ಶಾಶ್ವತ ನೆಲೆಗಾಗಿ ದಶಕಗಳಿಂದ ಪರದಾಟ

| Published : Aug 30 2025, 01:02 AM IST

ಶಾಶ್ವತ ನೆಲೆಗಾಗಿ ದಶಕಗಳಿಂದ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣಾತೀರದ ಕುಸನಾಳ, ಮೊಳವಾಡ ಗ್ರಾಮಸ್ಥರು ದಶಕಗಳಿಂದ ಶಾಶ್ವತ ನೆಲೆಗಾಗಿ ಪರದಾಡುತ್ತಿದ್ದಾರೆ. ಆದರೆ, ಈ ಎರಡೂ ಗ್ರಾಮಗಳ ಜನರಿಗೆ ಇಂದಿಗೂ ನೆಲೆ ಸಿಗುತ್ತಿಲ್ಲ.

ಪ್ರಮೋದ ಗಡಕರ

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಲ್ಲಿನ ಕೃಷ್ಣಾತೀರದ ಕುಸನಾಳ, ಮೊಳವಾಡ ಗ್ರಾಮಸ್ಥರು ದಶಕಗಳಿಂದ ಶಾಶ್ವತ ನೆಲೆಗಾಗಿ ಪರದಾಡುತ್ತಿದ್ದಾರೆ. ಆದರೆ, ಈ ಎರಡೂ ಗ್ರಾಮಗಳ ಜನರಿಗೆ ಇಂದಿಗೂ ನೆಲೆ ಸಿಗುತ್ತಿಲ್ಲ. ಎರಡು ಸಲ ಪರ್ಯಾಯ ಜಾಗ ಸಿಕ್ಕಾಗ ಸರ್ಕಾರ ಒಪ್ಪಿರಲಿಲ್ಲ. ಈಗ ಸಿಕ್ಕಿರುವ ಜಾಗವನ್ನು ಸರ್ಕಾರ ಒಪ್ಪಿದ್ದು, ಇನ್ನೇನು ಸ್ಥಳಾಂತರವಾಗಬೇಕು ಎನ್ನುವ ಹೊತ್ತಿಗೆ ಕೋರ್ಟ್ ತಡೆಯಾಜ್ಞೆ ಅಡ್ಡ ಬಂದಿದೆ. ಹೀಗಾಗಿ ಗ್ರಾಮಸ್ಥರ ನೆಮ್ಮದಿ ಸೂರು ಮಳೆಯಲ್ಲೇ ಕೊಚ್ಚಿ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುವ ಭಾರಿ ಮಳೆಗೆ ಕಳೆದ ಎರಡು ದಶಕಗಳಿಂದಲೂ ತೊಂದರೆ ಅನುಭವಿಸುತ್ತಿರುವ ಕಾಗವಾಡ ತಾಲೂಕಿನ ಕುಸನಾಳ ಮತ್ತು ಮೊಳವಾಡ ಗ್ರಾಮಗಳ ಜನರಿಗೆ ಶಾಶ್ವತ ಪರಿಹಾರ ಎನ್ನುವುದು ಗಗನ ಕುಸುಮವಾಗಿದೆ. ಕೃಷ್ಣೆಯ ರೌದ್ರಾವತಾರಕ್ಕೆ ಸಿಲುಕಿ ಪ್ರತಿ ವರ್ಷವೂ ಮಳೆಗಾಲದಲ್ಲಿ ಗ್ರಾಮಗಳನ್ನು ತೊರೆಯುವ ದುಸ್ಥಿತಿ ಎದುರಾಗಿದೆ. ಕೋರ್ಟ್ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ ಎಂದು ನೆರೆ ಸಂತ್ರಸ್ತರು ದೂರಿದ್ದಾರೆ.ಕುಸನಾಳ, ಮೊಳವಾಡ ಗ್ರಾಮಗಳು ಕಳೆದ ಎರಡು ದಶಕಗಳಿಂದಲೂ ನರಕಯಾತನೆ ಅನುಭವಿಸುತ್ತಿದ್ದಾರೆ. ಕುಸನಾಳದ 1250 ಮನೆ, ಮೊಳವಾಡದ 1430 ಮನೆಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ನಡೆಸಿದ ಹಲವು ವರ್ಷಗಳ ಹೋರಾಟದ ಫಲವಾಗಿ 2001ರಲ್ಲಿ ಮುಳುಗಡೆ ಪ್ರದೇಶ ಎಂದು ಘೋಷಿಸಿದರೂ, ಶಾಶ್ವತ ಸ್ಥಳಾಂತರಕ್ಕೆ ನಾನಾ ವಿಘ್ನಗಳು ಎದುರಾದವು. ಹೀಗಾಗಿ ಈ ಗ್ರಾಮಗಳ ಸ್ಥಳಾಂತರವು ನನೆಗುದಿಗೆ ಬಿದ್ದಿದೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹೆಚ್ಚು ನೀರು ಬಿಟ್ಟರೆ ಕೃಷ್ಣಾ ತೀರದ ಕರ್ನಾಟಕದ ಬಹಳಷ್ಟು ಹಳ್ಳಿಗಳು ಮುಳುಗಡೆಯಾಗುತ್ತವೆ. ಇಲ್ಲಿನ ಸಾವಿರಾರು ಕುಟುಂಬಗಳು ಪ್ರವಾಹಕ್ಕೆ ಸಿಲುಕುತ್ತವೆ. ಮನೆಗಳು ನೀರಿನಿಂದ ಸುತ್ತುವರಿಯುತ್ತವೆ. ಅಕ್ಕ ‌ಪಕ್ಕದ ಊರುಗಳಿಗೆ ಸಂಪರ್ಕ ಕಡಿತವಾಗುತ್ತದೆ. ಒಂದು ರೀತಿ ನಡುಗಡ್ಡೆ ಆಗಿ ಬಿಡುತ್ತದೆ. ಇದರಿಂದ ಅಲ್ಲಿನ ಜನರ ಭವಣೆಯಂತೂ ಹೇಳತೀರದು.

