ಬೀಳಗಿ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ಬರುವ ಬೀಳಗಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗದ್ದನಕೇರಿ ಕ್ರಾಸ್ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕಲಾದಗಿ
ಈ ಭಾಗದ ಮಹತ್ವಾಕಾಂಕ್ಷೆ ಯೋಜನೆಗಳಾಧ ಕಾಡರಕೊಪ್ಪ, ಅನವಾಲ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಭೂಮಿಪೂಜೆ ನೆರವೇರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸುತ್ತಿರುವುದು ಸಂತಸದ ವಿಷಯವಾಗಿದ್ದು, ಸಾವಿರಾರು ಎಕರೆ ಭೂಮಿ ಬಂಗಾರವಾಗಿಸುತ್ತಿರುವ ಸಿಎಂಗೆ ಕ್ಷೇತ್ರದ ಜನತೆ ಸೇರಿ ಕೃತಜ್ಞತೆ ಸಲ್ಲಿಸೋಣ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.ಬೀಳಗಿ ಮತಕ್ಷೇತ್ರದ ಹೂಲಗೇರಿಗೆ ಡಿ.1ರಂದು ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆ ಶನಿವಾರ ಸಮೀಪದ ಗದ್ದನಕೇರಿ ಕ್ರಾಸ್ನಲ್ಲಿರುವ ಲಡ್ಡುಮುತ್ಯಾ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅನವಾಲ ಏತ ನೀರಾವರಿ ಯೋಜನೆ ₹411 ಕೋಟಿ ಹಾಗೂ ಕಾಡರಕೊಪ್ಪ ಏತ ನೀರಾವರಿ ಯೋಜನೆ ₹265 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಬಾದಾಮಿ, ಬಾಗಲಕೋಟೆ ತಾಲೂಕಿನ ಅಂದಾಜು 45 ಸಾವಿರ ಎಕರೆ ಪ್ರದೇಶ ನೀರಾವರಿಯಾಗಲಿದೆ ಎಂದರು.
ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ₹474 ಕೋಟಿ ಮಂಜೂರು ಮಾಡಿದ್ದಾರೆ.ಈ ಅವಧಿಯಲ್ಲಿಯೇ ಬೀಳಗಿ ಮತಕ್ಷೇತ್ರದ ವಿವಿಧ ಯೋಜನೆಗಳಿಗೆ ಮುಖ್ಯವಾಗಿ ನೀರಾವರಿ ಯೋಜನೆಗಳಿಗೆ ನೂರಾರು ಕೋಟಿ ಮಂಜೂರು ಮಾಡಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಬೊಬ್ಬೆ ಹೊಡೆಯುತ್ತಿರುವುದು ಸುಳ್ಳು ಎಂಬುದಕ್ಕೆ ಸಾಕಾರಗೊಂಡಿರುವ, ಗೊಳ್ಳುತ್ತಿರುವ ನಮ್ಮ ಯೋಜನೆಗಳೇ ಸಾಕ್ಷಿ ಎಂದು ಹೇಳಿದರು.ಮಾಜಿ ಸಚಿವ ಅಜಯಕುಮಾರ ಸರನಾಯಕ ಮಾತನಾಡಿ, ಬಸವಪ್ರಭು ಸರನಾಡಗೌಡ ಅವರು ಮುಖ್ಯಮಂತ್ರಿಯಾದ ನಂತರ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಅಭಿವೃದ್ಧಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿಗಳಿಗೆ ಮತ್ತು ಶಾಸಕ ಜೆ.ಟಿ.ಪಾಟೀಲ ಅವರಿಗೆ ಶಕ್ತಿ ನೀಡುವ ಕೆಲಸ ಮಾಡಬೇಕಾಗಿದೆ ಎಂದರು.
ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ, ಹಿರಿಯ ಮುಖಂಡ ಎಂ.ಎಲ್.ಕೆಂಪಲಿಂಗಣ್ಣನವರ, ಬೀಳಗಿ ಮತ್ತು ಕಲಾದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಬಸವರಾಜ ಸಂಶಿ, ಹನುಮಂತ ಕಾಖಂಡಕಿ ವೇದಿಕೆಯಲ್ಲಿದ್ದರು.ಬೀಳಗಿ ಮತಕ್ಷೇತ್ರದ ಬಾಗಲಕೋಟೆ, ಬದಾಮಿ ಹಾಗೂ ಬೀಳಗಿ ತಾಲೂಕಿನ ಅನೇಕ ಊರುಗಳ ಮುಖಂಡರು ಸಭೆಯಲ್ಲಿದ್ದರು.