿಯ ನಾಗರಿಕರಿಗೆ ಅಸಾಂಕ್ರಾಮಿಕ ರೋಗಗಳ ತಪಾಸಣೆ, ಸಾಮಾನ್ಯ ವೈದ್ಯ, ಚರ್ಮರೋಗ, ಕಣ್ಣು, ಮಾನಸಿಕ ಆರೋಗ್ಯ, ಕೀಲು ಮತ್ತು ಮೂಳೆ, ಪ್ರಸೂತಿ ಮತ್ತು ಸ್ತ್ರೀ ರೋಗ, ಶ್ವಾಸಕೋಶ ಹಾಗೂ ಇತರೆ ವಿಭಾಗಗಳಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಔಷಧಿ ವಿತರಿಸಲಾಯಿತು.