ಇಂಡಿಯಾ ಬೆಂಬಲಿಸಲು ವಿವಿಧ ದಲಿತ ಸಂಘಟನೆಗಳ ನಿರ್ಧಾರ

| Published : Apr 04 2024, 01:05 AM IST

ಸಾರಾಂಶ

ಚನ್ನಪಟ್ಟಣ: ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು, ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವನ್ನು ಬೆಂಬಲಿಸಲಾಗುವುದು ಎಂದು ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಘೋಷಿದರು.

ಚನ್ನಪಟ್ಟಣ: ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು, ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವನ್ನು ಬೆಂಬಲಿಸಲಾಗುವುದು ಎಂದು ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಘೋಷಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡ ಡಾ.ರವಿಕುಮಾರ್ ಕೂಡ್ಲೂರು ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನದ ಆಶಯಕ್ಕೆ ಎಳ್ಳುನೀರು ಬಿಡಲಾಗಿದೆ. ಎಲ್ಲ ವಿಚಾರವನ್ನು ತಮ್ಮ ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ಎಲ್ಲವನ್ನು ಕೇಸರೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ ಮೋದಿ ಇದೀಗ ಉದ್ಯೋಗ ಸೃಷ್ಟಿಸದೇ ಪಕೋಡ ಮಾರಿ ಎನ್ನುತ್ತಿದ್ದಾರೆ. ಬಿಜೆಪಿ ಬೆಂಬಲಿಸುವ ಅಧಿಕಾರಿಗಳಿಗೆ ಉನ್ನತ ಹುದ್ದೆ ನೀಡಿ, ಇತರರನ್ನು ಕಡೆಗಣಿಸುತ್ತಿದ್ದಾರೆ. ಕಪ್ಪು ಹಣದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಇವರು ಕಪ್ಪು ಹಣವನ್ನು ದೇಶಕ್ಕೆ ತರಲೇ ಇಲ್ಲ. ನೋಟು ಅಮಾನ್ಯೀಕರಣದಿಂದ ಜನ ಕಷ್ಟ ಅನುಭವಿಸುವಂತೆ ಆಯಿತೇ ಹೊರತು ಯಾವುದೇ ಲಾಭವಾಗಲಿಲ್ಲ. ಮಣಿಪುರದಂತಹ ಘಟನೆಗಳು ಜರುಗುತ್ತಿದ್ದರೂ ಸುಮ್ಮನೇ ನೋಡುತ್ತಾ ಕುಳಿತಿದ್ದಾರೆ. ಇವರ ಅವಧಿಯಲ್ಲಿ ದೇಶ ಹಿಂದಕ್ಕೆ ಹೋಗಿದ್ದು, ಎಲ್ಲ ವಿಚಾರದಲ್ಲೂ ಮೋದಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಖಂಡ ಪಟ್ಲು ಗೋವಿಂದರಾಜು ಮಾತನಾಡಿ, ಬಿಜೆಪಿ ಅವಧಿಯಲಿ ಶೂದ್ರರೂ, ಅಸ್ಪಶ್ಯರನ್ನು ಮೂಲಗುಂಪು ಮಾಡುವ ಷಡ್ಯಂತ್ರ ನಡೆಸಲಾಗಿದೆ. ಇವರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ 760 ಹಿಂದುಳಿದ ಎನ್‌ಜಿಒಗಳನ್ನು ರದ್ದು ಮಾಡಿದ್ದು, ಬಿಜೆಪಿಗೆ ಸಂಬಂಧಿಸಿದ ಎನ್‌ಜಿಒಗಳನ್ನು ಉಳಿಸಿಕೊಂಡಿದ್ದಾರೆ. ಇವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರಿಗೆ ಧರ್ಮದ ಅಫೀಮು ತಿನ್ನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇವರು ಅಧಿಕಾರಕ್ಕೆ ಬಂದ ನಂತರ ಹಿಂದುಳಿದವರು, ಅಲ್ಪಸಂಖ್ಯಾತರ ವಿದ್ಯೆ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಕೆಲ ನಾಯಕರು ಸಂವಿಧಾನವನ್ನು ಬದಲಾಯಿಸುವ, ತಿದ್ದುವ, ತಿರುಚುವ ಕುರಿತು ಮಾತನಾಡುತ್ತಿದ್ದಾರೆ. ಸಂವಿಧಾನ ತಿದ್ದುವ ಉದ್ದೇಶ ಹೊಂದಿರುವ ಸರ್ವಾಧಿಕಾರಿ ಧೋರಣೆಯ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಟವನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದರು.

ಮುಖಂಡ ಮತ್ತೀಕೆರೆ ಹನುಮಂತಯ್ಯ ಮಾತನಾಡಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಡಿ.ಕೆ.ಸುರೇಶ್ ಅವರನ್ನು ಬೆಂಬಲಿಸಲಾಗುವುದು. ಚನ್ನಪಟ್ಟಣದ ದಲಿತ ಮುಖಂಡರು, ಪ್ರಗತಿಪರರು, ಚಿಂತಕರು ಸೇರಿ ಕಾಂಗ್ರೆಸ್ ಅನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದರು.

ಸಂಸದ ಡಿ.ಕೆ.ಸುರೇಶ್ ರಾಜ್ಯದ ಹಿತಕ್ಕಾಗಿ ಮತ್ತು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಅವರು ನಮ್ಮ ಮನೆಗಾಗಿಯೋ ಸ್ವಾರ್ಥಕ್ಕಾಗಿಯೋ ಧ್ವನಿ ಎತ್ತಲಿಲ್ಲ. ನಾಡಿಗಾಗಿ ಧ್ವನಿ ಎತ್ತಿದ್ದಾರೆ. ರಾಜ್ಯ ಹಾಗೂ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ದಲಿತಪರ ಸಂಘಟನೆಗಳು ಬೆಂಬಲಿಸಲಿವೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಬಿಜೆಪಿಗೆ ಮತ ಹಾಕುತ್ತಿದ್ದೀರಿ. ಮುಂದೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಿ ಎನ್ನುತ್ತಿದ್ದರು. ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದರು. ಆದರೆ ಇಂದು ತಮ್ಮ ಅಧಿಕಾರ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ದಲಿತಪರ ಸಂಘಟನೆಗಳ ಮುಖಂಡರಾದ ಡಾ.ರವಿ ಅಪ್ಪಗೆರೆ, ಬಿವಿಎಸ್ ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವುದಾಗಿ ತಿಳಿಸಿದರು.

ದಲಿತಪರ ಸಂಘಟನೆಗಳ ಮುಖಂಡರಾದ ಅಪ್ಪಗೆರೆ ಶ್ರೀನಿವಾಸಮೂರ್ತಿ, ನೀಲಸಂದ್ರ ಸಿದ್ದರಾಮು, ಚಕ್ಕೆರೆ ಲೋಕೇಶ್, ಅರುಣ್ ರಾಂಪುರ, ಶಿವರಾಂ, ಕೃಷ್ಣಪ್ಪ, ಡಾ. ಕುಮಾರ್ ಬಾಣಂತಹಳ್ಳಿ ಇತರರಿದ್ದರು.

ಪೊಟೋ೩ಸಿಪಿಟಿ೨: ಚನ್ನಪಟ್ಟಣದಲ್ಲಿ ದಲಿತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.