ಶೇ.3ರಷ್ಟು ತೆರಿಗೆ ಹೆಚ್ಚಳಕ್ಕೆ ಪಪಂನಲ್ಲಿ ತೀರ್ಮಾನ

| Published : Mar 20 2025, 01:16 AM IST

ಸಾರಾಂಶ

ಹನೂರು ಪಟ್ಟಣದ ಪಪಂ ಕಾರ್ಯಾಲಯದ ಸಭಾಂಗಣದಲ್ಲಿ 2025-26 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಮ್ತಾಜ್ ಬಾನು ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾಣಿಜ್ಯ ಮಳಿಗೆ, ನಿವೇಶನ ಸೇರಿದಂತೆ ಇನ್ನಿತರ ತೆರಿಗೆಗಳನ್ನು ಶೇ. 3% ರಷ್ಟು ಹೆಚ್ಚಿಸಲು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಮ್ತಾಜ್ ಬಾನು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪಟ್ಟಣದ ಪಪಂ ಕಾರ್ಯಾಲಯದ ಸಭಾಂಗಣದಲ್ಲಿ 2025-26 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಪಪಂ ಅಧ್ಯಕ್ಷೆ ಮುಮ್ತಾಜ್ ಬಾನು ಮಾತನಾಡಿ, ಹನೂರು ಪಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪಟ್ಟಣದ ನಾಗರಿಕರು ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿ ಮಾಡಬೇಕು. ಪಪಂಗೆ ತೆರಿಗೆಯ ಮೂಲಕ ಹೆಚ್ಚಿನ ಆದಾಯ ಬಂದರೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ಈ ಹಿನ್ನೆಲೆ 13 ವಾರ್ಡಿನ ನಾಗರಿಕರು ಪಪಂ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮುಖ್ಯಾಧಿಕಾರಿ ಮಹೇಶ್ ಕುಮಾರ್ ಮಾತನಾಡಿ, ಪಪಂ ಒಳಚರಂಡಿ ಅಭಿವೃದ್ಧಿಗೆ 80 ಕೋಟಿ ರು.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಅನುಮೋದನೆ ದೊರೆಯಬೇಕಿದೆ. ಎಲ್ಲಾ ವಾರ್ಡ್‌ಗಳಿಗೆ ಕುಡಿಯುವ ನೀರು ಮತ್ತು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ₹60 ಕೋಟಿ ವಾರ್ಡ್‌ಗಳ ರಸ್ತೆ ಅಭಿವೃದ್ಧಿಗೆ 100 ಕೋಟಿ, ಸಂಪೂರ್ಣ ಬೀದಿ ದೀಪ ಅಳವಡಿಕೆಗೆ 1 ಕೋಟಿ, ಸಾರ್ವಜನಿಕ ಹಾಗೂ ಸಮುದಾಯ ಆಧಾರಿತ ಶೌಚಾಲಯಗಳಿಗೆ 1 ಕೋಟಿ ರು. ನೂತನ ಪಾರ್ಕ್ ನಿರ್ಮಾಣಕ್ಕೆ 4 ಕೋಟಿ ರು. ಎಲ್ಲಾ ಜನಾಂಗದವರ ಸ್ಮಶಾನ ಸೌಕರ್ಯಕ್ಕೆ 10 ಕೂಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಅನುಮೋದನೆಗೊಂಡು ಅನುದಾನ ಬಿಡುಗಡೆಯಾದರೆ ಹೆಚ್ಚಿನ ಅಭಿವೃದ್ಧಿ ಮಾಡಬಹುದು ಎಂದರು.ಸಭೆಯಲ್ಲಿ ಪಪಂ ವ್ಯಾಪ್ತಿಯ ಗಡಿ ಗುರುತಿಸುವ ಕಾರ್ಯವನ್ನು ಕೈಗೊಂಡು ಆ ಮೂಲಕ ಸಂಪೂರ್ಣ ಅಭಿವೃದ್ಧಿಗೆ ನೀಲಿನಕ್ಷೆ ತಯಾರಿಸುವುದು, ತಾಲೂಕು ಮಟ್ಟದ ಗ್ರಂಥಾಲಯ ನಿರ್ಮಾಣ, ಪಟ್ಟಣದ ಇರುವ ಅಧಿಕೃತ, ಅನಧಿಕೃತ ವಾಣಿಜ್ಯ ಕಟ್ಟಡಗಳ ತೆರಿಗೆ, ಪಪಂ ಒಳಪಡುವ ಮಳಿಗೆಗಳಿಗೆ ಏಪ್ರಿಲ್‌ನಲ್ಲಿ ನೋಟಿಸ್ ನೀಡಿ ಬಾಡಿಗೆ ಕಟ್ಟಲು ಸೂಚನೆ ನೀಡುವುದು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಹನೂರು ಪಪಂ ನಿವೇಶನ, ಮನೆ, ವಾಣಿಜ್ಯ ಕಟ್ಟಡಗಳಿಗೆ ನಿಗದಿಯಾಗಿದ್ದ ಆಸ್ತಿ ತೆರಿಗೆ ದರವನ್ನು ಸರಕಾರದ ಆದೇಶದಂತೆ ಮುಂದಿನ ಸಾಲಿನಿಂದ ಶೇ.3ರಷ್ಟು ಹೆಚ್ಚಳದೊಂದಿಗೆ ಪರಿಷ್ಕರಿಸಿದೆ ಎಂದರು.

ಪಪಂ ಸದಸ್ಯ ಗಿರೀಶ್ ಮಾತನಾಡಿ, ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವಕ್ಕೆ ಸಭೆ ಕರೆದು ಸ್ವಚ್ಛತೆ ಹಾಗೂ ಮುಂಜಾಗ್ರತ ಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು ಇನ್ನು 5 ದಿನ ಇರುವಾಗ ಸಭೆ ನಡೆಸಿದರೆ ಏನು ಪ್ರಯೋಜನ ಪಟ್ಟಣ ಪಂಚಾಯತಿ ವತಿಯಿಂದ ಎಲ್ಲಾ ವಾರ್ಡ್ ಗಳಲ್ಲೂ ಅಗತ್ಯ ಸೌಕರ್ಯ ಕಲ್ಪಿಸಬೇಕು ಹಾಗೂ ದೇವಾಲಯದ ಆವರಣ ಹಾಗೂ ಮುಖ್ಯರಸ್ತೆಗಳಲ್ಲಿ ಶುಚಿತ್ವಕ್ಕೆ ಒತ್ತು ನೀಡುವಂತೆ ತಿಳಿಸಿದರು. ಮುಖ್ಯಾಧಿಕಾರಿ ಮಹೇಶ್ ಕುಮಾರ್ ಜಾತ್ರಾ ಮಹೋತ್ಸವ ಸಂಬಂಧ ಸ್ವಚ್ಛತೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಜಾತ್ರೆಯಲ್ಲಿ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಪಪಂ ಉಪಾಧ್ಯಕ್ಷ ಆನಂದ್ ಕುಮಾರ್, ಸದಸ್ಯರಾದ ಹರೀಶ್, ಸುದೇಶ್, ಸಂಪತ್, ಸೋಮಶೇಖರ್ , ಮಹೇಶ್, ಮಹೇಶ್ ನಾಯ್ಕ್ ಪವಿತ್ರ, ಲತಾ ಮಣಿ , ನಾಮನಿರ್ದೇಶಿತ ಸದಸ್ಯ ಬಸವರಾಜು ಹಾಜರಿದ್ದರು.