ಆಶ್ರಯ ಮನೆ ವಿತರಣೆಗೆ ನಿರ್ಣಯ

| Published : Sep 17 2025, 01:05 AM IST

ಸಾರಾಂಶ

ಕೊಪ್ಪ, ಹಲವು ದಶಕದಿಂದ ನೆನೆಗುದಿಗೆ ಬಿದ್ದಿದ್ದ ಕೊಪ್ಪ ಪಟ್ಟಣ ಪಂಚಾಯಿತಿ ಆಶ್ರಯ ಮನೆ ನಿವೇಶನ ಹಂಚಿಕೆ ಸಮಸ್ಯೆಗೆ ಅಂತಿಮ ರೂಪ ನೀಡಲು ಶಾಸಕ ಟಿ.ಡಿ.ರಾಜೇಗೌಡ ಮುಂದಾಗಿದ್ದು, ಶೀಘ್ರ ನಿವೇಶನ ವಿತರಿಸುವಂತೆ ಸೂಚಿಸಿದರು.

- ಕೊಪ್ಪ ಪಟ್ಟಣ ಪಂಚಾಯ್ತಿ ಸಾಮನ್ಯ ಸಭೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಹಲವು ದಶಕದಿಂದ ನೆನೆಗುದಿಗೆ ಬಿದ್ದಿದ್ದ ಕೊಪ್ಪ ಪಟ್ಟಣ ಪಂಚಾಯಿತಿ ಆಶ್ರಯ ಮನೆ ನಿವೇಶನ ಹಂಚಿಕೆ ಸಮಸ್ಯೆಗೆ ಅಂತಿಮ ರೂಪ ನೀಡಲು ಶಾಸಕ ಟಿ.ಡಿ.ರಾಜೇಗೌಡ ಮುಂದಾಗಿದ್ದು, ಶೀಘ್ರ ನಿವೇಶನ ವಿತರಿಸುವಂತೆ ಸೂಚಿಸಿದರು. ಪ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ೬ ಪೌರ ಕಾರ್ಮಿಕರಿಗೆ, ೫ ಪ.ಜಾತಿ, ೨ ಪ.ಪಂಗಡ, ೩ ಮಂದಿ ವಿಶೇಷಚೇತನರಿಗೆ ಆಶ್ರಯ ನಿವೇಶನ ಮಂಜೂರಾತಿ ಪತ್ರ ಪ್ರದಾನ ಮಾಡಿದರು. ೧೨ ವಿಧವೆಯರು, ೫೯ ಸಾಮಾನ್ಯ ವರ್ಗದ ಫಲಾನುಭವಿಗಳ ಬಗ್ಗೆ ಮುಂದಿನ ೧೫ ದಿನದೊಳಗೆ ಪರಿಶೀಲಿಸಿ ನಿವೇಶನ ನೀಡುವ ಬಗ್ಗೆ ಅಂತಿಮ ಆಯ್ಕೆ ಮಾಡಲು ತಿಳಿಸಿದರು.ಪಟ್ಟಣಕ್ಕೆ ಅಮೃತ-೨ ಕುಡಿಯುವ ನೀರಿನ ಯೋಜನೆ ಯಲ್ಲಿ ₹೩೭ ಕೋಟಿ ಮಂಜೂರಾಗಿದೆ. ಟೆಂಡರ್ ಆಗಿದ್ದು, ಕರ್ನಾಟಕ ನಗರ ನೀರು ಸರಬರಾಜು ಬೋರ್ಡ್ದ ನಿಂದ ಅನುಷ್ಠಾನಗೊಳಿಸಬೇಕಿದೆ. ಸದಸ್ಯರು ಕಾಮಗಾರಿ ಗುಣಮಟ್ಟ ಪರಿಶೀಲಿಸಬೇಕು. ಕಳೆದ ೪ ವರ್ಷದಿಂದ ಕ್ಷೇತ್ರಾದ್ಯಂತ ಕಾಡಾನೆ ಹಾವಳಿ ಹೆಚ್ಚಿದ್ದು, ಈಗಾಗಲೆ ೮ ಆನೆಗಳಲ್ಲಿ ೩ನ್ನು ಸೆರೆ ಹಿಡಿಯಲಾಗಿದೆ. ಅವುಗಳ ಹಾವಳಿ ತಡೆಯಲು ಕ್ರಮ ವಹಿಸುವಂತೆ ಮುಖ್ಯ ಮಂತ್ರಿ, ಅರಣ್ಯ ಸಚಿವರು ಮತ್ತು ಅರಣ್ಯ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಮೃತಪಟ್ಟ ಬಗ್ಗೆ ಈಗಾಗಲೇ ತನಿಖಾ ವರದಿ ಬಂದಿದೆ. ವಿರೋಧ ಪಕ್ಷದವರು ಕೇಂದ್ರ ಸರ್ಕಾರಕ್ಕೆ ಮನವಿ ನೀಡಿ ತನಿಖೆ ಆಯೋಜಿಸಲಿ, ಎ,ಐ,ಟಿ ತನಿಖೆ ಬೇಕಿದ್ದಲ್ಲಿ ಮನವಿ ನೀಡಲಿ ಎಂದರು. ಪ.ಪಂ. ಅಧ್ಯಕ್ಷೆ ರೇಖಾ ಪ್ರಕಾಶ್ ಮತ್ತು ಸದಸ್ಯರು, ತಹಸೀಲ್ದಾರ್ ಲಿಖಿತಾ ಮೋಹನ್, ಮುಖ್ಯಾಧಿಕಾರಿ ಕುರಿಯಕೋಸ್, ಆಶ್ರಯ ಸಮಿತಿ ಸದಸ್ಯರಾದ ಭಾರತಿ ಶಂಕರ್, ತುಳಸಮ್ಮ ಕೆ.ಎಸ್. ಸತೀಶ್ ಭಂಡಾರಿ, ಜಹುರ್ ಹುಸೇನ್ ಮತ್ತಿತರರು ಇದ್ದರು.