ಸೋಮರಡ್ಡಿ ಅಳವಂಡಿ

ಕೊಪ್ಪಳ: ರಾಜ್ಯದ ನಾಲ್ಕು ಜಲ್ಲೆಗಳ ಸುಮಾರು 8.5 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಸೇರಿದಂತೆ ಹಲವು ಬೆಳೆ ಬೆಳೆಯಲು ಮುಂಗಾರು ಹಂಗಾಮಿಗೆ ನೀರು ಬಿಡುವ ಕುರಿತು ತುಂಗಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಆ. 11ರಂದು ನಿರ್ಧಾರ ಮಾಡಲಿದ್ದಾರೆ.

ನೂತನ ಕ್ರಸ್ಟ್‌ಗೇಟ್ ಅಳವಡಿಸಿದ ಮೇಲೆ ಇದೇ ಮೊದಲ ಬಾರಿಗೆ ತುಂಗಭದ್ರಾ ಜಲಾಶಯದಲ್ಲಿ ಕಾಲುವೆಗೆ ನೀರು ಹರಿಸುತ್ತಿರುವುದು ವಿಶೇಷವಾಗಿದೆ. ಈಗಾಗಲೇ ಕುಡಿಯುವ ನೀರಿಗಾಗಿ ಅಲ್ಪಪ್ರಮಾಣದ ನೀರು ಹರಿಸಲಾಗಿದ್ದು, ಈಗ ಕೃಷಿಗೆ ನೀರು ಹರಿಸುವ ಕುರಿತು ನಿರ್ಧಾರ ಮಾಡಬೇಕಾಗಿದೆ.

ಸಾಮಾನ್ಯವಾಗಿ ಜುಲೈ ತಿಂಗಳಲ್ಲಿಯೇ ಮುಂಗಾರು ಹಂಗಾಮು ಬೆಳೆಗೆ ನೀರು ಹರಿಸುವುದು ವಾಡಿಕೆ. ಆದರೆ, ಈ ವರ್ಷ ಬರ ಇದ್ದಿದ್ದರಿಂದ ತುಂಗಭದ್ರಾ ಜಲಾಶಯಕ್ಕ ಜುಲೈ ಅಂತ್ಯದ ವರೆಗೂ ನೀರು ಬಂದಿದ್ದೇ ಕಡಿಮೆ. ಹೀಗಾಗಿ ನೀರು ಬಿಡುವುದು ತಡವಾಗಿದೆ.

ಈ ಹಿಂದೆ 2016ರಲ್ಲಿ ಮುಂಗಾರು ಹಂಗಾಮು ಬೆಳೆಗೆ ಸೆ. 1ರಂದು ನೀರು ಬಿಟ್ಟಿರುವ ಉದಾಹರಣೆ ಇದ್ದು, ಆಗಸ್ಟ್ ತಿಂಗಳಲ್ಲಿ ಅನೇಕ ಬಾರಿ ನೀರು ಬಿಡುಗಡೆ ಮಾಡಿರುವ ತೀರ್ಮಾನ ಮಾಡಲಾಗಿದೆ.


79 ಟಿಎಂಸಿ: ಜಲಾಶಯದಲ್ಲಿ ಈಗ 1625 ಅಡಿಯಷ್ಟು ನೀರು ಇದ್ದು, 79 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಗೆ 80 ಟಿಎಂಸಿ ನೀರು ಸಂಗ್ರಹವಿತ್ತು. ಆದರೆ, ಜುಲೈ ತಿಂಗಳಲ್ಲಯೇ ನೀರು ಹರಿಸಿದ್ದರಿಂದ ಈ ವೇಳೆಗಾಗಲೇ 25 ಟಿಎಂಸಿ ನೀರು ಬಳಕೆಯಾಗಿತ್ತು. ಹೀಗಾಗಿ ಈಗ ಇರುವ ನೀರಿನಿಂದಲೇ ಮುಂಗಾರು ಬೆಳೆ ಬರಲು ಸಾಧ್ಯವಿಲ್ಲ. ಹೆಚ್ಚಿನ ನೀರು ಬರುವ ನಿರೀಕ್ಷೆಯ ಆಧಾರದಲ್ಲಿ ನೀರು ಬಿಡುವ ನಿರ್ಧಾರ ಕೈಗೊಳ್ಳಬೇಕಾಗಿದೆ.

