ವಿದ್ಯಾರ್ಥಿ ಜೀವನದಲ್ಲಿಯೇ ನಿಮ್ಮ ಗುರಿಯನ್ನು ನಿರ್ಧರಿಸಿಕೊಳ್ಳಿ

| Published : Nov 05 2025, 01:30 AM IST

ವಿದ್ಯಾರ್ಥಿ ಜೀವನದಲ್ಲಿಯೇ ನಿಮ್ಮ ಗುರಿಯನ್ನು ನಿರ್ಧರಿಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ನಾನು ಈ ಸಂಸ್ಥೆಯ ಹಳೆಯ ವಿದ್ಯಾರ್ಥಿ. ಗ್ರಾಮೀಣ ವಿಭಾಗದಿಂದ ಬಂದು ಸಾಕಷ್ಟು ಶ್ರಮವಹಿಸಿ ಕಷ್ಟಪಟ್ಟು ಓದಿ ಇಷ್ಟದಿಂದ ಪೊಲೀಸ್ ಇಲಾಖೆ ಸೇರಿದ್ದೇನೆಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎಂದು ಬೆಂಗಳೂರಿನ ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ವಿ.ಕೆ.ವಾಸುದೇವ್ ಹೇಳಿದರು.

ಕನಕಪುರ: ನಾನು ಈ ಸಂಸ್ಥೆಯ ಹಳೆಯ ವಿದ್ಯಾರ್ಥಿ. ಗ್ರಾಮೀಣ ವಿಭಾಗದಿಂದ ಬಂದು ಸಾಕಷ್ಟು ಶ್ರಮವಹಿಸಿ ಕಷ್ಟಪಟ್ಟು ಓದಿ ಇಷ್ಟದಿಂದ ಪೊಲೀಸ್ ಇಲಾಖೆ ಸೇರಿದ್ದೇನೆಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎಂದು ಬೆಂಗಳೂರಿನ ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ವಿ.ಕೆ.ವಾಸುದೇವ್ ಹೇಳಿದರು.

ನಗರದ ರೂರಲ್ ಪದವಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನನ್ನ ವಿದ್ಯಾಭ್ಯಾಸ ಕನ್ನಡ ಮಾಧ್ಯಮದಲ್ಲೇ ಆಯಿತು. ಈ ಕಾಲದ ತರಹ ನಮ್ಮ ಕಾಲದಲ್ಲಿ ಯಾವುದೇ ರೀತಿಯ ವಿಶೇಷ ಸೌಲಭ್ಯ ಗಳು ಇಲ್ಲದಿದ್ದರೂ ಸಾಧನೆ ಹಾದಿಯನ್ನು ಹಿಡಿದೆವು. ನೀವೂ ಕೂಡ ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿಯೇ ನಿಮ್ಮ ಗುರಿ ಏನೆಂದು ನೀವು ನಿರ್ಧರಿಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ನಿಮ್ಮ ಓದುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಏನನ್ನೇ ಓದಿದರೂ ಸಾಮಾನ್ಯ ಜ್ಞಾನ ತುಂಬಾ ಮುಖ್ಯ. ಅದಕ್ಕೆ ಪ್ರತಿದಿನ ದಿನಪತ್ರಿಕೆಗಳನ್ನು ಕಡ್ಡಾಯವಾಗಿ ಓದಬೇಕು. ಇದರಿಂದ ಪ್ರಚಲಿತ ವಿದ್ಯಮಾನಗಳು ಹಾಗೂ ನಿಮ್ಮ ಬುದ್ಧಿಶಕ್ತಿ ಹೆಚ್ಚುತ್ತದೆ ನಿಮ್ಮ ಗುರಿಯನ್ನು ಇಂದಿನಿಂದಲೇ ಬೆನ್ನೇರಲು ನಿಮಗೊಂದು ಹಾದಿ ಸಿಕ್ಕಿಬಿಡುತ್ತದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸೈಬರ್ ಕ್ರೈಮ್‌ನಂತಹ ಅಪರಾಧಗಳು ಹೆಚ್ಚುತ್ತಿವೆ. ಯಾವುದೇ ಮುಂಜಾಗೃತಿ ಇಲ್ಲದೆ ಆನ್‌ಲೈನ್ ನಲ್ಲಿ ಗೌಪ್ಯ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ವಿದ್ಯಾವಂತರೇ ಸೈಬರ್‌ ಕ್ರೈಮ್‌ಗಳಿಗೆ ಒಳಗಾಗುತ್ತಿರುವುದು ಖೇದಕರ. ಎಷ್ಟೇ ಪರಿಚಿತರು, ಬಂಧುಗಳು ಯಾರೇ ಆದರೂ ಆನ್‌ಲೈನ್‌ ವ್ಯವಹಾರಗಳು ನಡೆಸುವಾಗ ತುಂಬಾ ಜಾಗ್ರತೆಯಿಂದ ವ್ಯವಹರಿಸಬೇಕು ಎಂದು ಸಲಹೆ ನೀಡಿದರು.