2001ರಲ್ಲಿ ಕುಸನಾಳ, ಮೊಳವಾಡ ಗ್ರಾಮಗಳನ್ನು ಮುಳುಗಡೆ ಪ್ರದೇಶ ಎಂದು ಘೋಷಿಸಲಾಗಿದೆ. ಅದಾದ ಬಳಿಕ 2013ರಲ್ಲಿ ಮನೆಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಆದರೆ ಶಾಶ್ವತ ಸ್ಥಳಾಂತರ ಮಾತ್ರ ಈವರೆಗೂ ಆಗಿಲ್ಲ. ಮೂರು ಸಲ ಶಾಶ್ವತ ಸ್ಥಳಾಂತರ ಸಂಬಂಧ ಜಾಗ ಗುರುತಿಸಿ ಗ್ರಾಮ ಪಂಚಾಯಿತಿಯಲ್ಲಿ ಠರಾವು ಕೂಡ ಪಾಸ್ ಮಾಡಲಾಗಿದೆ. 2001ರಲ್ಲಿ ಶೇಡಬಾಳ, 2004ರಲ್ಲಿ ಮಂಗಸೂಳಿಯಲ್ಲಿ ಜಾಗ ಗುರುತಿಸಲಾಗಿತ್ತು. ಆದರೆ ಎರಡೂ ಪ್ರಸ್ತಾವನೆಗಳು ತಿರಸ್ಕೃತಗೊಂಡಿವೆ.

2015- 16ರಲ್ಲಿ ಗಣಪತಿ ಸಂಸ್ಥಾನದ ಜಾಗ ಗುರುತಿಸಿ ಠರಾವು ಪಾಸ್ ಮಾಡಲಾಗಿತ್ತು. ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ಕೊಟ್ಟಿದ್ದು, ಗಣೇಶ ಸಂಸ್ಥಾನಕ್ಕೆ ಸೇರಿದ 83 ಎಕರೆ ಜಾಗಕ್ಕೆ ಈಗಾಗಲೇ ಸರ್ಕಾರ ಹಣ ಸಂದಾಯ ಮಾಡಿದೆ. ಆದರೆ ಈ ಜಾಗ ಉಗಾರ ಸಕ್ಕರೆ ಕಾರ್ಖಾನೆಗೆ ಲೀಸ್‌ನಲ್ಲಿದೆ. ಹೀಗಾಗಿ ಜಾಗ ಸರ್ಕಾರಕ್ಕೆ ಹಸ್ತಾಂತರಿಸಲು ಉಗಾರ ಶುಗರ್ಸ್ ನ್ಯಾಯಾಲಯದಿಂದ ‌ತಡೆಯಾಜ್ಞೆ ತಂದಿದೆ. ಇದರಿಂದಾಗಿ ಶಾಶ್ವತ ಸ್ಥಳಾಂತರದಿಂದ ಈ ಎರಡೂ ಗ್ರಾಮಗಳ ಜನರು ವಂಚಿತರಾಗಿದ್ದಾರೆ.

ಪ್ರಕರಣದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಈ ಬಗ್ಗೆ ಕಾಗವಾಡ ತಹಸೀಲ್ದಾರ್ ಬಳಿ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ ಸಂಪಗಾವಿ ಹೇಳಿದರು. ಪ್ರತಿ ಬಾರಿ ಪ್ರವಾಹ ಬಂದಾಗ ಜನ, ಜಾನುವಾರುಗಳಿಗೆ ತುಂಬಾ ತೊಂದರೆ ಆಗುತ್ತಿದೆ. ತೊಂದರೆ ಇಂದ ಮುಕ್ತ ಆಗಬೇಕು ಆದರೆ ಸರ್ಕಾರ ಈ ಎರಡು ಗ್ರಾಮಗಳಿಗೆ ಆದಷ್ಟು ಬೇಗ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯ ಜಯಪಾಲ ಯರಂಡೋಲೆ ಹೇಳಿದರು