ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕಾರ್ಪೊರೇಟ್ ವ್ಯವಸ್ಥೆಯಿಂದಾಗಿ ಅನ್ನದಾತ ರೈತನ ಬದುಕು ಅತಂತ್ರ ಸ್ಥಿತಿಯಾಗಿದೆ. ರೈತ ಮಕ್ಕಳಿಗೆ ಹೆಣ್ಣು ಕೊಡಲು ಹಿಂಜರಿಯುವ ಸ್ಥಿತಿ ಎದುರಾಗಿದೆ ಎಂದು ರೈತ ಸಂಘದ ಹಿರಿಯ ಮುಖಂಡ ಕೆ.ಆರ್.ಜಯರಾಂ ವಿಷಾದಿಸಿದರು.ಚಿಕ್ಕತರಹಳ್ಳಿಯಲ್ಲಿ ಆನೆಗೊಳ ಗ್ರಾಪಂ ವ್ಯಾಪ್ತಿಯ ರೈತ ಸಂಘ ಆಯೋಜಿಸಿದ್ದ ಕೃಷಿ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ಕೃಷಿ ಬಿಕ್ಕಟ್ಟು ಭೀತಿಯಂತೆ ಹೆಚ್ಚು ಕಾಡುತ್ತಿದೆ. ರೈತರಲ್ಲಿ ರಾಜಕೀಯ ಪ್ರಜ್ಞೆ ಬೇಕಿದೆ ಎಂದರು.
ಕೆ.ಎಸ್.ಪುಟ್ಟಣ್ಣಯ್ಯ, ಬಾಬುಗೌಡ ಪಾಟೀಲ್‌ರಂತಹ ರೈತ ನಾಯಕರು ರಾಜಕೀಯಕ್ಕೆ ಮತ್ತಷ್ಟು ಮಂದಿ ಬರಬೇಕಿದೆ. ಜಾತಿ, ಧರ್ಮದ ತಳಹದಿಯಲ್ಲಿ ಸರ್ಕಾರಗಳು ಬೇರೂರಿ ಸಾಮಾಜಿಕ, ಆರ್ಥಿಕ ಅಸ್ಥಿರತೆ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕೃಷಿ ಲಾಭದಾಯಕವಾಗದೆ ನಿತ್ಯ ಸಾವಿರಾರು ಮಂದಿ ನಗರಕ್ಕೆ ವಲಸೆ ಹೋಗುವಂತಾಗಿದೆ. ಕೃಷಿ ಹೊಸ ಉದಾರೀಕರಣ ನೀತಿಯಿಂದ ಕೃಷಿಗೆ ಬೆಲೆ ಸಿಗದೆ, ಕೂಲಿ, ಗೊಬ್ಬರ, ಕ್ರಿಮಿನಾಶಕ ಬೆಲೆ ದುಪ್ಪಟ್ಟು ಆಗಿ ರೈತ ನಷ್ಟದ ಸಂಕಷ್ಟದಲ್ಲಿದ್ದಾನೆ ಎಂದರು.ಸುಸ್ಥಿರ ಕೃಷಿ ಪದ್ಧತಿ, ಮೌಲ್ಯವರ್ಧನೆ ಕೃಷಿಯಿಂದ ಕೃಷಿ ಬಿಕ್ಕಟ್ಟು ಪರಿಹಾರ ಕಾಣಬಹುದು. ಭೂಮಿ ಒಡೆತನದಷ್ಟೆ ಆಹಾರ ಉತ್ಪಾದನೆ ಹೆಚ್ಚಳ ಸಮಸ್ಯೆ ಇದೆ. ಮುಕ್ತ ಮಾರಾಟಕ್ಕೆ ಸಂಘಟನೆ ಶಕ್ತಿ, ಸಹಕಾರಿ ತತ್ವದಲ್ಲಿ ಕೃಷಿ ಹುಟ್ಟುವಳಿ ಮಾರಾಟ ಮಾಡುವ ಪದ್ಧತಿ ಬೇಕಿದೆ ಎಂದರು.