ಆರ್‌ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ. ಆಧುನಿಕ ಜಗತ್ತಿನಲ್ಲಿ ಬದುಕಲು ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಂಡು ಹೊರ ರಾಜ್ಯದಿಂದ ಬಂದವರಿಗಿಂತ ಕನ್ನಡಿಗರು ಎಲ್ಲಾ ಕೆಲಸಗಳನ್ನೂ ಪರಿಣಿತಿಯಿಂದ ಮಾಡುವಂತ ಕಡೆಗೆ ದಾಪುಗಾಲಿಡಬೇಕಿದೆ. ಮಾತೃ ಭಾಷೆಯಾಗಿ ನಿರಂತರವಾಗಿ ಕನ್ನಡವನ್ನು ಪ್ರೀತಿಸಬೇಕು. ನಮ್ಮ ನೆರೆಹೊರೆಯ ಪರಭಾಷಿಕರಿಗೂ ಕನ್ನಡ ಕಲಿಸುವುದು ನಮ್ಮ ಧರ್ಮ. ವೃತ್ತಿ ಪರ ಬದುಕಿಗಾಗಿ ಆಂಗ್ಲ ಭಾಷೆ ಕಲಿಯುವುದು ಇವತ್ತಿನ ಅನಿವಾರ್ಯವಾಗಿದೆ. ಹಾಗೆಂದು ಕನ್ನಡಭಾಷೆಯನ್ನು ಮೆರೆಸಬೇಕೇ ಹೊರತು ಮರೆಯಬಾರದು. ಇಂದಿನ ದಿನಗಳಲ್ಲಿ ಮಕ್ಕಳು ಇಂಗ್ಲಿಷ್‌ ಮಾತನಾಡಿದರೇನೆ ಪೋಷಕರಿಗೆ ಕೋಡು ಬಂದಷ್ಟು ತೃಪ್ತಿ. ಮೊದಲು ಮಾತೃಭಾಷೆ ಕನ್ನಡವನ್ನು ಕಲಿಸೋಣ. ಆನಂತರ ಇದ್ದೇ ಇದೆ ಇಂಗ್ಲಿಷ್‌ ಕಲಿಯುವುದು. ಅಮ್ಮನಿಂದ ಅಮ್ಮನ ಭಾಷೆಯನ್ನು ಕಲಿಸೋಣ ಮತ್ತು ಕಲಿಯೋಣ ಎಂದು ಹೇಳಿದರು.

ಕಾಲೇಜಿನ ಉಪನ್ಯಾಸಕ ವರ್ಗದವರಿಂದ ತಬಲ ಹಾರ್ಮೋನಿಯಂನೊಂದಿಗೆ ನೃತ್ಯ, ಸಂಗೀತ, ಏಕಪಾತ್ರಾಭಿನಯ ಕಲೆಗಳು ಮೂಡಿಬಂದವು. ಇದೇ ವೇಳೆ ಗಣ್ಯರಿಂದ ಎನ್ ಎಸ್ ಎಸ್ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೂರಲ್ ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ, ಉಪ ಪ್ರಾಂಶುಪಾಲ ದೇವರಾಜು, ಪ್ರಕಾಶ್ ಸೇರಿದಂತೆ ಹಿರಿಯ ಉಪನ್ಯಾಸಕರು, ಬೋಧಕೇತರ ವರ್ಗ ಹಾಗು ವಿದ್ಯಾರ್ಥಿಗಳು ಹಾಜರಿದ್ದರು.

(ಫೋಟೋ ಕ್ಯಾಪ್ಞನ್‌)

ಕನಕಪುರದ ರೂರಲ್ ಪದವಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬೆಂಗಳೂರಿನ ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ವಿ.ಕೆ.ವಾಸುದೇವ್, ಆರ್‌ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಇತರರಿದ್ದರು.