ಕನ್ನಡಪ್ರಭ ವಾರ್ತೆ ಗೋಕಾಕ ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿ ಒಕ್ಕೂಟದ ಬೆಳವಣಿಗೆಗೆ ಹೈನುಗಾರ ರೈತರು ಕೈ ಜೋಡಿಸುವಂತೆ ಬೆಮುಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ರೈತರಲ್ಲಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿ ಒಕ್ಕೂಟದ ಬೆಳವಣಿಗೆಗೆ ಹೈನುಗಾರ ರೈತರು ಕೈ ಜೋಡಿಸುವಂತೆ ಬೆಮುಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ರೈತರಲ್ಲಿ ಮನವಿ ಮಾಡಿದರು.ಇಲ್ಲಿನ ಎನ್‌ಎಸ್‌ಎಫ್ ಕಚೇರಿಯಲ್ಲಿ ಗುರುವಾರ ರೈತ ಕುಟುಂಬಗಳಿಗೆ ₹ 5.70 ಲಕ್ಷ ಮೊತ್ತದ ಚೆಕ್ ವಿತರಿಸಿ ಮಾತನಾಡಿದ ಅವರು, ಗ್ರಾಹಕರಿಂದ ನಂದಿನಿ ಹಾಲು ಮತ್ತು ಇತರೆ ಸಿಹಿ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಪ್ರತಿ ನಿತ್ಯ ಒಕ್ಕೂಟಕ್ಕೆ 2.15 ಲಕ್ಷ ಲೀಟರ್ ಆಕಳು ಹಾಲು ಮತ್ತು 50 ಸಾವಿರ ಲೀಟರ್‌ ಎಮ್ಮೆ ಹಾಲು ಸಂಗ್ರಹವಾಗುತ್ತಿದೆ. ಪ್ರ.ಲೀ ಆಕಳು ಹಾಲಿಗೆ ₹ 33 ಮತ್ತು ಎಮ್ಮೆ ಹಾಲಿಗೆ ₹ 42 ದರ ನೀಡುತ್ತಿದ್ದೇವೆ. ಇದರಲ್ಲಿ ಎಮ್ಮೆ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಪ್ರಸ್ತಾಪ ಮಾಡಿವೆ. ಪ್ರತಿ ಲೀ. ಹಾಲಿಗೆ ₹ 5 ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ. ಇದರ ಬಗ್ಗೆ ನಾಳೆ ಶುಕ್ರವಾರ ನಡೆಯುವ ಜಿಲ್ಲಾ ಹಾಲು ಒಕ್ಕೂಟದ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಣಯ ಕೈಕೊಳ್ಳುವುದಾಗಿ ತಿಳಿಸಿದರು.ಚೆಕ್ ವಿತರಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಇಬ್ಬರು ಫಲಾನುಭವಿಗಳಿಗೆ ತಲಾ ₹ 50 ಸಾವಿರದಂತೆ ರೈತ ಕಲ್ಯಾಣ ಸಂಘದಿಂದ ₹50 ಸಾವಿರ ಸೇವಾ ನಿವೃತ್ತರಾದ ಮೂಡಲಗಿ ತಾಲೂಕಿನ ಮುನ್ಯಾಳ ಸಂಘದ ಕಾರ್ಯದರ್ಶಿಗೆ ಮತ್ತು 21 ಫಲಾನುಭವಿಗಳಿಗೆ ತಲಾ ₹ 20 ಸಾವಿರದಂತೆ ₹ 4.20 ಲಕ್ಷ ಮರಣ ಹೊಂದಿರುವ ರೈತ ಕುಟುಂಬಗಳ ವಾರಸುದಾರರಿಗೆ ರೈತ ಕಲ್ಯಾಣ ಸಂಘದಿಂದ ವಿತರಿಸಲಾಯಿತು. ಒಟ್ಟು ₹ 5.70 ಲಕ್ಷ ಮೊತ್ತದ ಚೆಕ್‌ಗಳನ್ನು ಬಾಲಚಂದ್ರ ಜಾರಕಿಹೊಳಿ ವಿತರಿಸಿದರು.

ಈ ಸಂದರ್ಭದಲ್ಲಿ ಬೆಮುಲ್ ನಿರ್ದೇಶಕ ಮಲ್ಲಪ್ಪ ಪಾಟೀಲ, ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಡಾ.ವೀರಣ್ಣ ಕೌಜಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು