ಸಾರಾಂಶ
- ಎಸ್ ಎಸ್ ಎಂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಸ್ಥಾಪನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿದೆಸೆಯಲ್ಲಿ ಪಿಯುಸಿ ನಿರ್ಣಯ ಕೈಗೊಳ್ಳುವ ಒಂದು ಹಂತ. ವಿದ್ಯಾರ್ಥಿಗಳು ಧೃತಿಗೆಡದೇ ಆಸಕ್ತಿ ಹೊಂದಿರುವ ವಿಷಯಗಳನ್ನು ಆರಿಸಿಕೊಂಡು ಮುನ್ನಡೆಯಬೇಕು ಎಂದು ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಡಿ.ಎಲ್. ವಿಜಯ್‌ಕುಮಾರ್ ಹೇಳಿದರು.ನಗರದ ಮಲೆನಾಡು ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಗುರುವಾರ ಎಸ್ ಎಸ್ ಎಂ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘ ಸ್ಥಾಪನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪಿಯುಸಿ ಹಂತದಲ್ಲಿ ಅನೇಕ ದಾರಿಗಳು ಕಾಣಸಿಗಲಿವೆ. ಪಾಲಕರ ಅಥವಾ ಸ್ನೇಹಿತರ ಬಲವಂತಕ್ಕೆ ಒಳಗಾಗದೇ ಇಚ್ಛಾಶಕ್ತಿ ಹೊಂದಿರುವ ಹಾಗೂ ಸಮಗ್ರವಾಗಿ ಅಧ್ಯಯನ ನಡೆಸುವ ವಿಷಯ ತೆಗೆದುಕೊಂಡರೆ ಮಾತ್ರ ಭವಿಷ್ಯದಲ್ಲಿ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದು ಸಲಹೆ ಮಾಡಿದರು.
ಮಕ್ಕಳಿಗೆ ಜೀವನದ ಗುರಿ ಹಾಗೂ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಘಟಕ ಸ್ಥಾಪಿಸಿದೆ. ಬಾಲ್ಯದಿಂದ ನಾಯಕತ್ವ ಗುಣ ಬೆಳೆಸಿಕೊಂಡು ಮುನ್ನಡೆಯಬೇಕು. ಆ ಸಾಲಿನಲ್ಲಿ ಎಂಇಎಸ್ ಶಾಲೆ ಅತ್ಯಂತ ಶಿಸ್ತು ಹಾಗೂ ಪರಿಣಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಒದಗಿಸಿ ಮಕ್ಕಳನ್ನು ಸಮಾಜಕ್ಕೆ ಮಾದರಿಯಾಗಿಸುತ್ತಿದೆ ಎಂದರು.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಂ.ಬಿ. ಜಯಶ್ರೀ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿದ ಅನೇಕ ಮಕ್ಕಳು ಉನ್ನತ ಸ್ಥಾನಮಾನ ಗಳಿಸಿದ್ದಾರೆ. ಇತ್ತೀಚಿನ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಪ್ರಣಯ್ ಜೈನ್ ರಾಜ್ಯಕ್ಕೆ 4ನೇ ಹಾಗೂ ರಮ್ಯ ತಾಲೂಕಿಗೆ ಮೊದಲ ರ್‍ಯಾಂಕ್ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂಇಎಸ್ ಅಧ್ಯಕ್ಷ ಕೇಶವಮೂರ್ತಿ, ಅನುಭವಿ ಶಿಕ್ಷಕರು, ಗುಣಮಟ್ಟದ ಶಿಕ್ಷಣದಿಂದ ವಿದ್ಯಾಸಂಸ್ಥೆ ಜಿಲ್ಲೆಯಾದ್ಯಂತ ಮನ್ನಣೆ ಗಳಿಸಿದೆ. ಶಾಲೆಯಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ಶಿಕ್ಷಣ ಒದಗಿಸಿ ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ 52 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆ ಉಪಾಧ್ಯಕ್ಷೆ ರಾಧಾ ಸುಂದ್ರೇಶ್, ನಿರ್ದೇಶಕಿ ಜಯಶ್ರೀ ಜೋಷಿ, ಕಚೇರಿ ವ್ಯವಸ್ಥಾಪಕಿ ಶ್ರೀ ಲಕ್ಷ್ಮೀ, ಕೆ.ಎನ್. ಮಂಜುನಾಥ್ , ಭವ್ಯ , ಎಚ್.ಕೆ. ಸುಭಾಷ್ , ಸಹನಾಜ್ ಬಾನು ಉಪಸ್ಥಿತರಿದ್ದರು25 ಕೆಸಿಕೆಎಂ 4ಚಿಕ್ಕಮಗಳೂರಿನ ಮಲೆನಾಡು ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಗುರುವಾರ ನಡೆದ ಎಸ್.ಎಸ್.ಎಂ. ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘ ಸ್ಥಾಪನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಡಾ. ವಿಜಯಕುಮಾರ್ ಅವರು ಉದ್ಘಾಟಿಸಿದರು. ಕೇಶವಮೂರ್ತಿ, ಎಂ.ಬಿ.ಜಯಶ್ರೀ ಇದ್ದರು.