ಈ ಕುರಿತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರು, ಹಾಲಿ ಮತ್ತು ಮಾಜಿ ಶಾಸಕರ ಅಭಿಪ್ರಾಯ ಪಡೆದು, ಅಧಿಕಾರಿಗಳ ವಿಶ್ಲೇಷಣೆಯನ್ನು ಆಧರಿಸಿ ನೀರು ಬಿಡುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಎಷ್ಟು ಬೇಕು ನೀರು?: ಮುಂಗಾರು ಹಂಗಾಮು ಬೆಳೆಗೆ ಆಂಧ್ರ, ತೆಲಂಗಾಣ ಮತ್ತು ರಾಜ್ಯ ವ್ಯಾಪ್ತಿ ಸೇರಿ 115 ಟಿಎಂಸಿ ನೀರು ಬೇಕಾಗುತ್ತದೆ. ಆದರೆ, ಈಗ ಅಷ್ಟೊಂದು ನೀರು ಲಭ್ಯವಿಲ್ಲ. ಆಂಧ್ರ ಮುಂಗಾರು ಹಂಗಾಮು ಮಳೆಯ ಅವಧಿ ಇನ್ನೂ ಇರುವುದರಿಂದ ನೀರು ಬರುವ ನಿರೀಕ್ಷೆಯ ಆಧಾರದಲ್ಲಿ ನಿರ್ಧಾರ ಮಾಡಬೇಕಾಗಿದೆ. ಆದರೆ, ಎಲ್‌ ನಿನೋ ಪ್ರಭಾವ ಇರುವುದರಿಂದ ಬರದ ತೀವ್ರತೆ ಅತಿಯಾಗಿರುತ್ತದೆ. ಹೀಗಾಗಿ ಹೆಚ್ಚಿನ ಮಳೆಯ ನಿರೀಕ್ಷೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.

ಕಡಿಮೆ ಅವಧಿ: ನೀರು ಬಿಡುವ ನಿರ್ಧಾರದ ಜತೆಗೆ ಕಡಿಮೆ ಅವಧಿಯ ಬೆಳೆ ಬೆಳೆಯುವ ಷರತ್ತಿನೊಂದಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಭತ್ತದ ಬದಲಾಗಿ ಕಡಿಮೆ ನೀರು ಮತ್ತು ಕಡಿಮೆ ಅವಧಿಯ ಬೆಳೆ ಬೆಳೆಯುವಂತೆ ಷರತ್ತು ವಿಧಿಸಿ, ನೀರು ಬಿಡುವ ಸಾಧ್ಯತೆ ಇದೆ ಎನ್ನುವುದು ಸದ್ಯಕ್ಯೆ ಇರುವ ಮಾಹಿತಿ. ಈ ಕುರಿತು ರೈತರ ಸಲಹೆ ಮತ್ತು ಅಧಿಕಾರಿಗಳ ವಿಶ್ಲೇಷಣೆಯನ್ನು ಆಧರಿಸಿ ಸಭೆ ನಿರ್ಧಾರ ತೆಗೆದುಕೊಳ್ಳಲಿದೆ.

ಸೂಕ್ತ ನಿರ್ಧಾರ: ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರು, ಹಾಲಿ, ಮಾಜಿ ಶಾಸಕರು ಹಾಗೂ ಅಧಿಕಾರಿಗಳು ನೀಡುವ ಹಿಂದಿನ ದಾಖಲೆಯ ವಿವರಣೆ ಹಾಗೂ ಹವಮಾನ ಇಲಾಖೆಯ ಮಳೆ ಮಾಹಿತಿಯನ್ನು ಆಧರಿಸಿ, ರೈತರ ಹಿತ ಕಾಯುವ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಕಡಿಮೆ ಇದ್ದಾಗಲೇ ನೀರು ಬಿಡಲಾಗಿದೆ: ತುಂಗಭದ್ರಾ ಜಲಾಶಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಇದಕ್ಕಿಂತಲೂ ಕಡಿಮೆ ನೀರು ಸಂಗ್ರಹ ಇದ್ದಾಗಲೇ ಜೂನ್ ತಿಂಗಳಲ್ಲಿ ನೀರು ಬಿಟ್ಟು ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಗ ರೈತರು ಎರಡು ಬೆಳೆಯನ್ನು ಭರ್ಜರಿಯಾಗಿ ಬೆಳೆದುಕೊಂಡರು ಎಂದು ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ ಹೇಳಿದರು.