ಕೆಎಂಎಫ್‌ನಂತಹ ಸಂಸ್ಥೆ ಸಹಭಾಗಿತ್ವ ಮುಕ್ತ ಮಾರಾಟ ವ್ಯವಸ್ಥೆ ಅವಶ್ಯವಿದೆ. ಕೃಷಿಗೆ ಆಧಾರಸ್ಥಂಭವಾಗಿ ರೈತ, ಭೂಮಿ, ನೀರು, ಹವಾಮಾನ, ಸಲಕರಣೆ, ಬೀಜ ಇದೆ. ಸ್ವಲ್ಪ ಅಲುಗಾಡಿದರೂ ಸಂಕಷ್ಟ ಕಟ್ಟಿಟ್ಟ ಬುತ್ತಿ. ಆಳುವವರಿಂದ ದೊಡ್ಡ ಜಮೀನ್ದಾರು, ಬಂಡವಾಳ ಶಾಹಿಗಳಿಂದ ರೈತರ ಸಾವಿರಾರು ಎಕರೆ ಭೂಮಿ ಹಕ್ಕು ಇಲ್ಲವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಆಲ್ ಇಂಡಿಯಾ ಕಿಸಾನ್ ಚಳವಳಿ ಗೇಣಿ ಭೂ ಹಕ್ಕಿಗೆ ಹೋರಾಟ ಮಾಡಿದಂತೆ ಹಲವು ರೈತ ಹೋರಾಟ ಚಳವಳಿ ನಿರಂತರವಾಗಿರುವುದು ಬೇಸರ ತರಿಸಿದೆ ಎಂದು ವಿಷಾದಿಸಿದರು.ರೈತ ಸಂಘದ ರಾಜ್ಯ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ನಂದಿನಿ ಜಯರಾಂ ಮಾತನಾಡಿ, ರೈತ ಸಾಮೂಹಿಕ ಆತ್ಮಹತ್ಯೆ ತುಳಿಯುವ ಹಾದಿಯಲ್ಲಿದ್ದಾನೆ. ಹಿಂದೆ ನೂರಾರು ಮಂದಿಗೆ ಊಟ ಹಾಕುತ್ತಿದ್ದ ರೈತ ಊಟಕ್ಕೆ ಯೋಚಿಸುವಂತಾಗಿದೆ. ಬಿಲ್ ಗ್ರೇಟ್ಸ್‌ನಂತಹ ಬಂಡವಾಳ ಶಾಹಿಗಳು ಸಾವಿರಾರು ಎಕರೆ ಕೃಷಿ ಭೂಮಿ ಖರೀದಿಸುವಂತಾಗಿ ರೈತ ಸಂಕಷ್ಟದಲ್ಲಿದ್ದಾನೆ. ರೈತ ಪ್ರಜ್ಞಾವಂತನಾಗಿ, ಕೃಷಿ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.
ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮಾತನಾಡಿ, ಕಂದಾಯ ವಸೂಲಾತಿ, ಸೊಸೈಟಿಗಳು ಸಾಲಕ್ಕೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ, ರೈತರ ಮರ್ಯಾದೆ ಕಳೆಯುವ ಕೆಲಸ ಹೆಚ್ಚುತ್ತಿದೆ ಎಂದು ಎಚ್ಚರಿಸಿದರು.ಇಂತಹ ಅನಿಷ್ಟತೆ ವಿರುದ್ಧ 1981ರಲ್ಲಿ ರೈತರ ಧ್ವನಿಯಾಗಿ ಚಳವಳಿಗಾಗಿ ಪ್ರೊ.ನಂಜುಂಡಸ್ವಾಮಿ ರೈತ ಸಂಘ ಹುಟ್ಟು ಹಾಕಿದರು. ಗುಂಡುರಾವ್ ಸರ್ಕಾರದ ಅವಧಿಯಲ್ಲಿ ಸುಮಾರು 110 ರೈತರು ಗೋಲಿಬಾರ್ ಆದರು. ಚಳವಳಿ ತೀವ್ರತೆಯಿಂದ ಸರ್ಕಾರ ಪತನವಾಗಿ ಜನತಾ ಪರಿವಾರ ಸರ್ಕಾರ ಉತ್ತಮ ಉದ್ದೇಶದಿಂದ ಬಂದಿತು. ನಂತರ ಎಲ್ಲ ಸರ್ಕಾರದ ಹಣೆ ಬರಹ ಒಂದೇ ಆಯಿತು ಎಂದರು.
ಕಾವೇರಿ ಗ್ರಾಮೀಣ ಬ್ಯಾಂಕ್ ಮಾಜಿ ವ್ಯವಸ್ಥಾಪಕ ಎಂ.ನಾಗರಾಜೇಗೌಡ ಮಾತನಾಡಿ, 2 ಲಕ್ಷ ರು.ವರೆಗೆ ರೈತರು ಯಾವುದೇ ಆಧಾರ ನೀಡದೆ ಸಾಲ ಪಡೆಯಬಹುದು. ಶೈಕ್ಷಣಿಕ ಸಾಲ ಪಡೆಯಲು ಗ್ಯಾರಂಟಿದಾರರ ಆಧಾರ ಬೇಡ. ಸಣ್ಣಪುಟ್ಟ ಕಿರುಸಾಲ ಪಡೆಯಲು ಆಧಾರದಾರರ ಅವಶ್ಯಕತೆ ಇಲ್ಲ. ಬ್ಯಾಂಕ್ ವ್ಯವಸ್ಥಾಪಕರು ಮಾಹಿತಿ ನೀಡದೆ ಸಮಸ್ಯೆ ಹೆಚ್ಚುತ್ತಿದೆ. ಮೈಕ್ರೋ ಫೈನಾನ್ಸ್ ಬಿಟ್ಟು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಿರಿ ಎಂದರು.ಈ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗಾನಹಳ್ಳಿ ಪುಟ್ಟೇಗೌಡ, ಮರುವನಹಳ್ಳಿ ಶಂಕರ್, ಕೆಂಪೇಗೌಡ, ಸಿ.ಎನ್. ಮಂಜಪ್ಪ, ಮಂಜೇಗೌಡ, ಶಿವಲಿಂಗೇಗೌಡ, ಸಮರ್ಥ, ಸತೀಶ್, ಸುರೇಶ್, ರಾಮು, ಗೀತಾ ಇದ್ದರು.