ಸಾರಾಂಶ
ಹರಪನಹಳ್ಳಿ: ರೋಗಿಗಳ ಜತೆ ಬರುವವರಿಗೆ ಹಾಗೂ ನೋಡಲು ಬರುವವರಿಗೆ ಪಾಸ್ ನೀಡಿ ಸಮಯ ನಿಗದಿಗೊಳಿಸಲು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರಕ್ಷಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಈಚೆಗೆ ಸಾರ್ವಜನಿಕ ಆಸ್ಪತ್ರೆಗೆ ಹೊರ ರೋಗಿಗಳು ಹಾಗೂ ಒಳರೋಗಿಗಳ ಸಂಖ್ಯೆ ಹೆಚ್ಚಾಗುತ್ತಲಿದ್ದು, ಎಲ್ಲೆಂದರಲ್ಲಿ ನುಗ್ಗುತ್ತಿದ್ದಾರೆ. ಇದರಿಂದ ವೈದ್ಯರಿಗೆ, ರೋಗಿಗಳಿಗೆ ತೊಂದರೆ ಉಂಟಾಗುತ್ತದೆ ಎಂದು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ತಿಳಿಸಿದಾಗ, ಅಧ್ಯಕ್ಷತೆ ವಹಿಸಿದ್ದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸಮಯ ನಿಗದಿಗೊಳಿಸಲು ಸೂಚಿಸಿದರು. ಈ ವೇಳೆ ಸಭೆ ಒಪ್ಪಿಗೆ ಸೂಚಿಸಿತು. ಒಳಗೆ ಬಿಡಲು ಹೊರಗೆ ಕಳಿಸಲು, ಗೌರವಧನದ ಆಧಾರದ ಮೇಲೆ ಇಬ್ಬರು ಸೆಕ್ಯುರಿಟಿಗಳನ್ನು ನೇಮಕ ಮಾಡಿಕೊಳ್ಳಲು ಸಹ ನಿರ್ಣಯ ಕೈಗೊಳ್ಳಲಾಯಿತು.ಡಿಜಿಟಲ್ ಎಕ್ಸ್ ರೇ 1ಕ್ಕೆ ಈಗಿರುವ ಶುಲ್ಕ ₹100ನಿಂದ ₹125ಕ್ಕೆ ಹೆಚ್ಚಿಸಲು ಮತ್ತು ಸ್ಪೈನ್ ಎಕ್ಸ್ ರೇ ಗೆ ₹150 ನಿಗದಿಗೊಳಿಸಲು ತೀರ್ಮಾನ ಕೈಗೊಳ್ಳಲಾಯಿತು.
ಗರ್ಭಿಣಿಯರು, ಸಂತಾನಹರಣ ಶಸ್ಟ್ರ ಚಿಕಿತ್ಸಾ ಹರಣ ರೋಗಿಗಳು, ನಗು-ಮಗು ಫಲಾನುಭವಿಗಳು ಹೊರತು ಪಡಿಸಿ ಉಳಿದ ರೋಗಿಗಳನ್ನು ಬೇರೆ ಕಡೆ ಆ್ಯಂಬುಲೆನ್ಸ್‌ಗಳಲ್ಲಿ ಸಾಗಿಸಲು ಕಿ.ಮೀ.ಗೆ ಈಗಿರುವ ₹10ದಿಂದ ₹15ಗೆ ಹೆಚ್ಚಿಸಲು ಒಪ್ಪಿಗೆ ನೀಡಲಾಯಿತು.ಪಟ್ಟಣದಲ್ಲಿ ಪ್ರತ್ಯೇಕವಾಗಿ ತಾಯಿ ಮತ್ತು ಮಕ್ಕಳ 30 ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ನಿವೇಶನ ನೀಡುವ ಕುರಿತು ಚರ್ಚೆ ಮಾಡಿ ಶಾಸಕರು ನಿವೇಶನ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದರು.
44 ಹುದ್ದೆಗಳು ಖಾಲಿ:ಮುಖ್ಯವೈದ್ಯರು, ಪ್ರಸೂತಿ ತಜ್ಞರು, ಗಂಟಲು, ಕಿವಿ-ಮೂಗು ತಜ್ಞರು (ಇಎನ್ ಟಿ) ತುರ್ತು ಚಿಕಿತ್ಸಾ ವೈದ್ಯರು ಸೇರಿದಂತೆ ಆಸ್ಪತ್ರೆಯಲ್ಲಿ 44 ಹುದ್ದೆಗಳು ಖಾಲಿ ಇವೆ ಎಂದು ಪ್ರಭಾರಿ ಮುಖ್ಯ ವೈದ್ಯ ಡಾ.ಶಂಕರ ನಾಯ್ಕ ತಿಳಿಸಿದರು.
ಈಗಿರುವ 100 ಹಾಸಿಗೆ ಈ ಆಸ್ಪತ್ರೆಗೆ ಸಾಲುತ್ತಿಲ್ಲ ಎಂದು ಮಕ್ಕಳ ತಜ್ಞ ದತ್ತಾತ್ರೇಯ ಪಿಸೆ, ಡಾ.ರಾಜೇಶ, ಡಾ.ಶಂಕರನಾಯ್ಕ ಶಾಸಕರ ಗಮನಕ್ಕೆ ತಂದರು.ಬಡವರೇ ಹೆಚ್ಚಾಗಿ ಈ ಸಾರ್ವಜನಿಕ ಆಸ್ಪತ್ರೆಗೆ ಬರುತ್ತಿದ್ದು, ಹೊರಗಡೆ ಮೆಡಿಷನ್ ಗೆ ಬರೆದು ಕೊಡಬೇಡಿ, ಅಗತ್ಯ ಔಷದಿ ದಾಸ್ತಾನು ತರಿಸಿಕೊಳ್ಳಿ ಎಂದು ಶಾಸಕಿ ಎಂ.ಪಿ.ಲತಾ ಅವರು ವೈದ್ಯರಿಗೆ ಸೂಚಿಸಿದರು.
ಲೋಕೋಪಯೋಗಿ ಎಇಇ ಪ್ರಕಾಶ ಪಾಟೀಲ್, ಬೆಸ್ಕಾಂ ಎಇಇ ವಿರುಪಾಕ್ಷಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಹಾಲಸ್ವಾಮಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಎನ್.ಶಂಕರ, ಎಚ್.ಎಸ್.ಅಮಾನುಲ್ಲಾ, ತಿಪ್ಪೇಸ್ವಾಮಿ, ಕುಂಚೂರು ಇಬ್ರಾಹಿಂ, ಪುರಸಭಾ ಸದಸ್ಯ ಉದ್ದಾರ ಗಣೇಶ, ಎಲ್.ಮಂಜನಾಯ್ಕ , ಮುಖ್ಯ ವೈದ್ಯ ಡಾ.ಶಂಕರನಾಯ್ಕ, ವೈದ್ಯರಾದ ಡಾ.ರಾಜೇಶ, ಡಾ.ದತ್ತಾತ್ರೇಯ ಪಿಸೆ, ಡಾ.ಮಂಗಳಾ, ಡಾ.ರೇಣುಕಾ, ವೆಂಕಟೇಶ ಬಾಗಲರ್, ಮಲ್ಲಿಕಾರ್ಜುನ, ಮತ್ತೂರು ಬಸವರಾಜ ಇದ್ದರು.