ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಜ್ಯ ಸರ್ಕಾರ ಸಂಪುಟದಲ್ಲಿ ಮತ್ತೊಮ್ಮೆ ಸಚಿವ ಸ್ಥಾನ ಪಡೆದ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಅಭೂತಪೂರ್ವ ಸ್ವಾಗತ ಕೋರಲು ನಿರ್ಧರಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ತಿಳಿಸಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದ ಶಾಸಕ ಎನ್.ಚಲುವರಾಯಸ್ವಾಮಿ ಅವರು ನಾಲ್ಕನೇ ಬಾರಿಗೆ ಸಚಿವರಾಗಿರುವುದು ತಾಲೂಕು ಹಾಗೂ ಜಿಲ್ಲೆಯ ಜನರಿಗೆ ಅತ್ಯಂತ ಹೆಮ್ಮೆಯ ವಿಷಯ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಎನ್.ಚಲುವರಾಯಸ್ವಾಮಿ ಮಂತ್ರಿಯಾಗಿರುವುದು ಅವರ ದೀರ್ಘ ರಾಜಕೀಯ ಅನುಭವ, ಆಡಳಿತ ದಕ್ಷತೆ ಹಾಗೂ ಜನಪರ ಕಾರ್ಯವೈಖರಿಗೆ ದೊರೆತ ಗೌರವವಾಗಿದೆ ಎಂದರು.ಆ.10ರ ಸೋಮವಾರ ಬೆಳಗ್ಗೆ ತಾಲೂಕಿಗೆ ಆಗಮಿಸುತ್ತಿರುವ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ ಕೋರಿ ಬರಮಾಡಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಬೇಕು. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್ ಕೇಂದ್ರದಿಂದ ನಾಗಮಂಗಲ ಪಟ್ಟಣದ ಟಿ.ಮರಿಯಪ್ಪ ವೃತ್ತದವರೆಗೆ 2000ಕ್ಕೂ ಹೆಚ್ಚು ಬೈಕ್‌ಗಳು ಹಾಗೂ 300ಕ್ಕೂ ಹೆಚ್ಚು ಕಾರುಗಳ ರ್‍ಯಾಲಿಯೊಂದಿಗೆ ತೆರೆದ ವಾಹನದಲ್ಲಿ ಸಚಿವರನ್ನು ಮೆರವಣಿಗೆ ಮೂಲಕ ಕರೆತರಲಾಗುವುದು ಎಂದರು.
ನೆಲ್ಲಿಗೆರೆ ಕ್ರಾಸ್‌ನಿಂದ ಪಟ್ಟಣದ ವರೆಗೆ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಿಗುವ ಎಲ್ಲಾ ಗ್ರಾಮಗಳಲ್ಲಿ ಅಭಿಮಾನಿಗಳು ಕಾರ್ಯಕರ್ತರು ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತ ಕೋರಲಿದ್ದಾರೆ. ನಂತರ ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಸಚಿವರು ಮಾತನಾಡಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ 10ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾಕ್ಷಿಯಾಗಲಿದ್ದಾರೆ ಎಂದರು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಮಾತನಾಡಿ, ಜನಪರ ಆಡಳಿತ, ಅಭಿವೃದ್ಧಿಪರ ಚಿಂತನೆ, ಸಂಘಟನಾ ಸಾಮರ್ಥ್ಯ ಹಾಗೂ ಆಡಳಿತ ದಕ್ಷತೆಯನ್ನು ಗುರುತಿಸಿ ಪಕ್ಷದ ವರಿಷ್ಠರು ತಂದೆಯವರಿಗೆ ಮತ್ತೊಮ್ಮೆ ಸಚಿವ ಸಂಪುಟದಲ್ಲಿ ಮಹತ್ವದ ಜವಾಬ್ದಾರಿ ನೀಡಿದ್ದಾರೆ ಎಂದರು.
ಈ ಮೊದಲು ಕೃಷಿ ಸಚಿವರಾಗಿ ರಾಜ್ಯದ ರೈತರ ಪರವಾಗಿ ಕೈಗೊಂಡ ಅನೇಕ ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಅವರಿಗೆ ರಾಜ್ಯಾದ್ಯಂತ ಉತ್ತಮ ಹೆಸರು ತಂದುಕೊಟ್ಟಿದೆ. ಈ ಕಾರ್ಯಕ್ರಮವು ನಾಗಮಂಗಲದ ಐಕ್ಯತೆ, ಕಾಂಗ್ರೆಸ್ ಸಂಘಟನೆಯ ಬಲ ಮತ್ತು ಕಾರ್ಯಕರ್ತರ ಉತ್ಸಾಹವನ್ನು ಇಡೀ ರಾಜ್ಯಕ್ಕೆ ಪರಿಚಯಿಸುವಂತಿರಬೇಕು ಎಂದು ಕರೆ ನೀಡಿದರು.ಸಭೆಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಮುಖಂಡ ಸುನಿಲ್ ಲಕ್ಷ್ಮೀಕಾಂತ್, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಬಿ.ರಾಜೇಗೌಡ, ಎಂ.ಪ್ರಸನ್ನ, ತಿಮ್ಮರಾಯಿಗೌಡ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಇದ್ದರು.