ಚುಂಚನಕಟ್ಟೆ ಸಮಗ್ರ ಅಭಿವೃದ್ಧಿಗೆ ನಿರ್ಧಾರ: ಡಾ.ಎಚ್.ಸಿ.ಮಹದೇವಪ್ಪ

| Published : Dec 01 2024, 01:31 AM IST

ಸಾರಾಂಶ

ಜನಪರ ಮತ್ತು ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಸರ್ಕಾರ ಮುಂದೆಯು ಜನತೆಯ ಏಳಿಗೆಗೆ ಉತ್ತಮವಾದ ಚಿಂತನೆ ಮಾಡಿದ್ದು ಎಲ್ಲರೂ ನಮ್ಮ ಜತೆ ಕೈಜೋಡಿಸಬೇಕು. ಅಭಿವೃದ್ದಿ ಕೆಲಸ ಮಾಡುವ ವಿಚಾರದಲ್ಲಿ ಸದಾ ಕ್ರಿಯಾಶೀಲರಾಗಿರುವ ಶಾಸಕ ಡಿ. ರವಿಶಂಕರ್ ಇತರ ಶಾಸಕರಿಗೆ ಮಾದರಿಯಾಗಿದ್ದು, ಅವರಿಗೆ ನಾ‌ನು ಸೇರಿದಂತೆ ನಮ್ಮ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ನಾಡು ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಬ್ದಾರಿ ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ಶನಿವಾರ ರಾತ್ರಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಡೆದ ಕಾವೇರಿ ಜಲಪಾತೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ ಕ್ಷೇತ್ರ ಮತ್ತು ಸ್ಥಳಗಳನ್ನು ಅಭಿವೃದ್ದಿಪಡಿಸಲು ಸರ್ಕಾರ ಕಂಕಣಬದ್ದವಾಗಿದ್ದು, ಆ ದಿಸೆಯಲ್ಲಿ ನಾವು ಕೆಲಸ ಮಾಡಿ, ಶಾಸಕ ಡಿ. ರವಿಶಂಕರ್ ಅವರ ನೇತೃತ್ವದಲ್ಲಿ ಚುಂಚನಕಟ್ಟೆಯನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲು ನಿರ್ಧಾರ ಮಾಡಿದ್ದೇವೆ ಎಂದರು.

ಜನಪರ ಮತ್ತು ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಸರ್ಕಾರ ಮುಂದೆಯು ಜನತೆಯ ಏಳಿಗೆಗೆ ಉತ್ತಮವಾದ ಚಿಂತನೆ ಮಾಡಿದ್ದು ಎಲ್ಲರೂ ನಮ್ಮ ಜತೆ ಕೈಜೋಡಿಸಬೇಕು. ಅಭಿವೃದ್ದಿ ಕೆಲಸ ಮಾಡುವ ವಿಚಾರದಲ್ಲಿ ಸದಾ ಕ್ರಿಯಾಶೀಲರಾಗಿರುವ ಶಾಸಕ ಡಿ. ರವಿಶಂಕರ್ ಇತರ ಶಾಸಕರಿಗೆ ಮಾದರಿಯಾಗಿದ್ದು, ಅವರಿಗೆ ನಾ‌ನು ಸೇರಿದಂತೆ ನಮ್ಮ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದರು.

ಸಕ್ಕರೆ ಕಾರ್ಖಾನೆ ಅರಂಭಿಸಲು ತೀರ್ಮಾನ:

ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿರುವ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಅರಂಭಿಸಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ ಎಂದು ಅವರು ಪ್ರಕಟಿಸಿದರು.

ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಮಾತನಾಡಿ, ಜಲಪಾತೋತ್ಸವ ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜನತೆ ಪರಸ್ಪರ ಸಹೋದರ ಮನೋಭಾವನೆಯಿಂದ ಬದುಕಲು ಸಾಧ್ಯವಾಗಲಿದ್ದು, ನಮ್ಮ ಸರ್ಕಾರ ಅಭಿವೃದ್ಧಿಯ ಜತೆಗೆ ಇಂತಹವುಗಳಿಗೆ ಹೆಚ್ಚು ಸಹಕಾರ ನೀಡುತ್ತದೆ ಎಂದರು.

ಶಾಸಕ ಡಿ. ರವಿಶಂಕರ್ ಮಾತನಾಡಿ, ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕುಗಳ ವ್ಯಾಪ್ತಿಯಲ್ಲಿ ಇರುವ ಧಾರ್ಮಿಕ ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದು, ಜತೆಗೆ ಜನರ ಹಿತ ಕಾಯಲು ಬದ್ದನಾಗಿದ್ದೇನೆ ಎಂದು ತಿಳಿಸಿದರು.

ಚುಂಚನಕಟ್ಟೆ ಶ್ರೀರಾಮ ಸಹಕಾತ ಸಕ್ಕರೆ ಕಾರ್ಖಾನೆ ಜನವರಿ ತಿಂಗಳಿನಿಂದ ಅರಂಭವಾಗಿ ಮುಂದೆ ನಿರಂತರವಾಗಿ ಕಬ್ಬು ಅರೆಯಲಿದ್ದು, ನಾನು ಈ ವಿಚಾರದಲ್ಲಿ ಕಠಿಬದ್ದನಾಗಿ ಕೆಲಸ ಮಾಡಲಿದ್ದು, ಜನತೆ ನನಗೆ ನೀಡಿರುವ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಕ್ಷೇತ್ರದ ಅಭಿವೃದ್ದಿಗೆ ದುಡಿಯುತ್ತೇನೆ ಎಂದರು.

ಶಾಸಕರಾದ ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಎಸ್ಪಿ ಎನ್. ವಿಷ್ಣುವರ್ಧನ್, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಕುಪ್ಪೆ ಗ್ರಾಪಂ ಅಧ್ಯಕ್ಷೆ ಸವಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಗೀತಾ ಕಾಂತರಾಜು, ಹುಣಸೂರು ಉಪ ವಿಭಾಗಾಧಿಕಾರಿ ಎಚ್.ಬಿ. ವಿಜಯಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ತಹಸೀಲ್ದಾರ್ ರಾದ ಜಿ. ಸುರೇಂದ್ರಮೂರ್ತಿ, ಸೋಮನಗೌಡ ಎನ್. ನರಗುಂದ್, ತಾಪಂ ಇಒ ವಿ.ಪಿ. ಕುಲದೀಪ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಕೆಪಿಸಿಸಿ ಸದಸ್ಯ ಸಿ.ಪಿ. ರಮೇಶ್ ಕುಮಾರ್, ಎಪಿಎಂಸಿ ಮಾಜಿ ನಿರ್ದೇಶಕರಾದ ಎಸ್. ಸಿದ್ದೇಗೌಡ, ಎಚ್.ಪಿ. ಪ್ರಶಾಂತ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ನಿರ್ದೇಶಕ ಕೆ.ಎನ್‌. ಪ್ರಸನ್ನಕುಮಾರ್ ಮೊದಲಾದವರು ಇದ್ದರು.